Advertisement

ಕಾವೇರಿ ಜಲ ವಿವಾದ: 30ರಂದು ಸರ್ವಪಕ್ಷ ಸಭೆ

06:30 AM Jun 28, 2018 | Team Udayavani |

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜೂ. 30ರಂದು ವಿಧಾನ ಮಂಡಲದ ಉಭಯ ಸದನಗಳ ಮುಖಂಡರು, ಸಂಸದರು, ಕಾವೇರಿ ಜಲಾನಯನ ಪ್ರದೇಶದ ಶಾಸಕರ ಸಭೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕರೆದಿದ್ದಾರೆ.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಸಭೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನೀರು ನಿಯಂತ್ರಣಾ ಸಮಿತಿ ರಚನೆಯಿಂದ ರಾಜ್ಯಕ್ಕೆ ಆಗುವ ತೊಂದರೆ ಮತ್ತು ಅವುಗಳನ್ನು ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದ್ದು, ಇದರ ವಿರುದಟಛಿ ಕಾನೂನು ಹೋರಾಟ ಮುಂದುವರಿಸಬೇಕೇ, ಬೇಡವೇ ಎಂಬ ಕುರಿತೂ ಸಮಾಲೋಚನೆ ನಡೆಯಲಿದೆ. ಅಲ್ಲದೆ, ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆವ ಬಗ್ಗೆಯೂ ಚರ್ಚಿಸಲಾಗುತ್ತದೆ.

ಈ ಮಧ್ಯೆ ಜುಲೈ 2ರಂದು ದೆಹಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ನಡೆಯಲಿದ್ದು, ರಾಜ್ಯದಿಂದ ಸದಸ್ಯರಾಗಿ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಪ್ರಾಧಿಕಾರದ
ಸಭೆಯಲ್ಲಿ ಭಾಗವಹಿಸಲಿದ್ದಾರೆ.

30ರಂದು ನಡೆಯುವ ಸಭೆಯಲ್ಲಿ ರಾಜ್ಯದ ಅಭಿಪ್ರಾಯಗಳನ್ನು ಅಂತಿಮಗೊಳಿಸಿ ಅದನ್ನು ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಮೂಲಕ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ಹೇಳಿವೆ.

ಸಭೆಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಪ್ರತಿಪಕ್ಷಗಳ ಮುಖಂಡರು, ಕೇಂದ್ರ ಸಚಿವರು ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸುವ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು, ಕಾವೇರಿ ಜಲಾನಯನ ವ್ಯಾಪ್ತಿಯ ಎಲ್ಲಾ
ಶಾಸಕರು, ನೀರಾವರಿ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಕೀಲರು ಮತ್ತು ಅಡ್ವೋಕೇಟ್‌ ಜನರಲ್‌ ಪಾಲ್ಗೊಂಡು ಅಭಿಪ್ರಾಯಗಳನ್ನು ನೀಡಲಿದ್ದಾರೆ. ಆ ಮೂಲಕ ಸರ್ವಸಮ್ಮತ ಅಭಿಪ್ರಾಯದೊಂದಿಗೆ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next