Advertisement

Cauvery: ಎರಡೆರಡು ಬಂದ್‌ ಸರಿಯಾದ ನಿರ್ಧಾರವಲ್ಲ

11:23 PM Sep 25, 2023 | Team Udayavani |

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಒಂದೇ ವಾರದಲ್ಲಿ ಎರಡು ಬಂದ್‌ಗಳು ಎದುರಾಗಿವೆ. ಸೆ.26ರಂದು ಬೆಂಗಳೂರು ಬಂದ್‌ಗೆ ಕರೆಕೊಟ್ಟಿದ್ದರೆ, ಸೆ.29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಕೇವಲ 4 ದಿನಗಳ ಅಂತರದಲ್ಲಿ ಎರಡು ಬಂದ್‌ಗಳು ಎದುರಾಗಿದ್ದು, ಸಣ್ಣಪುಟ್ಟ ವ್ಯಾಪಾರಗಳನ್ನು ನಂಬಿ ಬದುಕುವವರಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಾಗಿವೆ.

Advertisement

ಕಾವೇರಿ ನಿರ್ವಹಣ ಪ್ರಾಧಿಕಾರದ ಆದೇಶ ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಬಳಿಕ ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಬಂದ್‌ ಆಚರಿಸಲಾಗಿದೆ. ಆಗ ಮಂಡ್ಯ ಜಿಲ್ಲೆಯ ರೈತ ಸಂಘಟನೆಗಳು ಒಟ್ಟಾಗಿ ಸೇರಿ ಬಂದ್‌ ಆಚರಿಸಿವೆ. ಈಗ ಬೆಂಗಳೂರು ಬಂದ್‌ ಸರದಿ. ರೈತ ಮುಖಂಡ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ಈ ಬಂದ್‌ಗೆ ಕರೆ ನೀಡಲಾಗಿದ್ದು, ಕೆಲವು ಕನ್ನಡ ಸಂಘಟನೆಗಳು ಸೇರಿದಂತೆ ನೂರಾರು ಸಂಘಟನೆಗಳ ಬೆಂಬಲವಿದೆ. ಸೆ.29ರಂದು ವಾಟಾಳ್‌ ನಾಗರಾಜ್‌ ಸೇರಿದಂತೆ ಇತರ ಕನ್ನಡಪರ ಸಂಘಟನೆಗಳು ಸೇರಿ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

ಕಾವೇರಿ ವಿಚಾರದಲ್ಲಿ ಹೋರಾಟ ನಡೆಸುವವರಿಗೆ ಯಾರೂ ಅಡ್ಡಿ ಮಾಡುವಂತಿಲ್ಲ. ಸರಕಾರವೂ ಪ್ರತಿಭಟನೆಗಳಿಗೆ ಅಡ್ಡಿ ಮಾಡುವುದಿಲ್ಲ. ಬಂದ್‌ ಎಂದ ಕೂಡಲೇ ಬೇರೆ ಬೇರೆ ಲೆಕ್ಕಾಚಾರದಲ್ಲಿ ಯೋಚನೆ ಮಾಡುತ್ತವೆ. ಆದರೂ ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ಬಂದ್‌ ಆಚರಣೆ ಮಾಡುವುದನ್ನೂ ಕೆಲವೊಮ್ಮೆ ಸರಕಾರಗಳೂ ವಿರೋಧ ಮಾಡುವುದಿಲ್ಲ. ಇದಕ್ಕೆ ಕಾರಣ, ಇಂಥ ಹೋರಾಟಗಳಿಂದ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಸಿಗಬಹುದು ಎಂಬ ಸದುದ್ದೇಶವೂ ಇರುತ್ತದೆ.

ಈಗ ಕಾವೇರಿ ವಿಚಾರದಲ್ಲಿ ನಡೆಯುತ್ತಿರುವ ಎರಡು ಬಂದ್‌ಗಳು ಸದುದ್ದೇಶದ ಅರ್ಥವನ್ನೇ ಕಡಿಮೆ ಮಾಡುವಂತಿವೆ. ಈಗ ಸಾರ್ವಜನಿಕವಾಗಿ ಎದ್ದಿರುವ ಪ್ರಶ್ನೆಯೂ ಅದೇ ಆಗಿದೆ. ಏಕೆಂದರೆ ಬಂದ್‌ ಆಚರಿಸುವುದರಿಂದ ಬೆಂಗಳೂರಿನ ಎಲ್ಲ ವ್ಯಾಪಾರ ಚಟುವಟಿಕೆಗಳು ಹೆಚ್ಚುಕಡಿಮೆ ನಿಲ್ಲುತ್ತವೆ. ಆಟೋ ಸವಾರರು, ಕ್ಯಾಬ್‌ ಚಾಲಕರು, ಬೀದಿ ಬದಿ ಅಂಗಡಿ ನಡೆಸುವವರು, ಸಣ್ಣಪುಟ್ಟ ಅಂಗಡಿ ಇರಿಸಿಕೊಂಡವರು, ಕಚೇರಿಗೆ ಹೋಗುವವರು, ಹೊಟೆಧೀಲ್‌ಗಳು, ಶಾಲಾ ಕಾಲೇಜುಗಳು ಎಲ್ಲರಿಗೂ ಸಮಸ್ಯೆಯಾಗುತ್ತದೆ. ಆದರೆ ಕಾವೇರಿ ವಿಚಾರದಲ್ಲಿ ಒಂದು ದಿನ ಸಮಸ್ಯೆಯಾದರೂ ಅಡ್ಡಿ ಇಲ್ಲ ಎಂಬ ಕಾರಣಕ್ಕೆ ಈ ವಲಯಗಳಲ್ಲಿ ಇರುವವರು ಬಂದ್‌ಗೆ ಬೆಂಬಲ ನೀಡಿದ್ದರು. ಈಗ ಮಂಗಳವಾರವೂ ಬಂದ್‌ ಮಾಡಿ, ಮತ್ತೆ ಶುಕ್ರವಾರವೂ ಬಂದ್‌ ಮಾಡಿದರೆ, ಒಂದೇ ವಾರ ಎರಡು ಬಂದ್‌ಗಳನ್ನು ತಡೆದುಕೊಳ್ಳುವುದು ಹೇಗೆ ಎಂಬುದು ಬಹುತೇಕರ ಪ್ರಶ್ನೆಯಾಗಿದೆ.

ಇದಕ್ಕೆ ಬದಲಾಗಿ, ಮಂಗಳವಾರ ಮತ್ತು ಶುಕ್ರವಾರ ಬಂದ್‌ ಕರೆದಿರುವವರು ಒಮ್ಮೆ ಕುಳಿತು ಚರ್ಚಿಸಿ ಏಕಕಾಲದಲ್ಲಿ ಬೆಂಗಳೂರು ಅಥವಾ ಕರ್ನಾಟಕ ಬಂದ್‌ ಆಚರಿಸಬಹುದಾಗಿತ್ತು. ಎಲ್ಲರೂ ಜತೆಗೂಡಿ ಹೋ ರಾಟ ನಡೆಸಿದಾಗ ಅದಕ್ಕೆ ಸಿಗುವ ಪ್ರಾಮುಖ್ಯದ ಅಂಶವನ್ನೂ ಮನಗಾಣಬೇಕಾಗಿತ್ತು. ಈಗ ಪ್ರತಿಷ್ಠೆಗಾಗಿ ಎರಡು ಬಣಗಳು ಸೇರಿ ಪ್ರತ್ಯೇಕವಾಗಿ ಬಂದ್‌ ಕರೆದಿವೆ ಎಂಬುದು ಜನರಲ್ಲಿ ಮೂಡಿದೆ. ಅಷ್ಟೇ ಅಲ್ಲ, ಕಾವೇರಿ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷಗಳೇ ಒಂದಾಗಿ ಕೆಲಸ ಮಾಡುವಂಥ ಸಮಯದಲ್ಲಿ ಹೋರಾಟ ನಡೆಸುವ ಬಣಗಳು ಒಟ್ಟಿಗೆ ಸೇರಿ ಬಂದ್‌ ಆಚರಣೆ ಮಾಡಬೇಕಾಗಿತ್ತು. ಆಗ ಸರಕಾರಕ್ಕೂ ಬಿಸಿ ಮುಟ್ಟಿಸಿದ ಹಾಗೆ ಆಗುತ್ತಿತ್ತು, ಆಗ ನಡೆಸುವ ಬಂದ್‌ಗೂ ಒಂದು ಗಾಂಭೀರ್ಯ ಬರುತ್ತಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next