Advertisement

ಇಂದಿನಿಂದ ಕಾವೇರಿ ಮೂಲ ಅರ್ಜಿ ವಿಚಾರಣೆ 

03:45 AM Jul 11, 2017 | Team Udayavani |

ಬೆಂಗಳೂರು: ಕಾವೇರಿ ನ್ಯಾಯಮಂಡಳಿ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಮತ್ತು
ಕರ್ನಾಟಕ ಸಲ್ಲಿಸಿರುವ ಅರ್ಜಿ ಇಂದಿನಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಕಾವೇರಿ ನ್ಯಾಯಮಂಡಳಿ
ಕಾವೇರಿ ಕೊಳ್ಳದ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಪುದುಚೆರಿ ಮತ್ತು ಕೇರಳ ರಾಜ್ಯಗಳಿಗೆ ನೀರಿನ ಹಂಚಿಕೆ ಮಾಡಿ ಆದೇಶ ಮಾಡಿದೆ. ರಾಜ್ಯದ ಪರ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್‌ ನೇತೃತ್ವದ ತಂಡ ಸುಪ್ರೀಂ ಕೊರ್ಟ್‌ ನಲ್ಲಿ ವಾದ ಮಾಡಲಿದೆ.

Advertisement

ನ್ಯಾಯಮಂಡಳಿಯ ಆದೇಶದ ಪ್ರಕಾರ ಕಾವೇರಿ ನದಿಯಲ್ಲಿ ಒಟ್ಟು 740 ಟಿಎಂಸಿ ನೀರು ಲಭ್ಯವಾಗಲಿದ್ದು, ಅದರಲ್ಲಿ ತಮಿಳು ನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270, ಕೇರಳಕ್ಕೆ 30 ಟಿಎಂಸಿ, ಪುದುಚೆರಿಗೆ 7 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ಮಾಡಿದೆ. ನ್ಯಾಯ ಮಂಡಳಿಯ ಆದೇಶದ ಪ್ರಕಾರ ಕರ್ನಾಟಕ ತಮಿಳುನಾಡಿಗೆ ಪ್ರತಿ ವರ್ಷ 192 ಟಿಎಂಸಿ ನೀರು ಬಿಡಬೇಕು. ನ್ಯಾಯಮಂಡಳಿಯ ಈ ಆದೇಶವನ್ನೇ ರಾಜ್ಯ ಸರ್ಕಾರ ಪ್ರಶ್ನೆ ಮಾಡಿದೆ. ಅಲ್ಲದೇ ಒಟ್ಟು ಲಭ್ಯವಿರುವ ನೀರಿನಲ್ಲಿ ಕರ್ನಾಟಕಕ್ಕೆ ಕಡಿಮೆ ನೀಡಲಾಗಿದೆ. ಸಾಮಾನ್ಯ ಮಳೆ ವರ್ಷದಲ್ಲಿ 192 ಟಿಎಂಸಿ ನೀರು
ಬಿಡುವಂತೆ ಆದೇಶಿಸಲಾಗಿದೆ. ಮಳೆ ಕೊರತೆಯಾದರೆ, ಎಷ್ಟು ನೀರು ಬಿಡಬೇಕು ಎನ್ನುವ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಅಲ್ಲದೇ ಕಾವೇರಿ ಕೊಳ್ಳದ ಭಾಗದಲ್ಲಿ ಬೆಂಗಳೂರು ಕೂಡ ಸೇರಿರುವುದರಿಂದ ಬೆಂಗಳೂರಿಗೆ ಕುಡಿಯುವ ನೀರಿನ ಹಂಚಿಕೆಯಲ್ಲಿಯೂ ನ್ಯಾಯ ಒದಗಿಸಿಲ್ಲ. ಕೇವಲ ಬೆಂಗಳೂರಿನ ಒಂದು ಭಾಗವನ್ನು ಮಾತ್ರ ನ್ಯಾಯಮಂಡಳಿ
ಆದೇಶದಲ್ಲಿ ಪರಿಗಣಿಸಲಾಗಿದೆ. ಅದನ್ನೂ ಮರು ಪರಿಶೀಲನೆ ಮಾಡಬೇಕು ಎನ್ನು ವುದು ರಾಜ್ಯ ಸರ್ಕಾರದ ವಾದ.

ನೀರು ಬಿಡಿಸುವಂತೆ ತಮಿಳುನಾಡು ಅರ್ಜಿ: ತಮಿಳು ನಾಡು ಕೂಡ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು
ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಕಾವೇರಿ ಕೊಳ್ಳದಲ್ಲಿ ತಮಿಳುನಾಡಿನಲ್ಲಿ ನೀರಾವರಿ ಪ್ರದೇಶ ಹೆಚ್ಚು ಇರುವುದಿರಂದ ತಮಿಳು ನಾಡಿಗೆ ಹಂಚಿಕೆ ಮಾಡಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ವಾದ ಮಾಡುತ್ತಿದೆ. ಅಲ್ಲದೇ ಪ್ರತಿ ವರ್ಷದಂತೆ ಈ ವರ್ಷವೂ ಜೂನ್‌ನಲ್ಲಿ ಕರ್ನಾಟಕ ಸರ್ಕಾರ ನ್ಯಾಯ ಮಂಡಳಿ ಆದೇಶದಂತೆ 10 ಟಿಎಂಸಿ ನೀರು ಬಿಟ್ಟಿಲ್ಲ ಎಂದು ಮತ್ತೂಂದು ಅರ್ಜಿಯನ್ನೂ ಹಾಕಿದೆ.

ಮೂಲ ಅರ್ಜಿಯ ವಿಚಾರಣೆ ಜೊತೆಗೆ ತಮಿಳುನಾಡು ಹಾಕಿರುವ ಹೊಸ ಅರ್ಜಿಯೂ ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ಅದಕ್ಕೂ ರಾಜ್ಯ ವಕೀಲರ ತಂಡಕ್ಕೆ ಸರ್ಕಾರ ಎಲ್ಲ ಮಾಹಿತಿ ನೀಡಿದೆ. ಸದ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ
ಮಳೆಯ ಪ್ರಮಾಣ, 4 ಜಲಾಶಯಗಳ ನೀರಿನ ಮಟ್ಟ, ರೈತರ ಪರಿಸ್ಥಿತಿ ಹಾಗೂ ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ ಕುಡಿಯುವ ನೀರಿನ ಅಗತ್ಯತೆಯ ಬಗ್ಗೆ ಸಂಪೂರ್ಣ ಮಾಹಿತಿ ಸರ್ಕಾರ ವಕೀಲರ ತಂಡಕ್ಕೆ ಒದಗಿಸಿದೆ ಎಂದು ಜಲ ಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.  

ಕಬಿನಿ ನಾಲಾ ಕಚೇರಿಗೆ ಮುತ್ತಿಗೆ

Advertisement

ತಿ.ನರಸೀಪುರ/ಮದ್ದೂರು: ಕೆಆರ್‌ಎಸ್‌ನಿಂದ ತಮಿಳು ನಾಡಿಗೆ ಬಿಟ್ಟಿರುವ ನೀರನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಕಾವೇರಿ ಕೊಳ್ಳದ ಪ್ರದೇಶದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಕಬ್ಬುಬೆಳೆಗಾರರ ಸಂಘದ ಸದಸ್ಯರು ಸೋಮವಾರ ಕಬಿನಿ ನಾಲಾ ಕಚೇರಿಗೆ ಮುತ್ತಿಗೆ ಹಾಕಿದರೇ, ಮದ್ದೂರಲ್ಲಿ ಕನ್ನಡ ಜನಪರ ವೇದಿಕೆಯ ಕಾರ್ಯಕರ್ತರ ಅಹೋರಾತ್ರಿ ಧರಣಿ ನಾಲ್ಕನೇ ಪೂರೈಸಿದೆ. ತಿ.ನರಸೀಪುರದಲ್ಲಿ ಪಟ್ಟಣದ ಪಿಡಬ್ಲೂéಡಿ ಅತಿಥಿ ಗೃಹದಲ್ಲಿ ಜಮಾವಣೆಗೊಂಡ ರಾಜ್ಯ ಕಬ್ಬುಬೆಳೆ ಗಾರರ ಸಂಘದ ಸದಸ್ಯರು, ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾವೇರಿ, ಕಪಿಲಾ ಜೋಡಿ
ರಸ್ತೆ, ಖಾಸಗಿ ಬಸ್‌ ನಿಲ್ದಾಣ, ಕಾಲೇಜು ರಸ್ತೆ ಮೂಲಕ ಮೆರವಣಿಗೆ ಸಾಗಿ ಕಬಿನಿ ನಾಲಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವೇಳೆ ನೀರು ನಿಲ್ಲಿಸುವಂತೆ ಒತ್ತಾಯಿಸಿ ಕಬಿನಿ ಎಇಇ ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಇನ್ನು ಮದ್ದೂರು ಕೆರೆಯಂಗಳದಲ್ಲಿ ಕನ್ನಡ ಜನಪರ ವೇದಿಕೆಯ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನ ಪೂರೈಸಿದ್ದು ಸೋಮವಾರ ಪ್ರತಿಭಟನಾ ಸ್ಥಳಕ್ಕೆ ನಂಜಾವದೂತ ಶ್ರೀಗಳು ಭೇಟಿ ನೀಡಿ ಧರಣಿನಿರತರಿಗೆ ಬೆಂಬಲ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next