Advertisement

Cauvery issue; ಎಲ್ಲ ಪಕ್ಷದವರ ಜೊತೆ ಚರ್ಚಿಸಿ ನೀರು ಬಿಡಬೇಕಿತ್ತು: ಕೆಎಸ್ ಈಶ್ವರಪ್ಪ

12:06 PM Sep 30, 2023 | Team Udayavani |

ಶಿವಮೊಗ್ಗ: ಚೆನ್ನಾಗಿ ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ದಿ ಬಂದಂತೆ ಕಾಣುತ್ತಿದೆ. ಕಾವೇರಿ ನೀರು ಕಳ್ಳತನದಿಂದ ಬಿಡದಿರುತ್ತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕಳ್ಳತನದಿಂದ ನೀರು ಬಿಟ್ಟಿರುವುದೇ ದೊಡ್ಡ ತಪ್ಪು. ಆಗ ಇವರನ್ನು ಕಳ್ಳ ಎಂದು ಹೇಳಲಾಗಿತ್ತು. ಎಲ್ಲರ ಜೊತೆ ಮಾತುಕತೆ ನಡೆಸಿದ್ದರೆ ರಾಜ್ಯದ ಜನರು ಅವರ ಜತೆ ಇರುತ್ತಿದ್ದರು ಎಂದು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಾಲಿನ್ ಎಂಬ ಪುಣ್ಯಾತ್ಮನಿಗೆ ಒಪ್ಪಿಸಲು, ಇಂಡಿಯಾ ಸಂಸ್ಥೆ ಓಲೈಸಲು ಡಿ.ಕೆ. ಶಿವಕುಮಾರ್ ನೀರು ಬಿಟ್ಟಿದ್ದಾರೆ. ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ. ಈಗ ವಕೀಲರು, ತಜ್ಞರು ಹಾಗೂ ಹಲವರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಮೊದಲು ಕಳ್ಳ ಎಂದೆ, ಈಗ ದಡ್ಡರು ಎನ್ನಬೇಕಾಗಿದೆ ಎಂದರು.

ನಾವು ಜನರ ಜೊತೆ ಇದ್ದೆವೆ ಎಂದು ಈಗ ಹೇಳುತ್ತಿದ್ದಾರೆ. ಇದಕ್ಕಿಂತ ಅನ್ಯಾಯ ಮತ್ತೇನಿದೆ. ರೈತರು, ವಕೀಲರು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದೆ ಮುಖ್ಯಮಂತ್ರಿಗಳು ನೀರು ಬಿಟ್ಟಿದ್ದ ಉದಾಹರಣೆಯಿದೆ. ಇವರಿಬ್ಬರು ರಾಜ್ಯದ ಜನರ ಕ್ಷಮೆ ಕೋರಬೇಕು. ನೀರೆಲ್ಲಾ ಬಿಟ್ಟಾದ ಮೇಲೆ ಈಗ ಸಭೆ ನಡೆಸಿ ಉಪಯೋಗವೇನು? ಎಲ್ಲವೂ ಸಂವಿಧಾನ ಬದ್ಧವಾಗಿ ಆಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಚರ್ಚೆ ನಡೆಸದೆ ನೀರು ಬಿಟ್ಟಿದ್ದೆ ತಪ್ಪು. ಎಲ್ಲ ಪಕ್ಷದವರ ಜೊತೆ ಚರ್ಚಿಸಿ ನೀರು ಬಿಡಬೇಕಿತ್ತು ಎಂದರು.

ಎಲ್ಲದಕ್ಕೂ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂಬುದು ಕೂಡ ತಪ್ಪು. ಬರ ಕೂಡ ಇದ್ದು, ರಾಜ್ಯಕ್ಕೆ ಎಷ್ಟು ನೀರು ಬೇಕು ಎಂದು ಸರ್ವೆ ಮಾಡಿಲ್ಲ. ಇದು ನೂರಾರು ವರ್ಷಗಳ ಸಮಸ್ಯೆ. ಚಲನಚಿತ್ರ ನಟರು ಬರಲಿಲ್ಲ ಎಂದು ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ನೀವು ನೀರು ಬಿಟ್ಟು ಬೇರೆಯವರ ಮೇಲೆ ಬೊಟ್ಟು ತೋರಿಸುವ ಕೆಲಸ ಮಾಡುತ್ತಿದ್ದಾರೆ. ಜನ ಆಯ್ಕೆ ಮಾಡಿದ ಸರ್ಕಾರ 5 ವರ್ಷ ಇರಬೇಕು ಎಂಬುದು ನಮ್ಮ ಆಸೆ ಎಂದರು.

ಪ್ರಧಾನಮಂತ್ರಿ ಮೇಲೆ ಆರೋಪ ಮಾಡುವುದೆ ಇವರ ಕೆಲಸವಾಗಿದೆ. ಅಕ್ಕಿ ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ಈಗ ನೀರಿನ ಬಗ್ಗೆ ಆರೋಪಿಸುತ್ತಿದ್ದಾರೆ. ಬರ ಬಂದಿದೆ, ಎಷ್ಟು ದುಡ್ಡು ಬೇಕು ಅಂಕಿ ಅಂಶ ಕೇಂದ್ರಕ್ಕೆ ಕಳಿಸಿದ್ದಿರಾ? ರಾಜ್ಯದ ಹಿತಾಸಕ್ತಿ ಕಾಪಾಡಬೇಕೆಂದರೆ ಎಲ್ಲರೂ ಒಟ್ಟಾಗಿರಬೇಕು. ಇಡೀ ಕರ್ನಾಟಕವನ್ನು ಒಟ್ಟಾಗಿ ಕರೆದು ಕಾನೂನು ತಜ್ಞರ ಬಳಿ ಚರ್ಚಿಸಬೇಕು ಎಂದು ಈಶ್ವರಪ್ಪ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next