ಅಮರಾವತಿ (ಆಂಧ್ರಪ್ರದೇಶ): ಕರ್ನಾಟಕದ ಪ್ರಮುಖ ನದಿಯಾದ ಕಾವೇರಿ ಹಾಗೂ ಆಂಧ್ರಪ್ರದೇಶದ ಪ್ರಮುಖ ನದಿಯಾದ ಗೋದಾವರಿಯನ್ನು ಪರಸ್ಪರ ಜೋಡಿಸುವ ಮೂಲಕ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ನೀರಿನ ಬವಣೆ ನೀಗಿಸುವ ಮಹದೋದ್ದೇಶದ ಯೋಜನೆಗೆ ಕೇಂದ್ರ ಸರಕಾರ ಸದ್ಯದಲ್ಲೇ ಚಾಲನೆ ನೀಡಲಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಂದಾಜು 60,000 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವ ಈ ಯೋಜನೆಯು ನಿಜಾರ್ಥದಲ್ಲಿ ಕಾವೇರಿ-ಕೃಷ್ಣ-ಗೋದಾವರಿ-ಪೆನ್ನಾರ್ ನದಿಗಳ ಜೋಡಣೆ ಯೋಜನೆ ಆಗಿದೆ. ಇದರ ವಿಸ್ತ್ರೃತ ವರದಿಯು ಈಗಾಗಲೇ ಸಿದ್ಧವಾಗಿದ್ದು, ಸದ್ಯದಲ್ಲೇ ಇದನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗುತ್ತದೆ. ಸಂಪುಟದ ಒಪ್ಪಿಗೆ ದೊರೆತ ನಂತರ, ಯೋಜನೆಗೆ ಬೇಕಾದ ಹಣವನ್ನು ವಿಶ್ವಬ್ಯಾಂಕ್‌ನಿಂದ ಅಥವಾ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಪಡೆಯಲಾಗುತ್ತದೆ ಎಂದು ಗಡ್ಕರಿ ಹೇಳಿದರು.
”ಪ್ರತಿ ವರ್ಷ ಗೋದಾವರಿ ನದಿಯ 1,100 ಟಿಎಂಸಿ ಅಡಿಗಳಷ್ಟು ನೀರು ವ್ಯರ್ಥವಾಗಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಇತ್ತ, ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನೀರಿಗಾಗಿ ಗಲಾಟೆ ಇದೆ. ಈ ಯೋಜನೆ ಜಾರಿಯಾದರೆ ಗೋದಾವರಿ ನದಿ ನೀರನ್ನು ತಮಿಳುನಾಡಿನ ತುತ್ತತುದಿಯವರೆಗೂ ಕೊಂಡೊಯ್ಯಬಹುದಾಗಿದ್ದು, ಆ ಮೂಲಕ ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ನೀರಿನ ಬವಣೆಯನ್ನು ನೀಗಿಸಬಹುದಾಗಿದೆ.
•ಕಾವೇರಿ, ಕೃಷ್ಣ, ಪೆನ್ನಾರ್, ಗೋದಾವರಿ ನದಿಗಳ ಜೋಡಣೆ
•ಸಮಗ್ರ ವರದಿ ಸಿದ್ಧ; ಸದ್ಯದಲ್ಲೇ ಸಂಪುಟ ಸಭೆಯಲ್ಲಿ ಮಂಡನೆ