Advertisement
ಕಾವೇರಿ ನದಿ ನೀರು ವಿಚಾರ ಸಂಬಂಧ ಆ. 23ರಂದು ಕರೆದಿರುವ ಸರ್ವಪಕ್ಷ ಸಭೆಗೆ ಸಂಸದರನ್ನೂ ಆಹ್ವಾನಿಸಲಾಗಿದೆ. ಸಭೆ ಒಪ್ಪಿದರೆ ಕೇಂದ್ರ ಸರಕಾರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲಾಗುವುದು ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Related Articles
ತಮಿಳುನಾಡಿನವರು ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆಯೇ ವಿನಾ ಕರ್ನಾಟಕದ ವಿರುದ್ಧ ಅಲ್ಲ. ಈ ಅರ್ಜಿಯ ವಿರುದ್ಧ ಕೇಂದ್ರ ಸರಕಾರ ಪ್ರಮಾಣಪತ್ರ ಸಲ್ಲಿಸಬಹುದಾಗಿತ್ತು. ಈ ಬಗ್ಗೆ ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಅವರಿಗೆ ಗೊತ್ತಿದ್ದರೂ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರಾಧಿಕಾರದ ನಿರ್ಧಾರ ಬದಲಿಸುವಂತೆ ಎರಡು ಬಾರಿ ಮನವಿ ಮಾಡಿದ್ದೇವೆ. ತಮಿಳುನಾಡು ಕೇಳಿದಷ್ಟು ನೀರು ಬಿಡಲು ಆಗುತ್ತಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದೇವೆ ಎಂದು ಡಿಕೆಶಿ ತಿಳಿಸಿದರು.
Advertisement
ನಮಗೆ ರಾಜ್ಯದ ಹಿತ ಮುಖ್ಯ. ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ. ಸರ್ವಪಕ್ಷ ಸಭೆಯ ಅಭಿಪ್ರಾಯ ಪಡೆದು ಮೇಲ್ಮನವಿ ಸಲ್ಲಿಸಬೇಕೇ- ಬೇಡವೇ ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಾವೇರಿ ನದಿ ನೀರು ವಿಚಾರವು ಸುಪ್ರೀಂಕೋರ್ಟ್ ಮುಂದೆ ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ರಾಜ್ಯ ಸರಕಾರ ಸರ್ವಪಕ್ಷ ಸಭೆ ಕರೆದಿದೆ. ಅಲ್ಲಿ ಎಲ್ಲ ಆಯಾಮಗಳಿಂದ ಚರ್ಚೆಯಾಗಲಿದೆ. ಈಗಲೇ ಇದಕ್ಕಿಂತ ಹೆಚ್ಚೇನೂ ಹೇಳುವುದಿಲ್ಲ.– ಟಿ.ಬಿ. ಜಯಚಂದ್ರ, ರಾಜ್ಯ ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿ ರಾಜ್ಯ ಸರಕಾರ ಕದ್ದು ಮುಚ್ಚಿ ಕಾವೇರಿ ನೀರು ಬಿಡುತ್ತಿದೆ. ರೈತರ ಹಿತಾಸಕ್ತಿ ರಕ್ಷಿಸುತ್ತೇವೆಂದು ಹೇಳುತ್ತ ತಮಿಳುನಾಡು ಸಿಎಂ ಸ್ಟಾಲಿನ್, ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ಅವರನ್ನು ಸಂಪ್ರೀತಗೊಳಿಸುವ ಕೆಲಸದಲ್ಲಿ ಸರಕಾರ ನಿರತವಾಗಿದೆ. ಸರ್ವಪಕ್ಷ ಸಭೆಯಲ್ಲಿ ಸರಕಾರದ ನಿಲುವನ್ನು ವಿರೋಧಿಸುತ್ತೇವೆ.
– ಆರ್. ಅಶೋಕ್, ಮಾಜಿ ಡಿಸಿಎಂ ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಅಸ್ತು
ಹೊಸದಿಲ್ಲಿ: ಕರ್ನಾಟಕ ಮತ್ತು ತಮಿಳುನಾಡು ಸರಕಾರದ ನಡುವೆ ಮತ್ತೆ ಭುಗಿಲೆದ್ದಿರುವ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದ ವಿಚಾರಣೆಗೆ ಪ್ರತ್ಯೇಕ ನ್ಯಾಯಪೀಠ ರಚಿಸುವುದಾಗಿ ಸರ್ವೋಚ್ಚ ನ್ಯಾಯಾಲಯ ಭರವಸೆ ನೀಡಿದೆ. ನೀರು ಬಿಡುಗಡೆ ಮಾಡುವಂತೆ ಕರ್ನಾಟಕ್ಕೆ ನಿರ್ದೇಶನ ನೀಡಿ ಎಂದು ಕೋರಿ ತಮಿಳುನಾಡು ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಈ ಭರವಸೆ ನೀಡಿದ್ದಾರೆ. ಸೋಮವಾರ ಈ ಕುರಿತು ಸುಪ್ರೀಂ ಕೋರ್ಟ್‌ನ ಗಮನ ಸೆಳೆದ ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ, ಕಾವೇರಿ ನದಿ ನಿರ್ವಹಣ ಪ್ರಾಧಿಕಾರದ ಆದೇಶದಂತೆ ಆಗಸ್ಟ್ ತಿಂಗಳಲ್ಲಿ ಕರ್ನಾಟಕದ ಜಲಾಶಯಗಳಿಂದ 24 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರಕ್ಕೆ ಸೂಚಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ತ್ವರಿತವಾಗಿ ಆಗಬೇಕು. ಈ ಹಿಂದೆ ನ್ಯಾ| ಎ.ಎಂ. ಖನ್ವಿಲ್ಕರ್ ನೇತೃತ್ವದಲ್ಲಿ ನ್ಯಾಯಪೀಠ ರಚಿಸಲಾಗಿತ್ತು. ಆದರೆ ಈಗ ಅವರು ನಿವೃತ್ತರಾಗಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಈಗ ಪ್ರತ್ಯೇಕ ನ್ಯಾಯಪೀಠವನ್ನು ರಚಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಇಂದೇ ಹೊಸ ನ್ಯಾಯಪೀಠ ರಚಿಸಲಾಗುವುದು ಎಂದರು.