ಮಂಗಳೂರು: ಕಾವ್ಯಾ ಅಸಹಜ ಸಾವಿನ ಕುರಿತು ಹಲವಾರು ಸಂಶಯಗಳು ಇರುವುದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ನಡೆಸುವ ಆವಶ್ಯಕತೆ ಇದ್ದು, ಸ್ವತಃ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ್ ಆಳ್ವ ಅವರು ಮುಂದೆ ಬಂದು ಸಿಬಿಐ ತನಿಖೆಗೆ ಒಪ್ಪಿಸಲು ಮುಂದಾಗ ಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ (ಟಿ.ಎ.ನಾರಾಯಣ ಗೌಡ ಬಣ) ದ.ಕ. ಜಿಲಾಧ್ಯಕ್ಷ ಅನಿಲ್ ದಾಸ್ ಒತ್ತಾಯಿಸಿದ್ದಾರೆ.
ಕಾವ್ಯಾ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಆ. 1 ರಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಿ ಪೊಲೀಸ್ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗೆ ವಿವಿಧ ರಾಜ್ಯಗಳಿಂದ ಮತ್ತು ದೇಶಾದ್ಯಂತದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಭದ್ರತೆಯ ಬಗೆಗೆ ಆಡಳಿತ ಮಂಡಳಿ ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದ ಅವರು ಶಾಲಾ ಆಡಳಿತ ಮಂಡಳಿಯಲ್ವಿ ರಕ್ಷಕ- ಶಿಕ್ಷಕ ಸಂಘವನ್ನು ರಚಿಸ ಬೇಕು, ವಿದ್ಯಾರ್ಥಿಗಳ ಘಟಕ ಸ್ಥಾಪಿಸಲು ಅನುಮತಿ ನೀಡ ಬೇಕು, ತಿಂಗಳಿಗೊಮ್ಮೆ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸುವ ವ್ಯವಸ್ಥೆ ಮಾಡ ಬೇಕೆಂದು ಒತ್ತಾಯಿಸಿದರು.
ಹಿಂದಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕಾಗಿ ಮನನೊಂದು ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಡಳಿತ ಮಂಡಳಿ ಪ್ರತಿಪಾದಿಸುತ್ತಿದೆ. ಆದರೆ ಆಕೆಯ ಸಾವಿನ ಬಗ್ಗೆ ಹತ್ತು ಹಲವು ಸಂಶಯಗಳನ್ನು ಆಕೆಯ ಕುಟುಂಬದವರು ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ನಜೀರ್ ಮೊದಿನ್, ಮಂಗಳೂರು ತಾಲೂಕು ಅಧ್ಯಕ್ಷ ಮಧುಸೂದನ ಗೌಡ, ಪ್ರಧಾನ ಕಾರ್ಯದರ್ಶಿ ನಜೀರ್ ಹುಸೈನ್ ಬೆಂಗ್ರೆ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಲತಾಶ್ರೀ, ಬಂಟ್ವಾಳ ತಾಲೂಕು ಅಧ್ಯಕ್ಷ ಅಬ್ದುಲ್ ಜಲೀಲ್, ಆಟೋ ರಿಕ್ಷಾ ಘಟಕದ ಅಧ್ಯಕ್ಷ ಜೆರಾಲ್ಡ್ ಡಿ’ಕುನ್ಹಾ, ಜಯರಾಜ್ ಜಪ್ಪಿನಮೊಗರು, ಎ.ಕೆ. ಜಮಾಲ್ ಅವರು ಉಪಸ್ಥಿತರಿದ್ದರು.