Advertisement

ಕಾವೇರಿ, ಕೃಷ್ಣೆಯಲ್ಲಿ ಮುಂದುವರಿದ ಪ್ರವಾಹ

06:00 AM Jul 18, 2018 | |

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ ಇರಲಿದೆ. ಉತ್ತರದ ಛತ್ತೀಸ್‌ಗಡ ಮತ್ತು ಆಗ್ನೇಯ ಉತ್ತರ ಪ್ರದೇಶ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂದಿನ 3-4ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಈ ಮಧ್ಯೆ, ಭಾರೀ ಮಳೆ-ಗಾಳಿಯಿಂದಾಗಿ ಆಗುಂಬೆಯ ಕುಂದಾದ್ರಿ ಬೆಟ್ಟದ ಮೇಲಿನ ಪ್ರವಾಸಿಗರ ತಂಗುದಾಣಕ್ಕೆ ಹಾನಿಯಾಗಿದೆ. ತಾಲೂಕಿನ ಹೆಗಲತ್ತಿ ಪ್ರದೇಶದಲ್ಲಿ ಕಿರು ಸೇತುವೆ ಕುಸಿದಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮನೆಗಳು ಹಾನಿಗೊಳಗಾಗಿವೆ. ಚಿತ್ರದುರ್ಗ ಜಿಲ್ಲಾದ್ಯಂತ ಬಿರುಗಾಳಿ ಬೀಸುತ್ತಿದ್ದು, ತಾಲೂಕಿನ ಕುರುಮರಡಿಕೆರೆ ಗ್ರಾಮದ ಗಿರಿಧಾಮದಲ್ಲಿ ಅಳವಡಿಸಿದ್ದ ಗಾಳಿ ಯಂತ್ರದ ರೆಕ್ಕೆಗಳು ಛಿದ್ರವಾಗಿವೆ. ದಕ್ಷಿಣ ಕನ್ನಡ ಜಿಲ್ಲೆ ಪಡುವನ್ನೂರು ಗ್ರಾಮದಲ್ಲಿ ಮನೆ ಮೇಲೆ ಮಾವಿನ ಮರ ಉರುಳಿ ಬಿದ್ದು, ಮೂವರು ಗಾಯಗೊಂಡಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ 21ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿವೆ. ಹಲವು ಮನೆಗಳು ಹಾನಿಗೊಳಗಾಗಿವೆ. ಗಂಗೊಳ್ಳಿ ಸಮುದ್ರ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಸಮೀಪದ ಮನೆಗಳಿಗೆ ಆತಂಕ ಎದುರಾಗಿದೆ. ಕೆಆರ್‌ಎಸ್‌ ಜಲಾಶಯದಿಂದ 82 ಸಾವಿರ ಕ್ಯೂಸೆಕ್‌ ನೀರನ್ನು
ಹೊರಬಿಡಲಾಗುತ್ತಿದ್ದು, ಕೆಳಭಾಗದಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ನದಿಗೆ ಇಳಿಯದಂತೆ ಜನರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ನದಿ ದಂಡೆಯ ಗ್ರಾಮಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೃಷ್ಣಾ, ದೂಧಗಂಗಾ, ಘಟಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಮೂರು ನದಿಗಳ ಪ್ರವಾಹದಿಂದ 11 ಸೇತುವೆಗಳು ನೀರಿನಲ್ಲಿ ಮುಳುಗಿವೆ. ಕೃಷ್ಣಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನದಿ ತೀರದ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ  ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಪ್ರವಾಹ ಸ್ಥಿತಿ ಎದುರಿಸುತ್ತಿರುವ ಹಳ್ಳಿಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ.

ಖಾನಾಪುರ ತಾಲೂಕಿನಲ್ಲೂ ಮಳೆ ಮುಂದುವರಿದಿದ್ದು, ಘಟಪ್ರಭಾ ನದಿಗೆ 28 ಸಾವಿರ ಕ್ಯುಸೆಕ್‌ ನೀರು ಬರುತ್ತಿದೆ. ಇದರಿಂದಾಗಿ ಹಿಡಕಲ್‌ ಜಲಾಶಯದಲ್ಲಿ ಒಂದೇ ದಿನ ನಾಲ್ಕು ಅಡಿಗಳಷ್ಟು ನೀರು ಏರಿಕೆಯಾಗಿದೆ. ಘಟಪ್ರಭಾ ನದಿಗೆ ಹೆಚ್ಚಿನ ನೀರು ಬರುತ್ತಿರುವುದರಿಂದ ಖಾನಾಪುರ ತಾಲೂಕಿನಲ್ಲಿ ಒಂದು, ಗೋಕಾಕ ತಾಲೂಕಿನಲ್ಲಿ ಮೂರು ಸೇತುವೆಗಳು  ನೀರಿನಲ್ಲಿ ಮುಳುಗಿವೆ.

ನೀರಿಗೆ ಧುಮುಕಿದವ ಮೇಲೆ ಬರಲೇ ಇಲ್ಲ!
ಕೆ.ಆರ್‌.ಪೇಟೆ: ಪ್ರವಾಹದಲ್ಲಿ ಈಜುವುದಾಗಿ ಸ್ನೇಹಿತರೊಂದಿಗೆ ಸವಾಲು ಹಾಕಿ ಸೇತುವೆ ಮೇಲಿಂದ ಜಿಗಿದ ವ್ಯಕ್ತಿ ನೀರುಪಾಲಾದ ಘಟನೆ ನಡೆದಿದೆ. ತಾಲೂಕಿನ ಹರಿಹರಪುರ ಶಿವರಾಜ್‌ (25) ನೀರು ಪಾಲಾದವ. ಈತ ತನ್ನ ಸ್ನೇಹಿತರೊಂದಿಗೆ ಹೇಮಾವತಿ ನೀರಿನ ಪ್ರವಾಹ ನೋಡಲು
ಹರಿಹರಪುರ-ಅಕ್ಕಿಹೆಬ್ಟಾಳು ಗ್ರಾಮಗಳ ನಡುವೆ ನಿರ್ಮಿಸಿರುವ ಸೇತುವೆ ಬಳಿ ತೆರಳಿದ್ದನು. ಪ್ರವಾಹ ನೋಡುತ್ತಿದ್ದಂತೆ ಸ್ನೇಹಿತರಿಗೆ ಸವಾಲು ಹಾಕಿ ಪ್ರವಾಹದ ನೀರಿನಲ್ಲಿ ಸೇತುವೆ ಮೇಲಿಂದ ಜಿಗಿದು ಈಜಿ ಬರುವುದಾಗಿ ಹೇಳಿ ನೀರಿನಲ್ಲಿ ಧುಮುಕಿದ್ದಾನೆ. ನಂತರ ದಡ ಸೇರಲು ಸಾಧ್ಯವಾಗದೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

Advertisement

ಮಳೆಗಾಗಿ ಮಹಿಳೆ ಉಪವಾಸ ವ್ರತ 
ಕೊಪ್ಪಳ: ತಾಲೂಕಿನ ಬಿಕನಹಳ್ಳಿ ಗ್ರಾಮದ ಹೊರವಲಯದ ಹಳ್ಳದ ದಂಡೆಯ ಮೇಲೆ ಮಹಿಳೆಯೊಬ್ಬರು ಮಳೆಗಾಗಿ ಉಪವಾಸ ವ್ರತ ಆರಂಭಿಸಿದ್ದಾರೆ. ಮೂಲತ: ಮೈನಹಳ್ಳಿ ಗ್ರಾಮದ ಹುಲಿಗೆಮ್ಮ ಕಟ್ಟಿಮನಿ (45) ಉಪವಾಸ ವ್ರತ ಕೈಗೊಂಡ ಮಹಿಳೆ. 5 ದಿನದೊಳಗೆ
ಮಳೆಯಾಗುವುದು ಪಕ್ಕಾ ಎಂದಿರುವ ಮಹಿಳೆಯ ಮಾತು ನಂಬಿ, ಗ್ರಾಮಸ್ಥರು ಅನ್ನಸಂತರ್ಪಣೆ ಸಹ ಮಾಡುತ್ತಿದ್ದಾರೆ. ಭಜನೆಯನ್ನೂ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next