ಜಮ್ಮು-ಕಾಶ್ಮೀರ: ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಬಂಕರ್ ಮೇಲೆ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಬಾಂಬ್ ಎಸೆದಿರುವ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೊರೆ ನಗರದಲ್ಲಿ ನಡೆದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಾರದ ಪ್ರಶ್ನೆ ಪತ್ರಿಕೆ, ಪರೀಕ್ಷೆ ರದ್ದು : ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ಸಿಸಿಟಿವಿ ದೃಶ್ಯಾವಳಿಯಲ್ಲಿ ರಸ್ತೆಯ ಮಧ್ಯಭಾಗದಲ್ಲಿ ನಿಂತ ಬುರ್ಖಾಧಾರಿ ಮಹಿಳೆಯೊಬ್ಬಳು, ಗಡಿಬಿಡಿಯಲ್ಲಿ ತನ್ನ ಪರ್ಸ್ ನೊಳಗೆ ಇಟ್ಟಿದ್ದ ಬಾಂಬ್ ಅನ್ನು ಹೊರತೆಗೆದು ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಬಾಂಬ್ ಎಸೆದ ನಂತರ ಅಲ್ಲಿಂದ ಪರಾರಿಯಾಗಿರುವುದು ದಾಖಲಾಗಿರುವುದಾಗಿ ವರದಿ ವಿವರಿಸಿದೆ.
ಬುರ್ಖಾಧಾರಿ ಮಹಿಳೆ ಎಸೆದ ಬಾಂಬ್ ಸಿಆರ್ ಪಿಎಫ್ ಕ್ಯಾಂಪ್ ನ ಹೊರಭಾಗದಲ್ಲಿ ಬಿದ್ದು ಸ್ಫೋಟಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾಂಬ್ ದಾಳಿ ಬೆನ್ನಲ್ಲೇ ಭದ್ರತಾ ಪಡೆ ಪ್ರದೇಶವನ್ನು ಸುತ್ತುವರಿದಿತ್ತು ಎಂದು ವರದಿ ತಿಳಿಸಿದೆ.
ಬಾಂಬ್ ಎಸೆದ ಮಹಿಳೆಯ ಗುರುತನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ. ಆಕೆಯ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಶೀಘ್ರದಲ್ಲಿಯೇ ಆಕೆಯನ್ನು ಬಂಧಿಸುವುದಾಗಿ ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ತಿಳಿಸಿದ್ದಾರೆ.