ತೀರ್ಥಹಳ್ಳಿ : ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಗೋವುಗಳ ಕಳ್ಳ ಸಾಗಾಣಿಕೆ, ಗೋ ಮಾಂಸ ರಫ್ತು ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿದೆ.
ಅಕ್ರಮ ಗೋವು ಕಳ್ಳರ ಜಾಲಗಳು ಮಲೆನಾಡಿನ ಎಲ್ಲೆಡೆ ಸಕ್ರಿಯವಾಗಿವೆ. ಆ.14ರ ಶುಕ್ರವಾರ ಕಮ್ಮರಡಿ ಬಳಿಯ ವರ್ತೆಯಲ್ಲಿ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ 2 ಹಸುಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ತಂಡವೊಂದು ಸಿಕ್ಕಿಬಿದ್ದಿದ್ದು, ಮೂವರು ಖದೀಮರು ಸ್ಯಾಂಟ್ರೋ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಭಜರಂಗ ದಳದ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ ನಡೆಸಿ ಹಸುಗಳನ್ನು ರಕ್ಷಿಸಿದ್ದಾರೆ. ಈ ವೇಳೆ ಭಜರಂಗದಳ ಕಾರ್ಯಕರ್ತರಾದ ಗುರುಪ್ರಸಾದ್ ಸುಳುಗೋಡು, ಸಚಿನ್ ಮಲ್ನಾಡ್, ಯಶಸ್ವಿ ಕಡ್ತುರ್, ಪವನ್, ಕೆಂದಾಳಬೈಲು ಪ್ರಶಾಂತ್, ಸುಮಂತ ಮುಂತಾದವರು ಗೋ ಕಳ್ಳರಿಂದ ಹಸುಗಳನ್ನು ರಕ್ಷಿಸಿದ್ದಾರೆ.
ಗೋವು ಕಳ್ಳ ಸಿಕ್ಕಿಬಿದ್ದರೂ ಪೊಲೀಸರು ಸ್ಥಳಕ್ಕೆ ಆಗಮಿಸಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರ ನಿರ್ಲಕ್ಷ್ಯ ಧೋರಣೆಯಿಂದಲೇ ಗೋ ಕಳವು ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಾವರ್ಜನಿರ ವಲಯದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಮೊನ್ನೆಮೊನ್ನೆಯಷ್ಟೇ ಆಗುಂಬೆಯಲ್ಲಿ 400 ಕೆ.ಜಿ ಗೋಮಾಂಸ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿತ್ತು. ಶುಕ್ರವಾರ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಹಸುವಿನ ಕಳೆಬರ ಪತ್ತೆಯಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಪೊಲೀಸ್ ಇಲಾಖೆ, ಜನಪ್ರತಿನಿಧಿಗಳು ತ್ವರಿತವಾಗಿ ಕ್ರಮ ಕೈಗೊಂಡು ಗೋವು ಕಳ್ಳಸಾಗಣೆ ಜಾಲವನ್ನು ಹೆಡೆಮುರಿ ಕಟ್ಟುವಂತೆ ಎಲ್ಲೆಡೆಯಿಂದ ಆಗ್ರಹಗಳು ಕೇಳಿ ಬರುತ್ತಿವೆ. ಪ್ರತಿ ಟೋಲ್ ಗೇಟ್ ನಲ್ಲಿ ವಾಹನಗಳನ್ನು ಪರಿಶೀಲಿಸಿ ಬಿಡಬೇಕು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಸಾವರ್ಜನಿಕರು ಆಗ್ರಹಿಸಿದ್ದಾರೆ.