Advertisement

ಕೇಂದ್ರದ ಗೋ ಹತ್ಯೆ ನಿಷೇಧ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

02:49 PM Jul 11, 2017 | Team Udayavani |

ನವದೆಹಲಿ:ಕಸಾಯಿಖಾನೆಗೆ ಜಾನುವಾರು ಮಾರಾಟಕ್ಕೆ ನಿಷೇಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದ ಬೆನ್ನಲ್ಲೇ ಇದೀಗ ಸುಪ್ರೀಂಕೋರ್ಟ್ ಕೂಡ ಮಂಗಳವಾರ ಕೇಂದ್ರ ಸರ್ಕಾರ ಜಾರಿಗೆ ತಂದ ಪರಿಷ್ಕೃತ ಜಾನುವಾರು ಹತ್ಯೆ ಮತ್ತು ಮಾರಾಟ ನಿಷೇಧ ಕ್ಕೆ 3 ತಿಂಗಳ ತಡೆಯಾಜ್ಞೆ ನೀಡಿದೆ. ಅಲ್ಲದೇ ಈ ಆದೇಶದಲ್ಲಿ ಬದಲಾವಣೆ ತರುವವರೆಗೆ ದೇಶಾದ್ಯಂತ ಗೋ ಹತ್ಯೆ ನಿಷೇಧ ಆದೇಶ ಅಮಾನತಿನಲ್ಲಿಡುವುದಾಗಿ ಹೇಳಿದೆ.

Advertisement

ಕಸಾಯಿಖಾನೆಗೆ ಜಾನುವಾರು ಮಾರಾಟಕ್ಕೆ ನಿಷೇಧ ಆದೇಶದ ಕುರಿತು ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾನೂನನ್ನು ಪರಿಷ್ಕರಿಸಿ ಜಾರಿಗೆ ತರಲಾಗುವುದು ಎಂದು ಹೇಳಿತ್ತು.

ಜಾನುವಾರು ಹತ್ಯೆ ಮತ್ತು ಮಾರಾಟ ನಿಷೇಧಿಸಿ ಕೇಂದ್ರ ಸರ್ಕಾರ ಮೇ 23ರಂದು ಅಧಿಸೂಚನೆ ಹೊರಡಿಸಿತ್ತು. ಏತನ್ಮಧ್ಯೆ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮದುರೈ ಮೂಲದ ಸಾಮಾಜಿಕ ಕಾರ್ಯಕರ್ತ, ವಕೀಲರಾದ ವಿಎಸ್ ಸೆಲ್ವಗೋಮತಿ ಅವರು ಮದರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಮದರಾಸ್ ಹೈಕೋರ್ಟ್ ನ ಮದುರೈ ಪೀಠ, ಗೋ ಹತ್ಯೆ ನಿಷೇಧ ಆದೇಶಕ್ಕೆ ನಾಲ್ಕು ವಾರಗಳ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಅಲ್ಲದೇ ಈ ಬಗ್ಗೆ ಕೇಂದ್ರ ಪರಿಸರ ಸಚಿವಾಲಯ ಮತ್ತು ತಮಿಳು ಸರ್ಕಾರ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು.

ಕೇಂದ್ರ ಸರ್ಕಾರದ ಈ ಆದೇಶವನ್ನು ವಿರೋಧಿಸಿ ತಮಿಳುನಾಡು ಮಾತ್ರವಲ್ಲ ಕರ್ನಾಟಕ, ಕೇರಳ ಸೇರಿದಂತೆ ದೇಶದ ಕೆಲವೆಡೆ ತೀವ್ರ ಪ್ರತಿಭಟನೆ ನಡೆದಿತ್ತು. ಕೇರಳದಲ್ಲಿ ಸಾರ್ವಜನಿಕವಾಗಿಯೇ ಕರುವನ್ನು ಕಡಿದು ಗೋ ಮಾಂಸವನ್ನು ಸೇವಿಸಿ ಪ್ರತಿಭಟಿಸಲಾಗಿತ್ತು. ಈಶಾನ್ಯ ರಾಜ್ಯಗಳಲ್ಲಿಯೂ ಬೀಫ್ ಫೆಸ್ಟ್ ಅನ್ನು ಆಯೋಜಿಸಲಾಗಿತ್ತು. ಅಸ್ಸಾಂ ಮತ್ತು ಮಿಜೋರಾಂನಲ್ಲಿ ಬಿಜೆಪಿ ಕಾರ್ಯಕರ್ತರು ಕೇಂದ್ರ ನಿಲುವನ್ನು ವಿರೋಧಿಸಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next