ವಿಜಯಪುರ: ನಗರದಲ್ಲಿರುವ ಎಪಿಎಂಸಿ ಜಾನುವಾರು ಮಾರುಕಟ್ಟೆ ಪ್ರದೇಶದತ್ತ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಜನ ಗಲಾಟೆ ಮಾಡಿಕೊಂಡು ಬಂದ ಕಾರಣ ಭಯಗೊಂಡ ರೈತರು ಜಾನುವಾರು ಬಿಟ್ಟು ಓಡಿ ಹೋದ ಘಟನೆ ಜರುಗಿದೆ.
ಪ್ರತಿ ಭಾನುವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕುರಿಗಳ, ಜಾನುವಾರು ಸಂತೆ ನಡೆಯುತ್ತದೆ. ಪ್ರತಿ ವಾರ ಸುಮಾರು 25-30 ಲಕ್ಷ ರೂ. ಮೇಕೆ-ಕುರಿ ವಹಿವಾಟು ನಡೆಯುತ್ತಿದ್ದು, ಇಂದಿನ ಗಲಾಟೆಯಿಂದ ವಹಿವಾಟು ನಡೆಯದೇ ರೈತರು ನಷ್ಟ ಅನುಭವಿಸುವಂತಾಗಿದೆ.
ಇಂದಿನ ಮಾರುಕಟ್ಟೆ ಸಂದರ್ಭದಲ್ಲಿ ಗುಂಪು ಘರ್ಷಣೆ ಹಾಗೂ ಕಲ್ಲು ತೂರಾಟ ನಡೆಯುತ್ತಿದೆ ಎಂಬ ಸುದ್ದಿ ಹರಡಿದ್ದೇ ತಡ ಮಾರುಕಟ್ಟೆಗೆ ಬಂದಿದ್ದ ರೈತರು ಜಾನುವಾರು ಸಮೇತ ಸ್ಥಳದಿಂದ ಓಡಿ ಹೋಗಿದ್ದಾರೆ. ಮತ್ತೆ ಕೆಲ ರೈತರು ಮೇಕೆಗಳನ್ನು ಬಿಟ್ಟು, ಪರಾರಿಯಾಗಿದ್ದಾರೆ. ವ್ಯಾಪಾರಿಗಳು ಕೂಡ ದಿಕ್ಕಾಪಾಲಾಗಿದ್ದಾರೆ.
ಘಟನೆ ಬಳಿಕ ಮೇಕೆ-ಕುರಿ ಮಾರುವವರು ಹಾಗೂ ಕೊಳ್ಳುವವರು ಇಲ್ಲದೇ ವಾರದ ಜಾನುವಾರು ಮಾರುಕಟ್ಟೆ ವಹಿವಾಟು ಸ್ಥಗಿತವಾಗಿದೆ.
ಮಾರುಕಟ್ಟೆ ಪ್ರದೇಶದ ಹೊರಗೆ ಗಲಾಟೆ ಮಾಡುತ್ತಿದ್ದ ಎರಡು ಗುಂಪುಗಳ ಜನರ ಕೈಯಲ್ಲಿ ಕಲ್ಲು, ಕಟ್ಡಿಗೆ ಇದೆ ಎಂಬ ಸುದ್ದಿ ತಿಳಿದು, ಭಯಗೊಂಡ ರೈತರು ಮಾರುಕಟ್ಟೆ ಸ್ಥಳದಿಂದ ಓಡಿ ಹೋಗಿದ್ದಾರೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಎಪಿಎಂಸಿ ಠಾಣೆ ಪೊಲೀಸರು, ಮಾರುಕಟ್ಟೆ ಪ್ರದೇಶದಲ್ಲಿ ಬೀಡುಬಿಟ್ಟಿದ್ದಾರೆ.