ಹೊಸದಿಲ್ಲಿ : ಮಾಂಸಕ್ಕಾಗಿ ಗೋವುಗಳನ್ನು ವಧಿಸುವ ಮಾರುಕಟ್ಟೆಗೆ ದನಗಳ ಮಾರಾಟ ಹಾಗೂ ಖರೀದಿಯನ್ನು ಕೇಂದ್ರ ಸರಕಾರ ನಿಷೇಧಿಸಿರುವುದು ಅಸಾಂವಿಧಾನಿಕವಾಗಿದ್ದು ತಾರತಮ್ಯದಿಂದ ಕೂಡಿರುವುದರಿಂದ ಅದನ್ನು ಅನೂರ್ಜಿತಗೊಳಿಸಬೇಕೆಂಬ ಅರ್ಜಿಯ ಮೇಲಿನ ವಿಚಾರಣೆ ಸಂಬಂಧವಾಗಿ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೊಟೀಸ್ ಜಾರಿ ಮಾಡಿದೆ.
ಎರಡು ವಾರಗಳ ಒಳಗೆ ಈ ನೊಟೀಸಿಗೆ ಉತ್ತರಿಸಿರುವಂತೆ ಆದೇಶಿಸಿರುವ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ನಿಗದಿಸಿದೆ
ಗೋಮಾಂಸ ವಧಾ ಮಾರುಕಟ್ಟೆಗೆ ಗೋವುಗಳ ಮಾರಾಟ ಹಾಗೂ ಖರೀದಿಯನ್ನು ನಿಷೇಧಿಸಿರುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿರುವ ಅರ್ಜಿಯ ಮೇಲಿನ ವಿಚಾರಣೆ ಸಂಬಂಧ ಜಸ್ಟಿಸ್ ಆರ್ ಕೆ ಅಗ್ರವಾಲ್ ಮತ್ತು ಎಸ್ ಕೆ ಕೌಲ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟಿನ ರಜಾಕಾಲದ ಪೀಠವು ಕೇಂದ್ರಕ್ಕೆ ನೊಟೀಸ್ ಜಾರಿ ಮಾಡಿತು.
ಕೇಂದ್ರದ ಈ ಕ್ರಮವು ಅದಕ್ಕೆ ತಿರುಗುಬಾಣವಾಗಿ ಪರಿಣಮಿಸಿದ್ದು ವಿವಿಧ ಕ್ಷೇತ್ರಗಳಿಂದ ಸರಕಾರಕ್ಕೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿದೆ.
ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ ಎಸ್ ನರಸಿಂಹ ಅವರು ಕೋರ್ಟಿನಲ್ಲಿ ಹಾಜರಿದ್ದರು. ದೇಶಾದ್ಯಂತ ಗೋ ಮಾರಾಟವನ್ನು ನಿಯಂತ್ರಣಕ್ಕೆ ಗುರಿ ಪಡಿಸುವುದೇ ಕೇಂದ್ರದ ಈ ಕ್ರಮದ ಹಿಂದಿನ ಉದ್ದೇಶವಾಗಿತ್ತು ಎಂದವರು ನ್ಯಾಯಾಲಯಕ್ಕೆ ಹೇಳಿದರು.
ಮದ್ರಾಸ್ ಹೈಕೋರ್ಟ್ ಈಚೆಗೆ ಕೇಂದ್ರದ ಈ ಅಧಿಸೂಚನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು ನರಸಿಂಹ ಅವರು ಕೋರ್ಟಿಗೆ ತಿಳಿಸಿದರು.