ಲಂಡನ್ : ಬೆಕ್ಕುಗಳು ಅಂದ್ರೆ ಎಲ್ಲರಿಗೂ ಪ್ರೀತಿ ಮತ್ತು ಮುದ್ದು, ಆದ್ರೆ ಕೆಲವರು ಇವುಗಳನ್ನು ಅಪಶಕುನ ಎಂದು ಕರೆಯುವುದೂ ಉಂಟು. ಎಲ್ಲಿಗಾದ್ರು ಹೋಗುವಾಗ ಬೆಕ್ಕುಗಳು ಅಡ್ಡ ಬಂದ್ರೆ ಒಂದೆರಡು ನಿಮಿಷ ನಿಂತು ಹೋಗುವ ನಂಬಿಕೆ ಇದೆ.
ಆದ್ರೆ ಲಂಡನ್ ನಲ್ಲಿ ಬೆಕ್ಕೊಂದು ಒಂದು ರೈಲು ಗಾಡಿಯನ್ನೇ ಬರೋಬ್ಬರಿ ಮೂರು ಗಂಟೆಗಳ ಕಾಲ ನಿಲ್ಲಿಸಿದೆ ಅಂದ್ರೆ ನೀವು ನಂಬುತ್ತೀರಾ..? ಇತ್ತೀಚೆಗೆ ಲಂಡನ್‌ನ ಯುಸ್ಟನ್ ನಿಲ್ದಾಣದಲ್ಲಿ ಫಾಸ್ಟ್ ರೈಲೊಂದು ಮೂರು ಗಂಟೆ ತಡವಾಗಿ ಸಂಚಾರ ಆರಂಭಿಸಲು ಈ ಬೆಕ್ಕು ಕಾರಣವಾಗಿದೆ. ಹಾಗದ್ರೆ ಆ ಬೆಕ್ಕು ಏನು ಮಾಡಿತು ಅಂದ್ರಾ.
ಲಂಡನ್‌ನ ಯುಸ್ಟನ್ ನಿಂದ ಮ್ಯಾಂಚೆಸ್ಟರ್‌ಗೆ ಸಾಗಲು ಸಿದ್ಧವಾಗುತ್ತಿದ್ದ ಅವಂತಿ ವೆಸ್ಟ್ ಕೋಸ್ಟ್ ಪೆಂಡೊಲಿನೊ ರೈಲಿನ ಟಾಪ್ ಮೇಲೆ ಬೆಕ್ಕು ಹತ್ತಿ ಕುಳಿತಿದೆ. ಅರೇ.. ಇದನ್ನು ಕೆಳಗಡೆ ಓಡಿಸಿ ರೈಲನ್ನು ಚಾಲು ಮಾಡಿದ್ದರೆ ಆಗಿತ್ತು ಅಂತ ನೀವು ಹೇಳಬಹುದು ಆದ್ರೆ…
ಬೆಕ್ಕು ಹತ್ತಿ ಕುಳಿತಿದ್ದ ಆ ರೈಲು ಗಾಡಿಯ ಸಮೀಪ 25,000 ವೋಲ್ಟ್‌ನ ಅಪಾಯಕಾರಿ ವಿದ್ಯುತ್ ಕೇಬಲ್ ಇದ್ದ ಕಾರಣ ಬೆಕ್ಕನ್ನು ನಾಜೂಕಿನಿಂದ ಕೆಳಗಡೆ ಇಳಿಸಬೇಕಾಯಿತು. ಅದಕ್ಕೂ ಮುಂಚೆ ರೈಲಿನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ರೈಲಿಗೆ ಶಿಫ್ಟ್ ಮಾಡಿ, ನಂತರ ಬೆಕ್ಕನ್ನು ಕೆಳಗಡೆ ಇಳಿಸಲಾಗಿದೆ.
ಈ ಎಲ್ಲಾ ಕಾರ್ಯಾಚರಣೆ ಮಾಡುವ ಹೊತ್ತಿಗೆ ರಾತ್ರಿ 9ಕ್ಕೆ ಹೊರಡಬೇಕಿದ್ದ ರೈಲು ಹೊರಡುವ ಮೂರು ಗಂಟೆ ತಡವಾಗಿ ಹೊರಡುವಂತಾಗಿದೆ.
ಈ ಘಟನೆ ನಡೆದ ಮೇಲೆ ಲಂಡನ್ ಟ್ವಿಟ್ಟರ್ ಬಳಕೆದಾರರು ಈ ರೈಲ್ವೆ ಸ್ಟೇಷನ್ ಮತ್ತು ಬೆಕ್ಕಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ.