ಬೆಂಗಳೂರು: ಪಬ್‌ನಲ್ಲಿ ತಡರಾತ್ರಿ ಪಾರ್ಟಿ ಮುಗಿಸಿ ಹೊರಡುವಾಗ ಭಾರತೀಯ ಮೂಲದ ಆಸ್ಟ್ರೇಲಿಯಾ ಮಹಿಳೆಗೆ “ಕ್ಯಾಟ್‌ಕಾಲಿಂಗ್’ ಮಾಡಿದ್ದಲ್ಲದೆ ಆಕೆಯ ಮೈ ಮುಟ್ಟಿದ ಇಬ್ಬರು ಭಾರತೀಯ ಮೂಲದ ಅಮೆರಿಕ ನಿವಾಸಿಗಳು ಇದೀಗ ಜೈಲು ಸೇರಿದ್ದಾರೆ. ಡಿ.6ರಂದು ನಡೆದ ಘಟನೆ ಸಂಬಂಧ ಸಂತ್ರಸ್ತ ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಠಾಣೆ ಪೊಲೀಸರು, ರಮೇಶ್ ಅಂಕೂರ್ ( 30) ರೋಹನ್ ರಮೇಶ್ (32) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳಿಬ್ಬರ ಪೋಷಕರು ಈ ಹಿಂದೆ ಅಮೆರಿಕದ ನ್ಯೂ ಜೆರ್ಸಿಯಲ್ಲಿದ್ದು ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಹಿಂದಿರುಗಿದ್ದಾರೆ. ರಮೇಶ್ ಹಾಗೂ ರೋಹನ್ ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದು, ಅಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ ಪೋಷಕರನ್ನು ನೋಡಿಕೊಂಡು ಹೋಗಲು ಆಗಮಿಸಿದ್ದರು ಎಂದು ತಿಳಿದು ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಶಿಳ್ಳೆ ತಂದಿಟ್ಟಿತು ಆಪತ್ತು!: ಡಿ.6ರಂದು ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಸ್ವಿಂಗ್ ಪಬ್‌ಗ ತೆರಳಿದ್ದ ಭಾರತೀಯ ಮೂಲದ ಆಸ್ಟ್ರೇಲಿಯಾ ನಿವಾಸಿ ಮಹಿಳೆ ಹಾಗೂ ಆಕೆಯ ಪತಿ ಊಟ ಮುಗಿಸಿಕೊಂಡು ಮನೆಗೆ ತೆರಳಲು ರಾತ್ರಿ 1.15ರ ಸುಮಾರಿಗೆ ಪಬ್ ಹೊರಗಡೆ ನಿಂತಿದ್ದರು. ಈ ವೇಳೆ ಪಬ್‌ನಿಂದ ಹೊರಬಂದ ರಮೇಶ್ ಹಾಗೂ ರೋಹನ್, ಮಹಿಳೆಯನ್ನು ನೋಡಿ ಶಿಳ್ಳೆ ಹೊಡೆದು ಅಶ್ಲೀವಾಗಿ ಸನ್ನೆ ಮಾಡಿದ್ದಾರೆ.
ಆರೋಪಿಗಳ ವರ್ತನೆಯಿಂದ ಗಾಬರಿಗೊಂಡ ಮಹಿಳೆ ಅವರನ್ನು ದೂರ ನಿಲ್ಲುವಂತೆ ಸೂಚಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು, ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದ್ದಾರೆ. ಹೀಗಾಗಿ, ಆಕೆಯ ಪತಿ ರಕ್ಷಣೆಗೆ ಧಾವಿಸಿ ಅವರನ್ನು ಪ್ರಶ್ನಿಸಿದಾಗ ಪರಸ್ಪರರ ಮಾತಿನ ಚಕಮಕಿ ನಡೆದು ಆರೋಪಿಗಳಿಬ್ಬರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ಮಹಿಳೆಗೂ ಹೊಡೆದಿದ್ದಾರೆ. ಜತೆಗೆ, ಮಹಿಳೆಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಮಹಿಳೆ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕೂಡಲೆ ಸ್ಥಳಕ್ಕೆ ಧಾವಿಸಿದ ಇಂದಿರಾನಗರ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದಾಗ, “ನಮ್ಮನ್ನು ಏನೈ ಮಾಡ್ಕೊಳ್ಳೋಕಾಗಲ್ಲ’ ಎಂದು ದರ್ಪ ತೋರಿ, ನಿಂದಿಸಲು ಆರಂಭಿಸಿದ್ದಾರೆ. ಕಡೆಗೆ, ಸಂತ್ರಸ್ತ ಮಹಿಳೆ ಹಾಗೂ ಆರೋಪಿಗಳನ್ನು ಠಾಣೆಗೆ ಕರೆತಂದ ಪೊಲೀಸರು, ಮಹಿಳೆ ಪತಿ ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳ (354) ಉದ್ದೇಶ ಪೂರ್ವಕ ಅವಮಾನ (504) ಇನ್ನಿತರೆ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕ್ಯಾಟ್‌ಕಾಲಿಂಗ್ ಎಂದರೇನು?: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಅಶ್ಲೀಲ ದೃಷ್ಟಿಯಿಂದ ನೋಡುವುದು, ಅಸಭ್ಯವಾಗಿ ಸನ್ನೆ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡುವುದನ್ನು ಪಾಶ್ಚಾತ್ಯ ದೇಶಗಳಲ್ಲಿ “ಕ್ಯಾಟ್ ಕಾಲಿಂಗ್’ ಎನ್ನಲಾಗುತ್ತದೆ. ಮಹಿಳೆ, ಯುವತಿಯರಿಗೆ ಶಿಳ್ಳೆ ಹೊಡೆಯುವ ಚೇಷ್ಟೇಗಳು ಕೂಡ ಲೈಂಗಿಕ ಕಿರುಕುಳ ಅಪರಾಧದ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.