Advertisement

ಕಾಂಗ್ರೆಸ್‌ನಿಂದ ಜಾತೀಯತೆ ನಿರ್ನಾಮವಾಗಿಲ್ಲ

03:00 PM Apr 18, 2022 | Team Udayavani |

ಬೆಳಗಾವಿ: 70 ವರ್ಷಗಳ ಕಾಲ ದೇಶದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ಕಾಂಗ್ರೆಸ್‌ ಆಡಳಿತ ನಡೆಸಿದರೂ ಜಾತೀಯತೆಯನ್ನು ಶಮನಗೊಳಿಸಲಿಲ್ಲ. ಮಹಾತ್ಮಾ ಗಾಂಧೀಜಿ ಕನಸು ನನಸು ಮಾಡುವಲ್ಲಿ ವಿಫಲವಾಯಿತು. ಕಾಂಗ್ರೆಸ್‌ ನಿರ್ನಾಮಗೊಳಿಸಲು ಕಾಂಗ್ರೆಸ್‌ ನಾಯಕರೇ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವರೂ ಆಗಿರುವ ರಿಪಬ್ಲಿಕ್‌ ಪಾರ್ಟಿ ಆಪ್‌ ಇಂಡಿಯಾ ಅಧ್ಯಕ್ಷ ರಾಮದಾಸ ಆಠವಲೆ ಹೇಳಿದರು.

Advertisement

ನಗರದ ಕಾಲೇಜು ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ರಾಜ್ಯ ಕಾರ್ಯಕಾರಿಣಿ ಹಾಗೂ ಬೆಳಗಾವಿ ವಿಭಾಗೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಹಲವು ವರ್ಷಗಳ ಕಾಲ ಅಧಿಕಾರ ಅನುಭವಿಸಿದೆ. ದೇಶದ ಮೂಲೆ ಮೂಲೆಯಲ್ಲೂ ಇವರದ್ದೇ ಸರ್ಕಾರ ಇತ್ತು. ಆದರೆ ಜಾತಿವಾದ, ಅಸ್ಪೃಶ್ಯತೆ ದೂರ ಮಾಡಲಿಲ್ಲ. ಹೀಗಾಗಿ ಇನ್ನೂ ಅನ್ಯಾಯ, ದೌರ್ಜನ್ಯ, ಅತ್ಯಾಚಾರ ತಾಂಡವವಾಡುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್‌ ಅವರನ್ನೇ ಸೋಲಿಸಿದ ಕಾಂಗ್ರೆಸ್‌ ಬಿಜೆಪಿಯನ್ನು ಆರೋಪಿಸುತ್ತ ಬಂದಿದೆ. ಅಲ್ಪಸಂಖ್ಯಾತರ ಮತಗಳಿಗಾಗಿ ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ದೇಶದಲ್ಲಿ ಭ್ರಷ್ಟಾಚಾರ ನಿರ್ನಾಮ ಆಗುತ್ತಿದೆ ಎಂದರು.

ಆರ್‌ಪಿಐ ಗಟ್ಟಿಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಕಾರ್ಯಕರ್ತರು ತಮ್ಮ ಜವಾಬ್ದಾರಿ ಅರಿತು ಪಕ್ಷದ ಸಂಘಟನೆಗೆ ಮುಂದಾಗಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ವೇಳೆ ಆರ್‌ಪಿಐ ಅನ್ನು ಪರಿಗಣಿಸಬೇಕು. ಪಕ್ಷವನ್ನು ಎಲ್ಲ ಕಡೆಗೂ ಬೆಳೆಸಲಾಗುತ್ತಿದೆ. ಆರ್‌ಪಿಐ ಬಗ್ಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.

ಆರ್‌ಪಿಐ ರಾಜ್ಯಾಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಮಾತನಾಡಿ, ಮುಂಬರುವ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆರ್‌ಪಿಐ ಖಾತೆ ತೆರೆಯಲಿದೆ. ಈ ಭರವಸೆಯೊಂದಿಗೆ ರಾಜ್ಯಾದ್ಯಂತ ಪ್ರಚಾರ ಅಭಿಯಾನ ಆರಂಭಿಸಲಾಗಿದೆ. ಜತೆಗೆ ಸಂಘಟನಾ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ. ಪಕ್ಷದ ಬಗ್ಗೆ ಜನರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಪಕ್ಷ ಸಂಘಟನೆ ಬಲಗೊಳ್ಳುತ್ತಿದೆ ಎಂದರು.

Advertisement

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಆರ್‌ಪಿಐ ರಾಷ್ಟ್ರೀಯ ಅಧ್ಯಕ್ಷ ರಾಮದಾಸ್‌ ಆಠವಲೆ ಅವರ ಶ್ರಮದಿಂದ ಪಕ್ಷ ಮುಂದೆ ಸಾಗುತ್ತಿದೆ. ಮೊದಲಿನಿಂದಲೂ ಕಾಂಗ್ರೆಸ್‌ ಅಂಬೇಡ್ಕರ ವಿಚಾರಗಳನ್ನು ವಿರೋ ಧಿಸುತ್ತ ಬಂದಿದೆ. ಈ ಹುನ್ನಾರದಿಂದ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ಪಕ್ಷ ದೇಶದಲ್ಲಿ ಆಳುವ ಪಕ್ಷವಾಗಲಿಲ್ಲ. ಆರ್‌ಪಿಐ ಮುಖಂಡರ ದಿಕ್ಕು ತಪ್ಪಿಸುವುದರಲ್ಲೇ ಕಾಂಗ್ರೆಸ್‌ ಕಾಲ ಕಳೆಯಿತು ಎಂದು ವಾಗ್ಧಾಳಿ ನಡೆಸಿದರು.

ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಬೆಳಗಾವಿ. ಈ ಜಿಲ್ಲೆಯಲ್ಲಿ ಅನೇಕ ರಾಜಕೀಯ ಪಕ್ಷಗಳು ಅ ಧಿವೇಶನ ನಡೆಸಿವೆ. ಅಧಿವೇಶನ ವೇಳೆ ಗಾಂಧೀಜಿಯವರು ಅನೇಕ ತೀರ್ಮಾನ ಕೈಗೊಂಡಿದ್ದಾರೆ. ಆರ್‌ಪಿಐ ಬಲಗೊಳಿಸಿ ಮುಂದಿನ ಚುನಾವಣೆಗೆ ಸಜ್ಜುಗೊಳಿಸಲು ಬೆಳಗಾವಿಯಲ್ಲಿ ಸಮ್ಮೇಳನ ಹಾಗೂ ಕಾರ್ಯಕಾರಿಣಿ ಹಮ್ಮಿಕೊಳ್ಳಲಾಗಿದೆ. ಈ ಭಾಗದಲ್ಲಿ ದೊಡ್ಡ ರಾಜಕೀಯ ಅಲೆ ಸೃಷ್ಟಿಸಲು ಬೆಳಗಾವಿ ಮೂಲಕ ಕರ್ನಾಟಕದಲ್ಲಿ ಕೈ ಹಾಕಿದ್ದೇವೆ ಎಂದರು.

ಆಲ್‌ ಇಂಡಿಯಾ ದಲಿತ ಯೂಥ್‌ ಆರ್ಗನೇಜೆಶನ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲೇಶ ಚೌಗುಲೆ, ಆರ್‌ಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರವಣ ಕಾಂಬಳೆ, ರಾಜ್ಯ ಉಪಾಧ್ಯಕ್ಷರಾದ ಲಕ್ಕಪ್ಪ ತಳವಾರ, ಕಲ್ವಮಂಜಲಿ ಶಿವಣ್ಣ ಸಿ., ರಾಜ್ಯ ಜಂಟಿ ಕಾರ್ಯದರ್ಶಿ ನರಸಾಪುರ ಎಸ್‌. ನಾರಾಯಣ ಸ್ವಾಮಿ, ಹುಬ್ಬಳ್ಳಿ ವಿಭಾಗೀಯ ಅಧ್ಯಕ್ಷ ಶಂಕರ ಅಜಮನಿ, ರಾಜ್ಯ ಮುಖಂಡ ಬಸವರಾಜ ಢಾಕೆ, ಶಿವಾ ಚೌಗುಲೆ, ದಿಲಶಾದ ತಾಶೀಲದಾರ, ಅಜೀತ ಹರಿಜನ, ದಿವಾನಸಾಬ್‌ ದೇಸಾಯಿ, ಹಸೀನಾ ಶೇಖ್‌ ಸೇರಿದಂತೆ ಇತರರು ಇದ್ದರು.

ಆರ್‌ಪಿಐ ರಾಜ್ಯ ಕಾರ್ಯಕಾರಣಿ ನಿರ್ಣಯಗಳು:

  • ­ ಕರ್ನಾಟಕದ ಎಲ್ಲ ವಿಧಾನಸಭೆಗಳಲ್ಲಿ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವುದು
  • ­ ರಾಜ್ಯದಲ್ಲಿ ಪಕ್ಷದ ಒಂದು ಕೋಟಿ ಸದಸ್ಯತ್ವ ಮಾಡುವುದು
  • ­ ಯುವಕರು ಮತ್ತು ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು
  • ­ ಬೆಳಗಾವಿ ವಿಭಾಗದ 7 ಜಿಲ್ಲೆಗಳಲ್ಲಿ 10 ಲಕ್ಷ ಜನ ಸದಸ್ಯತ್ವ ನೋಂದಣಿ ಗುರಿ, ಜಿಲ್ಲಾ ಸಮಿತಿ ಪುನರಚನೆಗೆ ನಿರ್ಣಯ
  • ­ ಎಲ್ಲ ಜಾತಿ, ಭಾಷೆ, ಧರ್ಮದವರು ಸದಸ್ಯರಾಗಬಹುದು
  • ­ ಬೆಲೆ ಏರಿಕೆಗೆ ಖಂಡನಾ ನಿರ್ಣಯ, ಮೊದಲಿದ್ದ ದರಗಳನ್ನು ನಿಗದಿಪಡಿಸಲು ಕೇಂದ್ರದ ಮೇಲೆ
  • ಒತ್ತಡ ತರುವುದು
  • ­ ರಾಮದಾಸ ಆಠವಲೆ ಅವರು ರಾಜ್ಯ ಖಾತೆ ಕೇಂದ್ರ ಸಚಿವರಾಗಿದ್ದು, ಕ್ಯಾಬಿನೇಟ್‌ಗೆ ಸೇರಿಸಿಕೊಳ್ಳುವಂತೆ ಒತ್ತಾಯ
  • ­ ರಾಯಚೂರಿನಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ ಘಟನೆಗೆ ಖಂಡನೆ, ತಪ್ಪಿತಸ್ಥರ ವಜಾಗೊಳಿಸಲು ಒತ್ತಾಯ
  • ­ ರಾಜ್ಯದ ಗ್ರಾಮ ಸಹಾಯಕರ ಸೇವೆ ಕಾಯಂ ಮಾಡುವುದು
  • ­ ವಿಶೇಷ ಘಟಕ ಯೋಜನೆ ಹಣ ದುರುಪಯೋಗ ತಡೆ ಕಾಯ್ದೆ ಜಾರಿಗೆ ಆಗ್ರಹ
Advertisement

Udayavani is now on Telegram. Click here to join our channel and stay updated with the latest news.

Next