Advertisement

ಜಾತಿ, ಧರ್ಮ ಹೆಸರಲ್ಲಿ ಮತಯಾಚನೆ ನಿಷಿದ್ಧ

03:45 AM Jan 03, 2017 | |

ಹೊಸದಿಲ್ಲಿ: “ಚುನಾವಣೆ ಎಂಬುದು ಜಾತ್ಯತೀತ ಪ್ರಕ್ರಿಯೆ. ಅಲ್ಲಿ ಯಾವುದೇ ಧರ್ಮ, ಜಾತಿ, ಮತ, ಸಮುದಾಯ ಅಥವಾ ಭಾಷೆಯ ಹೆಸರಲ್ಲಿ ಮತ ಕೇಳುವುದು ಅಕ್ರಮ. ಇದು ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಸಂವಿಧಾನಬಾಹಿರ ಎನಿಸಿಕೊಳ್ಳುತ್ತದೆ’ ಎಂದು ಸರ್ವೋಚ್ಚ ನ್ಯಾಯಾಲಯ ಸೋಮವಾರ ಮಹತ್ವದ ಬಹುಮತದ ತೀರ್ಪು ಪ್ರಕಟಿಸಿದೆ.

Advertisement

ಪ್ರಜಾಪ್ರತಿನಿಧಿ ಕಾಯ್ದೆಯ 123 (3) ಪರಿಚ್ಛೇದದಲ್ಲಿ ಇದ್ದ “ಆತನ ಧರ್ಮ’ (ಅಭ್ಯರ್ಥಿಯ ಧರ್ಮ) ಎಂಬ ಪದವನ್ನು ವ್ಯಾಖ್ಯಾನಿಸಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ನೇತೃತ್ವದ ಸಾಂವಿಧಾನಿಕ ಪೀಠ, “ಆತನ ಧರ್ಮ’ ಎಂದರೆ ಬರೀ ಅಭ್ಯರ್ಥಿಯ ಧರ್ಮ ಆಗುವುದಿಲ್ಲ. ಅದು ಮತದಾರರು, ಅಭ್ಯರ್ಥಿ, ಆತನ ಏಜೆಂಟ್‌ ಸಹಿತ ಎಲ್ಲರ ಧರ್ಮವೂ ಆಗಿರುತ್ತದೆ ಎಂದು 4:3 ಬಹುಮತದ ತೀರ್ಪು ನೀಡಿದೆ.

ಸಪ್ತ ಸದಸ್ಯರ ಪೀಠದಲ್ಲಿ ನ್ಯಾ| ಠಾಕೂರ್‌, ನ್ಯಾ| ಎಂ.ಬಿ. ಲೋಕುರ್‌, ನ್ಯಾ| ಎಸ್‌.ಎ. ಬೋಬೆx ಮತ್ತು ನ್ಯಾ| ಎಲ್‌.ಎನ್‌. ರಾವ್‌ ಅವರು “ಆತನ ಧರ್ಮ’ ಎಂದರೆ “ಎಲ್ಲರ ಧರ್ಮ’ ಎಂಬ ತೀರ್ಪು ನೀಡಿದ್ದರೆ, ಇನ್ನುಳಿದ ಮೂವರು ನ್ಯಾಯಾಧೀಶರಾದ ನ್ಯಾ| ಎ.ಕೆ. ಗೋಯೆಲ್‌, ನ್ಯಾ| ಡಿ.ವೈ. ಚಂದ್ರಚೂಡ ಮತ್ತು ನ್ಯಾ| ಉದಯ ಯು. ಲಲಿತ್‌ ಅವರು “ಆತನ ಧರ್ಮ’ ಎಂದರೆ “ಅಭ್ಯರ್ಥಿಯ ಧರ್ಮ’ ಎಂದು ಮಾತ್ರ ಎನಿಸಿಕೊಳ್ಳುತ್ತದೆ ಎಂದಿದ್ದಾರೆ. ಆದರೆ, ನ್ಯಾಯಪೀಠ ತೀರ್ಪು ನೀಡುವಾಗ ಬಹುಮತ ಮುಖ್ಯವಾಗಿರುವ ಕಾರಣ ಇಲ್ಲಿ ಬಹುಮತದ ಅಭಿಪ್ರಾಯವೇ ಅಂತಿಮ ಎನಿಸಿಕೊಳ್ಳುತ್ತದೆ. ನ್ಯಾಯಾಲಯದ ತೀರ್ಮಾನವನ್ನು ವಿವಿಧ ರಾಜಕೀಯ ಪಕ್ಷಗಳು ಸ್ವಾಗತಿಸಿವೆ.

“ಆತನ ಧರ್ಮ’ ಎಂಬ ಬಗ್ಗೆ ಇತ್ತು ಕಗ್ಗಂಟು: ಪ್ರಜಾಪ್ರತಿನಿಧಿ ಕಾಯ್ದೆ 123 (3)ರ ಪ್ರಕಾರ “ಅಭ್ಯರ್ಥಿ, ಆತನ ಏಜೆಂಟ್‌ ಅಥವಾ ಆತನಿಂದ ಸಮ್ಮತಿ ಪಡೆದಿರುವ ವ್ಯಕ್ತಿಗಳು “ಆತನ’ ಧರ್ಮ, ಜಾತಿ, ಸಮುದಾಯ, ಭಾಷೆ ಹೆಸರಿನಲ್ಲಿ ಮತ ಯಾಚಿಸಿದರೆ ಅಥವಾ ಮತದಾನದಿಂದ ದೂರ ಉಳಿಯಿರಿ ಎಂದು ಹೇಳಿದರೆ ಅದು ಅಕ್ರಮ ಎನ್ನಿಸಿಕೊಳ್ಳುತ್ತದೆ’ ಎಂದು ಹೇಳುತ್ತದೆ.

ಆದರೆ ಇಲ್ಲಿ “ಆತನ ಧರ್ಮ’ ಎಂದರೆ ಯಾವುದು? ಅಭ್ಯರ್ಥಿಯ ಧರ್ಮ ಮಾತ್ರವೇ ಅಥವಾ ಆತ ಯಾವುದೇ ಧರ್ಮದ ಹೆಸರಿನಲ್ಲಿ ಮತ ಕೇಳಬಾರದೇ ಎಂಬ ಸಂದೇಹಗಳು ಎದ್ದಿದ್ದವು. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಸಾಕಷ್ಟು ವಾದ-ಪ್ರತಿವಾದ ಆಲಿಸಿ ಅ. 27ರಂದು ತೀರ್ಪು ಕಾಯ್ದಿರಿಸಿತ್ತು.

Advertisement

ವಾದದ ಸಂದರ್ಭದಲ್ಲಿ ಅಭಿಪ್ರಾಯ ಮಂಡಿಸಿದ್ದ ನ್ಯಾಯಾಲಯ, ಯಾವುದೇ ಧರ್ಮ ಪಾಲಿಸಲು ಸ್ವಾತಂತ್ರ್ಯವಿದೆ. ಆದರೆ ಚುನಾವಣಾ ಉದ್ದೇಶಕ್ಕೆ ಇದನ್ನು ಬಳಸ ಬಹುದೇ ಎಂಬ ಪ್ರಶ್ನೆ ಎತ್ತಿತ್ತು. ಈಗ ತೀರ್ಪು ಪ್ರಕಟಿಸಿರುವ ನ್ಯಾಯಾ ಲಯ, “ದೇವರು ಮತ್ತು ಮಾನವನ ನಡುವಿನ ಸಂಬಂಧ ಆತನ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಆದರೆ ಸರಕಾರಗಳು ಈ ವಿಷಯಗಳಲ್ಲಿ  ತಲೆ ಹಾಕುವಂತಿಲ್ಲ’ ಎಂದು ಅಭಿಪ್ರಾಯಿಸಿತು.

ಸುಪ್ರೀಂ ಹೇಳಿದ್ದೇನು?
ಚುನಾವಣೆ ಎಂಬುದು ಜಾತ್ಯತೀತ ಪ್ರಕ್ರಿಯೆ. ಅಲ್ಲಿ ಯಾವುದೇ ಧರ್ಮ, ಜಾತಿ, ಮತ, ಸಮುದಾಯ ಅಥವಾ ಭಾಷೆಯ ಹೆಸರಲ್ಲಿ ಮತ ಕೇಳುವುದು ಅಕ್ರಮ. ಇದು ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಸಂವಿಧಾನಬಾಹಿರ ಎನಿಸಿಕೊಳ್ಳುತ್ತದೆ.

ಪ್ರಜಾಪ್ರತಿನಿಧಿ ಕಾಯ್ದೆಯ 123 (3) ಪರಿಚ್ಛೇದದಲ್ಲಿ ಇದ್ದ “ಆತನ ಧರ್ಮ’ ಎಂದರೆ ಬರೀ ಅಭ್ಯರ್ಥಿಯ ಧರ್ಮ ಆಗುವುದಿಲ್ಲ. ಅದು ಮತದಾರರು, ಅಭ್ಯರ್ಥಿ, ಆತನ ಏಜೆಂಟ್‌ ಸೇರಿ ಎಲ್ಲರ ಧರ್ಮವೂ ಆಗಿರುತ್ತದೆ.

ಯಾಕೆ ಈ ತೀರ್ಪು?
1995ರಲ್ಲಿ  ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ- ಶಿವಸೇನೆಯ ಹಲವು ಶಾಸಕರ ಆಯ್ಕೆಯನ್ನು ಬಾಂಬೆ ಹೈಕೋರ್ಟ್‌ ರದ್ದುಪಡಿಸಿತ್ತು. “ತನ್ನ ಜಾತಿ, ಧರ್ಮ, ಸಮುದಾಯ ಅಥವಾ ಭಾಷೆ ಹೆಸರಿನಲ್ಲಿ ಯಾವುದೇ ಅಭ್ಯರ್ಥಿ ಅಥವಾ ಆತನ ಏಜೆಂಟರು ಮತ ಕೇಳುವುದು, ಮತ ಹಾಕದಂತೆ ತಡೆಯುವುದು, ದೇಶದ ವಿವಿಧ ವರ್ಗಗಳ ನಡುವೆ ದ್ವೇಷ ಅಥವಾ ಶತ್ರುತ್ವ ಉತ್ತೇಜಿಸುವುದು, ಉತ್ತೇಜಿಸಲು ಯತ್ನಿಸುವುದು ಅಕ್ರಮ’ ಎಂಬ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 123 (3) ಆಧರಿಸಿ ನ್ಯಾಯಾಲಯ ತೀರ್ಪು ನೀಡಿತ್ತು. ಈ ಕುರಿತ ಮೇಲ್ಮನವಿ ವಿಚಾರಣೆ ನಡೆಸಿ 1995ರ ಡಿಸೆಂಬರ್‌ನಲ್ಲಿ ತೀರ್ಪು ಪ್ರಕಟಿಸಿದ್ದ ನ್ಯಾ| ಜೆ.ಎಸ್‌. ವರ್ಮಾ, ಹಿಂದುತ್ವದ ಹೆಸರಿನಲ್ಲಿ ಮತ ಕೇಳುವುದು ಚುನಾವಣಾ ಅಕ್ರಮವಲ್ಲ. ಹಿಂದುತ್ವ  ಎಂಬುದು ಜೀವನಶೈಲಿ ಎಂದು ಹೇಳಿದ್ದರು. ಅನಂತರದ ವರ್ಷಗಳಲ್ಲಿ ಇದೇ ರೀತಿಯಾದ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ನ್ಯಾ| ಜೆ.ಎಸ್‌. ವರ್ಮಾ ಪೀಠದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು. ಅಲ್ಲದೆ, “ಆತನ ಧರ್ಮ’ ಎಂಬ ಪದ ಸಾಕಷ್ಟು ವ್ಯಾಖ್ಯಾನಕ್ಕೆ ಕಾರಣವಾಗಿತ್ತು. ಹೀಗಾಗಿ ಪ್ರಕರಣವನ್ನು 2014ರ ಫೆಬ್ರವರಿಯಲ್ಲಿ ಸಪ್ತ ಸದಸ್ಯರ ಪೀಠಕ್ಕೆ ವರ್ಗಾಯಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next