Advertisement

ಕಾಂಗ್ರೆಸ್‌ನಲ್ಲಿ ಕೂಸು ಹುಟ್ಟುವ ಮುನ್ನ ಕುಲಾವಿ:CMಕುರ್ಚಿ ಮೇಲೆ ಪ್ರಬಲಸಮುದಾಯಗಳ ‘ಟವೆ‌ಲ್‌’

12:29 PM Sep 26, 2021 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬಂತೆ ಮುಖ್ಯಮಂತ್ರಿ ಕುರ್ಚಿ ಮೇಲೆ ಪ್ರಬಲ ಸಮುದಾಯಗಳು ಟವೆಲ್‌ ಹಾಕಲು ಮುಂದಾಗಿವೆ. ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಇರುವಾಗಲೇ “ಜಾತಿ ರಾಜಕೀಯ’ ಪ್ರಾರಂಭವಾಗಿದ್ದು, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ನಾಯಕರು ಮೈ ಕೊಡವಿ ನಿಂತಿದ್ದಾರೆ.

Advertisement

ಒಂದೆಡೆ ದಲಿತ ಸಿಎಂ ಬೇಡಿಕೆ ಜೀವಂತ ಇದ್ದರೆ ಮತ್ತೂಂದೆಡೆ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರು ತಮ್ಮ ತಮ್ಮ ಸಮುದಾಯದ ಶಾಸಕರ ಗುಂಪು ಕಟ್ಟಿಕೊಂಡು ಸಭೆ ನಡೆಸುತ್ತಿದ್ದು ಮೇಲ್ನೋಟಕ್ಕೆ ಪಕ್ಷ ಸಂಘಟನೆ ಎಂದು ಹೇಳುತ್ತಿದ್ದಾರಾದರೂ ಆಂತರಿಕವಾಗಿ ನಡೆದ ಚರ್ಚೆಯೇ ಬೇರೆ ಇದೆ ಎಂದು ಮೂಲಗಳು ತಿಳಿಸಿವೆ.

ಜಾತಿ ಜನಗಣತಿ ವರದಿ ಬಿಡುಗಡೆ ವಿಚಾರದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲು ಹಾಗೂ ಅದರ ನೇತೃತ್ವವನ್ನು ಸಿದ್ದರಾಮಯ್ಯ ಅವರೇ ವಹಿಸಲಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಜಾತಿ ರಾಜಕೀಯ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ.

ಮೂಲ ಅಜೆಂಡಾ: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ತಮಗೇ ಸಿಗಬೇಕು ಎಂಬುದು ಈ ಸಭೆಯ ಮೂಲ ಅಜೆಂಡಾ. ಇದರ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ.

ಒಕ್ಕಲಿಗ ಶಾಸಕರ ಸಭೆಯ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇದ್ದಾರೆ. ಲಿಂಗಾಯಿತ ಶಾಸಕರ ಸಭೆಗೆ ಎಂ.ಬಿ.ಪಾಟೀಲ್‌ -ಶಾಮನೂರು ಶಿವಶಂಕರಪ್ಪ ಅವರದೇ ನೇತೃತ್ವವಾಗಿದೆ. ದಲಿತರು, ಹಿಂದುಳಿದ, ಒಕ್ಕಲಿಗ ಹಾಗೂ ಲಿಂಗಾಯತರ ನಂತರ ಮುಂದೆ ಅಲ್ಪಸಂಖ್ಯಾತರ ಶಾಸಕರ ಸಭೆಯೂ ನಡೆದು ಪಕ್ಷದಲ್ಲಿ ಹೆಚ್ಚಿನ ಪ್ರಾಮುಖ್ಯತೆಗೆ ಬೇಡಿಕೆ ಇಡುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಸಿ.ಎಂ.ಇಬ್ರಾಹಿಂ ಇದೇ ಕಾರಣಕ್ಕೆ ಜೆಡಿಎಸ್‌ ಕಡೆ ಹೋಗುತ್ತಿದ್ದಾರೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಲು ತನ್ವೀರ್‌ ಸೇಠ್ ಸೇರಿದಂತೆ ಕೆಲವು ಶಾಸಕರು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಇದನ್ನೂ ಓದಿ:ಮತ್ತೊಮ್ಮೆ ಬಿಜೆಪಿ ಎಲ್ಲೆಡೆ ಗೆಲ್ಲುವ ವಾತಾವರಣ ಸೃಷ್ಟಿ: ನಳಿನ್‌ಕುಮಾರ್‌ ಕಟೀಲ್‌

ಈ ಹಿಂದೆ ಮುಂದಿನ ಸಿಎಂ ವಿಚಾರದಲ್ಲಿ ಆ ಸ್ಥಾನದ ರೇಸ್‌ನಲ್ಲಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಗುಂಪಿನ ನಡುವೆ ಜಿದ್ದಾಜಿದ್ದಿಯುಂಟಾಗಿ ಹೈಕಮಾಂಡ್‌ ಮಧ್ಯಪ್ರವೇಶದ ನಂತರ ಆ ವಿಚಾರ ತಣ್ಣಗಾಗಿತ್ತು. ಇದೀಗ ಜಾತಿ ರಾಜಕೀಯ ಪ್ರಾರಂಭವಾಗಿದೆ. ಪಕ್ಷ ಅಧಿಕಾರಕ್ಕೆ ಬರುವ ಮುನ್ನವೇ ನಡೆಯುತ್ತಿರುವ ಈ ವಿದ್ಯಮಾನಗಳು ನಿಷ್ಠಾವಂತ ಹಾಗೂ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟು ಮಾಡಲಿದೆ ಜತೆಗೆ ಗೊಂದಲಕ್ಕೂ ಕಾರಣ ವಾಗಲಿದೆ ಎಂದು ಮುಖಂಡರೊಬ್ಬರು ಹೇಳುತ್ತಾರೆ.

ಈ ಬೆಳವಣಿಗೆಗಳು ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಎಂ.ಬಿ.ಪಾಟೀಲ್ ಗುಂಪು ರಾಜಕಾರಣ ಶುರುವಾಗಲಿದೆ. ಇದರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು ಎಂದು ತಿಳಿಸುತ್ತಾರೆ.

ಜಾತಿಗಣತಿ ವರದಿ ಬಿಡುಗಡೆಗೂ ವಿರೋಧ:  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಜಾತಿ ಗಣತಿಯ ವರದಿ ಬಿಡುಗಡೆಗೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಪಕ್ಷದಲ್ಲೇ ಅದಕ್ಕೆ ವಿರೋಧವೂ ದೊಡ್ಡ ಪ್ರಮಾಣದಲ್ಲೇ ವ್ಯಕ್ತವಾಗುತ್ತಿದೆ. ಒಕ್ಕಲಿಗ ಹಾಗೂ ಲಿಂಗಾಯಿತ ಶಾಸಕರ ಸಭೆಯಲ್ಲೂ ಈ ಬಗ್ಗೆ ಆತಂಕ ವ್ಯಕ್ತವಾಗಿದೆ. ವರದಿ ಬಿಡುಗಡೆ ಹೋರಾಟಕ್ಕೆ ಕಾಂಗ್ರೆಸ್‌ ಅಥವಾ ಸಿದ್ದರಾಮಯ್ಯ ನೇತೃತ್ವ ವಹಿಸಬಾರದು ಎಂಬ ಆಗ್ರಹವೂ ಇದೆ. ಈ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷ ಹೆಚ್ಚಾದಷ್ಟೂ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್‌ಗೆ ವರವಾಗಬಹುದು ಎಂಬ ವ್ಯಾಖ್ಯಾನಗಳೂ ಇವೆ.

ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next