ಮುಂಬಯಿ, ಸೆ. 14: ನಾನೋರ್ವ ಬಂಟನಾಗಿದ್ದರೂ ನಾನೂ ನಾರಾಯಣ ಗುರುಗಳ ಸಿದ್ಧಾಂತಗಳ ಪಾಲಕ. ಗುರುವ ರ್ಯರ ಸಮಾಜೋದ್ಧಾರದ ಧ್ಯೇಯ ಮಾದರಿ ಯಾಗಿದೆ. ಜಾತಿ, ಮತ, ಧರ್ಮದ ಬಗ್ಗೆ ಕೀಳರಿಮೆ ಕಾಣದ ಗುರುವರ್ಯರು ಹುಟ್ಟು ಪವಾಡ ಪುರುಷರು. ಅವರ ಜೀವನತತ್ವ ಸಂದೇಶ ಎಂದಿಗೂ ಶಾಶ್ವತವಾಗಿದೆ. ಮನುಷ್ಯನಿಗೆ ಸ್ವಜಾತಿ ಮೇಲೆ ಪ್ರೀತಿ, ಅಭಿಮಾನವಿರಲಿ. ಆದರೆ ಜಾತಿ ಮತ ಭೇದ ನಿಂದನೆ ಸಲ್ಲದು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ತಿಳಿಸಿದರು.
ಇಂದು ರಾಷ್ಟ್ರದಲ್ಲೇ ಕೇರಳ ರಾಜ್ಯ ಸಾಕ್ಷರತೆಗೆ ಮೊದಲ ಸ್ಥಾನಿಯಾಗಿದ್ದರೆ, ಅದಕ್ಕೆ ನಾರಾಯಣ ಗುರುಗಳೇ ಕಾರಣ. ಯಾಕೆಂದರೆ ಮನೋಭಾವನೆಗಳ ಪರಿವರ್ತನೆಯಿಂದ ಸಮಾಜ ಸುಧಾರಣೆ ಸಾಧ್ಯ ಎಂದು ಅವರು ಕಾರ್ಯರೂಪದಲ್ಲಿ ತೋರಿಸಿದ್ದಾರೆ. ಇದನ್ನೇ ನಾವು ಮಕ್ಕಳಲ್ಲಿ ರೂಢಿಸಿ ಸಂಸ್ಕೃತಿ ಜೀವನ ಸಾರ್ಥ ಕವಾಗಿಸಿ ಬಾಳು ಬೆಳಗಿಸಬೇಕು ಎಂದರು.
ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನ ಪಂಚಕುಟೀರ ಸುವರ್ಣ ಮಂದಿರ ಪೊವಾಯಿ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಆಶೀರ್ವದಿಸಿದರು. ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಾರಂದಾಯ ದೈವದ ಪಾತ್ರಿ ಲಕ್ಷ್ಮೀನಾರಾಯಣ ಅನ್ನು ವಿ. ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಗೌರವಾಧ್ಯಕ್ಷ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದರು. ಜಿಎಸ್‌ಬಿ ಸಭಾ ದಹಿಸರ್-ಬೊರಿವಲಿ ಉಪಾಧ್ಯಕ್ಷ ಸಾಣೂರು ಮನೋಹರ್ ವಿ. ಕಾಮತ್, ಶಾಫಿ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಬಿ. ಮೊಯಿದ್ದೀನ್ ಮುಂಡ್ಕೂರು, ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಅಧ್ಯಕ್ಷ ಉತ್ತಮ್ ಶೇರಿಗಾರ್, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ, ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು.
Advertisement
ಸೆ. 13ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮ್ಮಲ್ಲಿ ಭಾಷೆ, ಜಾತಿಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿದ್ದರೂ ಸಾಂದರ್ಭಿಕವಾಗಿ ನಾವೆಲ್ಲರೂ ಒಂದಾಗಬೇಕು. ಅವಾಗಲೇ ಸಮಗ್ರ ಸಮಾಜದ ಉದ್ದೇಶಗಳು ಪರಿಪೂರ್ಣ ವಾಗುವುದು. ಸಂಘ ಮುನ್ನಡೆದರೆ ಸಮಾಜ, ರಾಷ್ಟ್ರದ ಮುನ್ನಡೆ ಸಾಧ್ಯ. ಇಂತಹ ಮುನ್ನಡೆ, ಪರಿವರ್ತನಾ ಕಾಲಘಟ್ಟಕ್ಕೆ ಗುರುವರ್ಯರ ತತ್ವಗಳು ಆದರ್ಶವಾಗಿದೆ.
Related Articles
Advertisement
ಧನಂಜಯ ಎಸ್. ಶಾಂತಿ ಮಹಾಮಂಗಳಾ ರತಿಗೈದರು. ಶೇಖರ್ ಶಾಂತಿ ಉಳ್ಳೂರು, ರವೀಂದ್ರ ಎ. ಶಾಂತಿ ಪೂಜೆಗೈದು ಪ್ರಸಾದ ವಿತರಿಸಿದರು. ಗಂಗಾಧರ ಸುವರ್ಣ ಗುರುವರ್ಯರನ್ನು ಭಾಗವತಿಕೆ ಧಾಟಿಯಲ್ಲಿ ಸ್ತುತಿಸಿದರು.
ಪರಿವರ್ತನ ಪರ್ವದ ಹರಿಕಾರ ಜಾತಿ, ಮತ, ಭೇದವನ್ನಳಿಸಿದ ಧೀರ ಸಮಾಜ ಸೇವಕ. ಅವರ ಸಾಮರಸ್ಯದ ತತ್ವ ಸಂದೇಶ ಜನಹಿತಕ್ಕೆ ಪೂರಕ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಸತ್ಯಾಸತ್ಯತೆಗಳ ಅನುಭವವನ್ನು ಜಗಕ್ಕೆ ಸಾರಿದ ಶ್ರೇಯಸ್ಸು ನಾರಾಯಣ ಗುರುಗಳಿಗಿದೆ ಎಂದು ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಅಧ್ಯಕ್ಷ ಉತ್ತಮ್ ಶೇರಿಗಾರ್ ತಿಳಿಸಿದರು.
ಸಾಣೂರು ಮನೋಹರ್ ವಿ. ಕಾಮತ್ ಅವರು ಮಾತನಾಡಿ, ಹಿಂದೂ ಅಂದುಕೊಳ್ಳುವ ಎಲ್ಲ ಜನರು ಒಂದಾದರೆ ಧರ್ಮಕ್ಕೆ ಎಂದೂ ಹಿನ್ನಡೆಯಾಗದು. ಪ್ರತಿಯೋರ್ವ ಭಾರತೀಯನಿಗೂ ಏನೂ ಕಡಿಮೆಯಾಗದು. ಬರೀ ವಿದ್ಯೆ ಕಲಿಕೆಯಲ್ಲಿ ಮಕ್ಕಳ ವಿಕಸನ ಅಸಾಧ್ಯ. ಬದಲಾಗಿ ಬದುಕು ರೂಪಿಸುವ ಸಂಸ್ಕಾರ ಮಕ್ಕಳಲ್ಲಿ ಮೂಡಿಸಿ ಅವರನ್ನು ಶ್ರೇಷ್ಠ ನಾಗರಿಕರನ್ನಾಗಿಸಿದರೆ ಎಲ್ಲರ ಬಾಳು ಹಸನಾಗುವುದು ಎಂದರು.
ಅಸೋಸಿಯೇಶನ್‌ನ ಉಪಾಧ್ಯಕ್ಷರುಗ ಳಾದ ಶಂಕರ ಡಿ. ಪೂಜಾರಿ, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎನ್. ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್, ಲೀಲಾವತಿ ಜಯ ಸುವರ್ಣ, ಭಾರತ್ ಬ್ಯಾಂಕಿನ ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ, ಬ್ಯಾಂಕಿನ ನಿರ್ದೆಶಕರು, ಉನ್ನತಾಧಿಕಾರಿಗಳು ಸೇರಿದಂತೆ ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಅತಿಥಿ-ಗಣ್ಯರನ್ನು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಗೌರವಿಸಿದರು.
ಸಾಮಾಜಿಕ-ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಜಿ. ಪೂಜಾರಿ ಸ್ವಾಗತಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಶಾಂತಿ ಅತಿಥಿಗಳನ್ನು ಪರಿಚಯಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಧಾರ್ಮಿಕ ಸಮಿತಿಯ ಗೌರವ ಕಾರ್ಯದರ್ಶಿ ರವೀಂದ್ರ ಎ. ಅಮೀನ್ ವಂದಿಸಿದರು. ಕೊನೆಯಲ್ಲಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ಮಾನವ ಬದುಕಿಗೆ ಸಂಪತ್ತು, ಐಶ್ವರ್ಯವೊಂದೇ ಭಾಗ್ಯವಲ್ಲ, ಆಧ್ಯಾತ್ಮಿಕವಾದ ಚಿಂತನ ಮಂಥನದ ಆತ್ಮಶುದ್ಧಿಯ ಬದುಕೇ ಶ್ರೇಷ್ಠವಾದ ಭಾಗ್ಯ. ಧಾರ್ಮಿಕ ಚೌಕಟ್ಟಿನೊಳಗೆ ಬಾಳು ಸಂಸ್ಕಾರಯುತವಾಗಿದೆ. ಆದ್ದರಿಂದ ಮಕ್ಕಳಲ್ಲಿ ಧಾರ್ಮಿಕ ವಿಚಾರಗಳು ಬೆಳೆದಾಗ ಮನುಷ್ಯ ಸಂಸ್ಕಾರಯುತ ಮಾನವನಾಗಿ ಬೆಳೆಯಲು ಸಾಧ್ಯ. – ಶ್ರೀನಿವಾಸ ಸಫಲಿಗ, ಅಧ್ಯಕ್ಷರು, ಸಾಫಲ್ಯ ಸೇವಾ ಸಂಘ ಮುಂಬಯಿ
ನಾರಾಯಣ ಗುರುಗಳ ಸಮಾಜಹಿತ ಚಿಂತನೆ ಆಧುನಿಕ ಯುಗಕ್ಕೆ ಆದರ್ಶವಾಗಿದೆ. ಮನುಷ್ಯನ ನಾಲ್ಕುದಿನದ ನೆಮ್ಮದಿಯ ಬಾಳ್ವೆಗೆ ಜಾತಿಮತದ ಚೌಕಟ್ಟು ಸರಿಯಲ್ಲ. ಇವೆಲ್ಲವೂ ಮನೆಯೊಳಗಿದ್ದು ಸಾರ್ವಜನಿಕವಾಗಿ ಸರ್ವಸಮಾನರಾಗಿ ಒಳ್ಳೆಯ ಮನುಷ್ಯರಾಗಿದ್ದರೆ ಜೀವನ ಸಾರ್ಥಕವಾಗುತ್ತದೆ. ಎಲ್ಲ ಸಮಾಜ ಬಾಂಧವರ ಒಗ್ಗಟ್ಟೇ ಸಮಗ್ರ ಸಮಾಜದ ಹಿತವಾಗಿದ್ದರೆ ದೇವರೂ ನಮ್ಮನ್ನು ಮೆಚ್ಚುತ್ತಾರೆ. – ಚಂದ್ರಶೇಖರ ಎಸ್. ಪೂಜಾರಿ, ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್ ಮುಂಬಯಿ
ಚಿತ್ರ-ವರದಿ: ರೋನ್ಸ್ ಬಂಟ್ವಾಳ್