Advertisement

ಜಾತಿ ಸಂಘರ್ಷ? ಸರ್ಕಾರದ ವಿರುದ್ಧ ಕುರುಬ ಸಮುದಾಯ ಆಕ್ರೋಶ

06:00 AM Jun 29, 2018 | |

ಮಂಗಳೂರು/ಬೆಂಗಳೂರು: “”ನೀವು ಯಾವುದೇ ಕಾರಣಕ್ಕೂ ಸೈಲೆಂಟಾಗಬಾರದು. ತಣ್ಣಗಾಗಕೂಡದು. ಈಗ ಕಿಚ್ಚು ಹಚ್ಚಿದೆ… ಉರಿಯುತ್ತಿದೆ. ಅದು ಯಾವುದೇ ಕಾರಣಕ್ಕೂ ಆರಲೂಬಾರದು…”

Advertisement

ಇದು, ಮಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಕರಾವಳಿ ಭಾಗದ ಕುರುಬ ಸಂಘಟನೆಗಳ ಪ್ರಮುಖರ ಮಾತುಗಳು. ಇದರ ನಡುವೆಯೇ ಬೆಂಗಳೂರಿನಲ್ಲೂ ಪತ್ರಿಕಾಗೋಷ್ಠಿ ನಡೆಸಿರುವ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು, ಕುರುಬ ಸಮಾಜದ ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿಯೇ ವರ್ಗಾವಣೆ ಮಾಡಲಾಗುತ್ತಿದೆ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇವೆಲ್ಲಾ ಬೆಳವಣಿಗೆಗಳೂ ರಾಜ್ಯದ ರಾಜಕೀಯ ಜಾತಿ ಸಂಘರ್ಷಕ್ಕೆ ತಿರುಗುವ ಲಕ್ಷಣಗಳನ್ನು ತೋರಿಸುತ್ತಿವೆ. ಜತೆಗೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಐದು ವರ್ಷದ ಆಡಳಿತಕ್ಕೆ ಯಾರೂ ಅಡ್ಡಿ ಮಾಡಬಾರದು ಎಂದು ಸ್ಪಟಿಕಪುರಿ ಪೀಠದ ನಂಜಾವಧೂತ ಸ್ವಾಮೀಜಿ ಹೇಳಿದ ಬೆನ್ನಲ್ಲೇ, ಕುರುಬ ಸಮುದಾಯದ ಶ್ರೀಗಳು ಸೇರಿದಂತೆ, ಮುಖಂಡರು, ಸಂಘಟನೆ ನಾಯಕರು ನೇರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ.

ಕುರುಬರ ಸಂಘ ಹೇಳಿದ್ದೇನು?
ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರೂ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಸೂಕ್ತ ಗೌರವ ನೀಡುತ್ತಿಲ್ಲ. ಸರ್ಕಾರವು ನಮ್ಮ ಸಮುದಾಯದ ನಾಯಕರನ್ನು ಟಾರ್ಗೆಟ್‌ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಎಚ್ಚರಿಕೆ ನೀಡಿದ್ದಾರೆ. 

ಎರಡು ಪಕ್ಷಗಳು ತಮ್ಮ ಸ್ಥಾನ ಹೆಚ್ಚಿಸಿಕೊಳ್ಳಲು ಕುರುಬ ಸಮುದಾಯದ ಪಾಲೂ ಇದೆ. ಆದರೆ, ಈಗ ಮುಖ್ಯಮಂತ್ರಿಗಳು ನಮ್ಮ ಸಮುದಾಯದವರಿಗೆ ತೊಂದರೆ ನೀಡುವ ರೀತಿಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ದೂರಿದರು. 

Advertisement

ಸಮ್ಮಿಶ್ರ ಸರ್ಕಾರವು ಕುರುಬ ಸಮುದಾಯದ ಅಧಿಕಾರಿಗಳು ಕೆಲಸಕ್ಕೆ ಸೇರಿದ 2-3 ತಿಂಗಳಲ್ಲಿಯೇ ವರ್ಗಾವಣೆ ಮಾಡುತ್ತಿದೆ. ಅವಧಿಪೂರ್ಣ ವರ್ಗಾವಣೆ ಮಾಡಿದ್ದಲ್ಲದೆ ವರ್ಗಾವಣೆಯಾದ ಅಧಿಕಾರಿಗಳಿಗೆ ಸ್ಥಳಗಳನ್ನು ತೋರಿಸುತ್ತಿಲ್ಲ, ಹುದ್ದೆ ನೀಡುತ್ತಿಲ್ಲ ಎಂದರು.

ಕುರುಬ ಎಂಬ ಜಾತಿಯ ಕಾರಣಕ್ಕಾಗಿ ವರ್ಗಾವಣೆ ಮಾಡುವುದರಿಂದ ಅಧಿಕಾರಿಗಳಲ್ಲಿರುವ ಆತ್ಮಸ್ಥೈರ್ಯ, ಸಾಮರ್ಥ್ಯ ಹಾಗೂ ಪ್ರತಿಭೆ ಎಲ್ಲವೂ ಕುಗ್ಗುವ ಅಪಾಯ ಇದೆ. ಹೀಗಾಗಿ, ಇಂತಹ ಕಿರುಕುಳ ನಿಲ್ಲಬೇಕು ಸರ್ಕಾರ ಬಂದ ನಂತರ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಯ 52 ಮುಖ್ಯ ಎಂಜಿನಿಯರುಗಳನ್ನು ಮತ್ತು ಐಎಎಸ್‌, ಐಪಿಎಸ್‌ ಹಾಗೂ ಕೆಎಎಸ್‌ ಅಧಿಕಾರಿಗಳನ್ನು ಸಮನ್ವಯ ಸಮಿತಿ ಗಮನಕ್ಕೂ ತಾರದೇ ವರ್ಗಾವಣೆ ಮಾಡಲಾಗಿದೆ. ಇದು ಸಮ್ಮಿಶ್ರ ಸರ್ಕಾರದ ರಾಜನೀತಿಯೇ ಎಂದು ಪ್ರಶ್ನಿಸಿದರು.

ಕಾಗಿನೆಲೆ ಶ್ರೀಗಳ ಎಚ್ಚರಿಕೆ
ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಹ, ಸಮ್ಮಿಶ್ರ ಸರ್ಕಾರದಲ್ಲಿ ಕುರುಬ ಸಮುದಾಯದ ಅಧಿಕಾರಿಗಳ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಒಕ್ಕಲಿಗ ಸಮುದಾಯಕ್ಕೆ ಮಾತ್ರ ಮುಖ್ಯಮಂತ್ರಿಯಲ್ಲ. ಕುರುಬ ಸಮುದಾಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಶಕ್ತಿ. ಅವರನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ  ಎದುರಿಸಬೇಕಾಗುತ್ತದೆ. ಇದನ್ನು ಕಾಂಗ್ರೆಸ್‌ ವರಿಷ್ಠರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.

ಕುರುಬರ ಸಂಘಕ್ಕೆ ಭೇಟಿ
ಪ್ರಕೃತಿ ಚಿಕಿತ್ಸೆ ಮುಗಿಸಿದ ಬಳಿಕ ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು, ಮೊದಲು ಕಾವೂರು ಶಾಂತಿ ನಗರದಲ್ಲಿರುವ ಕರಾವಳಿ ಕುರುಬರ ಸಂಘಕ್ಕೆ ಭೇಟಿ ನೀಡಿದರು. ಮಹಿಳೆಯರೊಬ್ಬರು ಮಾತನಾಡಿ, ನೀವು ಐದು ವರ್ಷ ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನಡೆಸಿದ ಕಾರಣದಿಂದಾಗಿ ಇಂದು ಕುರುಬ ಸಮುದಾಯ ತಲೆಯೆತ್ತಿ ಧೈರ್ಯದಿಂದ ಮುನ್ನಡೆಯುವಂತಾಗಿದೆ. ನಿಮ್ಮಿಂದಾಗಿ ನಾವು ಇಂದು ತಾಕತ್ತು ಪಡೆದುಕೊಂಡಿದ್ದೇವೆ. ಹೀಗಿರುವಾಗ ನೀವು ಇಂತಹ ಕಾಲದಲ್ಲಿ ಮೌನವಾಗಕೂಡದು. ಯಾವುದೇ ರಾಜಕೀಯ ಸವಾಲಿಗೂ ತಣ್ಣಗಾಗಲೇ ಬಾರದು ಎಂದು ಮನವಿ ಮಾಡಿದರು.

ಇನ್ನೂ ಕೆಲವು ಮುಖಂಡರು ಮಾತನಾಡಿ, ಸರಕಾರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ವರ್ಗಾವಣೆಯಲ್ಲೂ ನಿಮ್ಮನ್ನು ಕಡೆಗಣಿಸಲಾಗಿದೆ. ಹೀಗಾಗಿ ಇದೆಲ್ಲದಕ್ಕೆ ಕಡಿವಾಣ ಬೀಳಬೇಕಿದೆ. ಇಲ್ಲವಾದರೆ, ಯಾರನ್ನೂ ಇವರು ಉಳಿಸಲ್ಲ. ತಾವು ಕಷ್ಟಪಟ್ಟು 5 ವರ್ಷ ಮಾಡಿದ ಯಶಸ್ವಿ ಯೋಜನೆಗಳು ಈಗ ನೀರುಪಾಲಾಗುವಂತಾಗಿದೆ ಎಂದರು.

ಮೌನಕ್ಕೆ ಶರಣಾದ ಸಿದ್ದು!
ಸಿದ್ದರಾಮಯ್ಯ ಅವರಲ್ಲಿ ಸುದ್ದಿಗಾರರು ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರೀಯೆ ಕೇಳಲು ಬಯಸಿದಾಗ, ಯಾವುದೇ ಪ್ರಶ್ನೆಗೆ ಉತ್ತರ ನೀಡುವುದಿಲ್ಲ ಎಂದರು. “ಪ್ರಕೃತಿ ಚಿಕಿತ್ಸೆ ಬಗ್ಗೆ ಹೇಳಿ’ ಎಂದು ಸುದ್ದಿಗಾರರು ಕೇಳಿದಾಗ “ಡಾಕ್ಟರ್‌ ಅವರಲ್ಲಿ ಕೇಳಿ’ ಎಂದರು. “ನಾನಿಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಿಮ್ಮ ಜತೆಗೆ ಮಾತನಾಡಲು ಬಂದಿಲ್ಲ. ನಡೀರಿ’ ಎಂದು ಸುದ್ದಿಗಾರರಿಗೆ ಹೇಳಿದರು. 

“ಕಾಗಿನೆಲೆ ಶ್ರೀಗಳ ಹೇಳಿಕೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, “ಗೊತ್ತಿಲ್ಲ, ನಾನೇನೂ ಮಾತನಾಡಲ್ಲ’ ಎಂದಷ್ಟೇ ಉತ್ತರಿಸಿದರು. “ನಾನು ಮಾತನಾಡಬೇಕು ಅಂದಾಗ ನಾನೇ ನಿಮ್ಮನ್ನು (ಮಾಧ್ಯಮ)ಕರೆದು ಮಾತನಾಡುತ್ತೇನೆ. ಈಗ ಹೋಗಿ ಮಾರಾಯೆÅ’ ಎಂದು ಮತ್ತೆ ಸಿದ್ದರಾಮಯ್ಯ ಹೇಳಿದರು. ಸ್ವಲ್ಪ ಹೊತ್ತಿನ ಅನಂತರ, “ನಿಮಗೆ ಸುದಿ ªಕೊಡಬೇಕು ಅಂತ ನನಗೆ ಇಷ್ಟ ಇಲ್ಲವಾ? ಕೊಡ್ತೀನಿ. ಈಗ ಬೇಡ’ ಎಂದರು. 

“ಅದು ಯಾವ ರೀತಿ ಸುದ್ದಿ ಸಾರ್‌?’ ಎಂದು ಸುದ್ದಿಗಾರರು ಮರು ಪ್ರಶ್ನಿಸಿದಾಗ “ಅಯ್ಯೋ ನಡೀರಿ’ ಅಂದರು. ಮತ್ತೆ ಸುದ್ದಿಗಾರರು ದೇವೇಗೌಡರ ಹೆಸರು ಉಲ್ಲೇಖೀಸಿದಾಗ ಸಿಡಿಮಿಡಿಗೊಂಡ ಸಿದ್ದರಾಮಯ್ಯ “ಈಗೇನು ಮಾತನಾಡಲ್ಲ. ಹೋಗಿ’ ಎಂದು ಕೋಪದಿಂದಲೇ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next