ಎಚ್.ಡಿ.ಕೋಟೆ: ಗ್ರಾಮದ 2 ಸಮುದಾಯಗಳ ನಡುವೆ ಜಟಾಪಟಿ ನಡೆದಿದ್ದು, ದಲಿತ ಯುವಕನ ಮೇಲೆ ಗುಂಪೊಂದು ಸೈಕಲ್ ಚೈನ್‌ನಿಂದ ಹಲ್ಲೆ ನಡೆಸಿದೆ. ಈ ಸಂಬಂಧ 11ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲೂಕಿನ ಅಣ್ಣೂರು ಹೊಸಳ್ಳಿಯ ದಲಿತ ಯುವಕ ಯೋಗೇಶ್ (25) ಹಲ್ಲೆಗೊಳಗಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದ ಕೆಂಡ, ಕೆಂಡ ಅಲಿಯಾಸ್ ಕೆಂಚ, ಆನಂದ, ನೀಲಪ್ಪ, ನಾಗೇಂದ್ರ, ಚಂದ್ರ, ಉಮೇಶ್, ಶಿವಕುಮಾರ್, ಮಧು, ಪಾಪಣ್ಣ ಸೇರಿದಂತೆ 11ಮಂದಿ ವಿರುದ್ದ ಹಲ್ಲೆ ಮತ್ತು ಜಾತಿ ನಿಂದನೆಯಡಿ ಪ್ರಕರಣ ದಾಖಲಾಗಿದೆ. ಈ ಪೈಕಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆ ವಿವರ: ತಾಲೂಕಿನ ಹೊಸಳ್ಳಿಯಲ್ಲಿ ದೇವಸ್ಥಾನಕ್ಕೆ ದಲಿತ ಪ್ರವೇಶ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕೈದು ವರ್ಷಗಳಿಂಂದ ವೈಷಮ್ಯ ಇತ್ತು. ಗ್ರಾಮದಲ್ಲಿ ಬಹುಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದವರಿದ್ದು, ಸುಮಾರು 40 ಕುಟುಂಬಗಳು ಮಾತ್ರ ದಲಿತರಿದ್ದಾರೆ. ದಲಿತರು ಲಿಂಗಾಯತರ ಸಾರ್ವಜನಿಕ ರಸ್ತೆ ಮಾರ್ಗವಾಗಿಯೇ ಪ್ರತಿದಿನ ಸಂಚರಿಸಬೇಕಾದ ಅನಿವಾರ್ಯತೆ ಇದ್ದು, ಈ ರಸ್ತೆ ಮಾರ್ಗ ಹೊರತು ಪಡಿಸಿ ಬೇರೆ ರಸ್ತೆ ಮಾರ್ಗ ಇಲ್ಲ.
ಸೋಮವಾರ ದಲಿತ ಯುವಕ ಮಹೇಶ್ ಎಂಬಾತ ಕೆಲಸ ನಿಮಿತ್ತ ರಸ್ತೆ ಮಾರ್ಗವಾಗಿ ಸಂಚರಿಸಿದಾಗ ಲಿಂಗಾಯತ ಸಮುದಾಯದವರು ರಸ್ತೆ ಮಾರ್ಗವಾಗಿ ಸಂಚರಿಸದಂತೆ ಮಹೇಶ್‌ಗೆ ಎಚ್ಚರಿಕೆ ನೀಡಿದ್ದಾರೆ.
ಸಂಜೆ ವೇಳೆ ಮಹೇಶ್, ಯೋಗೇಶ್ ಸುರೇಶ್ ಸೇರಿದಂತೆ ಇನ್ನಿತರರು ಸಾರ್ವಜನಿಕ ರಸ್ತೆ ಮಾರ್ಗವಾಗಿ ಸಂಚರಿಸದೇ ಬೇರೆ ಇನ್ನೆಲ್ಲಿ ಸಂಚರಿಸಬೇಕು ಎಂದು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದು ಲಿಂಗಾಯತ ಸಮುದಾಯದವರು ಅವಾಚ್ಯ ಶಬ್ದ ಬಳಕೆ ಹಾಗೂ ಜಾತಿ ನಿಂದನೆ ಮಾಡಿ ಸೈಕಲ್ ಚೈನ್‌ನಿಂದ ಯೋಗೇಶ್ ತಲೆಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗ್ರಾಮದಲ್ಲಿ ಅಶಾಂತಿಗೆ ಕಾರಣರಾಗಿ ಹಲ್ಲೆ ನಡೆಸಿದ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ಪೈಕಿ ಮೂವರನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಚೇತನ್, ಹುಣಸೂರು ಡಿವೈಎಸ್ಪಿ ರವಿಪ್ರಸಾದ್ ಸೋಮವಾರ ತಡರಾತ್ರಿಯೇ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದ ದಲಿತ ಕೇರಿ ಮತ್ತು ಲಿಂಗಾಯತ ಕೇರಿಗಳಲ್ಲಿ ತಲಾ ಒಂದೊಂದು ಪೊಲೀಸ್ ತುಕ್ಕಡಿಗಳನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.