Advertisement

K. Jayaprakash Hegde: ನವೆಂಬರ್‌ ಅಂತ್ಯಕೆ ಜಾತಿ ಗಣತಿ ಪರಿಷ್ಕೃತ ವರದಿ

10:32 AM Sep 06, 2023 | Team Udayavani |

ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿ ಗಣತಿ) ಮುನ್ನೆಲೆಗೆ ಬಂದಿದೆ. ಸಮೀಕ್ಷೆ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಬೆನ್ನಲ್ಲೇ ಕೆಲವು ಸಮುದಾಯಗಳಲ್ಲಿ ಸಂಭ್ರಮ ಇಮ್ಮಡಿಗೊಂಡಿದೆ. ಆದರೆ, ಮತ್ತೂಂದೆಡೆ “ಈ ವರದಿಯೇ ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು’ ಎಂದು ಒಕ್ಕಲಿಗರು ಸೇರಿ ಹಲವು ಸಮುದಾಯಗಳು ಪಟ್ಟುಹಿಡಿದಿವೆ. ಈ ಬೆನ್ನಲ್ಲೇ, “ಉದಯವಾಣಿ’ ಜತೆ ನೇರಾ-ನೇರ ಮಾತಿಗಿಳಿದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸರ್ಕಾರದಿಂದ ಯಾವುದೇ ಒತ್ತಡ ಇಲ್ಲ; ನನ್ನ ಅಧಿಕಾರಾವಧಿ (ನ.26) ಮುಗಿಯುವ ಮೊದಲೇ ಹಲವು ಮಾರ್ಪಾಡುಗಳೊಂದಿಗೆ ಈ “ಪರಿಷ್ಕೃತ ವರದಿ’ ನೀಡುವ ಗುರಿ ಇದೆ. ಉಳಿದದ್ದು ಸರ್ಕಾರಕ್ಕೆ ಬಿಟ್ಟಿದ್ದು ಎಂದ ಅವರು ಖಚಿತಪಡಿಸಿದ್ದಾರೆ.

Advertisement

ಒಂದು ವರ್ಗ ಜಾತಿ ಗಣತಿ ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ. ಮತ್ತೂಂದು ವರ್ಗ ಅದಕ್ಕೆ ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಸಂದರ್ಭದಲ್ಲಿ ಆಯೋಗದ ನಿಲುವೇನು??

– ಈ ಹಿಂದಿನ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿಯ ದತ್ತಾಂಶ ಗಳನ್ನು ಬಳಸಿಕೊಂಡು ವರದಿ ಸಲ್ಲಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ ನಿಷ್ಪಕ್ಷಪಾತವಾಗಿ ಹಲವು ಮಾರ್ಪಾ ಡುಗಳೊಂದಿಗೆ ವರದಿ ಸಲ್ಲಿಸಲಾಗುವುದು. ಇದನ್ನು ನವೆಂ ಬರ್‌ ಅಂತ್ಯದೊಳಗೆ ವರದಿ ಸರ್ಕಾರದ ಮುಂದಿಡಲಾಗುವುದು.

ಸಮೀಕ್ಷೆ ವರದಿ ಬಗ್ಗೆಯೇ ಸಂಶಯಗಳು ವ್ಯಕ್ತವಾಗುತ್ತಿವೆ. ಅದೇ ವರದಿಯನ್ನು ನೀವು ಸಲ್ಲಿಸಲು ಹೊರಟಿದ್ದೀರಿ. ಇದು ಎಷ್ಟು ಸಮಂಜಸ?

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 2015ರಲ್ಲಿ ಈ ಸಮೀಕ್ಷೆ ನಡೆದಿತ್ತು. ಹಳ್ಳಿಗಳು, ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸಿದವರು ಶಿಕ್ಷಕರು. ಅವರಿಗೆ ಯಾರ ಹಿತಾಸಕ್ತಿ ಇರಲು ಸಾಧ್ಯವಿಲ್ಲ. ಇನ್ನು ಆ ದತ್ತಾಂಶಗಳನ್ನು ಸಂಗ್ರಹಿಸಿಟ್ಟಿದ್ದು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ., (ಬಿಇಎಲ್‌). ಆ ದತ್ತಾಂಶಗಳನ್ನು ಉಪಯೋಗಿಸಿಕೊಂಡು ಸರ್ಕಾರದ ಸೂಚನೆಯಂತೆ ನಾವು ವರದಿ ಸಲ್ಲಿಸುತ್ತಿದ್ದೇವೆ. ಇಲ್ಲಿ ಆಯೋಗದ ಪಾತ್ರ ಏನಿದೆ?

Advertisement

ಹಾಗಿದ್ದರೆ, ಸರ್ಕಾರದ ಒತ್ತಡ ಇದೆಯೇ? ಪ್ರಮುಖ ಮಾರ್ಪಾಡುಗಳು ಆಗಲಿವೆಯೇ?

ಈ ವಿಚಾರದಲ್ಲಿ ಸರ್ಕಾರದ ಒತ್ತಡ ಇಲ್ಲ. ವರದಿ ಸಲ್ಲಿಕೆ ನನ್ನ ಜವಾಬ್ದಾರಿ ಆಗಿದೆ. ಅದನ್ನು ನಿಭಾಯಿಸುತ್ತಿದ್ದೇನೆ ಅಷ್ಟೇ. ಇನ್ನು ಮಾರ್ಪಾಡು ವಿಷಯಕ್ಕೆ ಬರುವುದಾದರೆ, ಮೊದಲಿಗೆ ಆ ವರದಿಯನ್ನು ಓದಬೇಕು. ಅದರಲ್ಲಿನ ಸಂಖ್ಯೆಗಳನ್ನು ಆಧರಿಸಿ ವಿವಿಧ ಸಮುದಾಯಗಳ ಉದ್ಯೋಗ, ಶೈಕ್ಷಣಿಕ ಗುಣಮಟ್ಟವನ್ನು ಅಧ್ಯಯನ ಮಾಡಲಾಗುವುದು. ಅದಕ್ಕೆ ಅನುಗುಣವಾಗಿ ವೈಜ್ಞಾನಿಕ ವರದಿ ಒಪ್ಪಿಸಲಾಗುವುದು.

ಹಾಗಿದ್ದರೆ, ಅಂದಿನ ಸರ್ಕಾರಕ್ಕೆ ತರಾತುರಿ ಇತ್ತಾ?

ತರಾತುರಿ ಇತ್ತು ಎಂದು ನಾನು ಹೇಳುವುದಿಲ್ಲ. ಹಾಗೆ ಹೇಳು ವುದು ಕೂಡ ತಪ್ಪಾಗುತ್ತದೆ. ಸರ್ಕಾರದ ನಿರ್ದೇಶನದಂತೆ ಮಧ್ಯಂತರ ವರದಿ ಸಲ್ಲಿಸಿದ್ದೆವಷ್ಟೇ.

ಅಲ್ಪಸಂಖ್ಯಾತರಿಗೆ ನೀಡಿದ ಮೀಸಲಾತಿಯನ್ನು ಬೇರೆ ಸಮುದಾಯಗಳಿಗೆ ಕೊಡಲು ಶಿಫಾರಸು ಮಾಡಿದ ಬಗ್ಗೆ ಏನು ಹೇಳುವಿರಿ?

ಹಾವನೂರು ಆಯೋಗವು ಅಲ್ಪಸಂಖ್ಯಾತರಿಗೆ ಶೇ.6 ರಷ್ಟು ಮೀಸಲಾತಿ ಕೊಡಿ ಎಂದು ಹೇಳಿತ್ತು. ಚಿನ್ನಪ್ಪರಡ್ಡಿ ಆಯೋಗ ಕೂಡ ಪರಿಶಿಷ್ಟ ಜಾತಿ ಮತ್ತು ಪಂಗಡದ ನಂತರದ ಸ್ಥಾನದಲ್ಲೇ ಅಲ್ಪಸಂಖ್ಯಾತರು ಬರುತ್ತಾರೆ ಎಂದು ಹೇಳುವ ಮೂಲಕ ಮೀಸಲಾತಿ ಕೊಡಲೇಬೇಕು ಎಂದು ಹೇಳಿತ್ತು. ನಮ್ಮ ವರದಿಯಲ್ಲಿ ಕೂಡ ಎಲ್ಲಿಯೂ ಅಲ್ಪಸಂಖ್ಯಾತರ ಮೀಸಲಾತಿ ವಾಪಸ್‌ ಪಡೆಯಬೇಕು ಎಂದು ಹೇಳಿಲ್ಲ.

ಪ್ರಬಲ ಸಮುದಾಯಗಳು ಕೂಡ ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಬೇಕು ಎಂದು ಪ್ರತಿಪಾದನೆ ಮಾಡುತ್ತಿವೆ. ಸಮಸ್ಯೆಗೆ ಪರಿಹಾರ ಏನು?

– ಯಾರು ಯಾವುದೇ ರೀತಿಯ ಮೀಸಲಾತಿಗೆ ಬೇಡಿಕೆ ಇಟ್ಟರೂ ಅದನ್ನು ಜನಸಂಖ್ಯೆ ಆಧಾರದಲ್ಲಿ ಆ ಸಮು ದಾಯ ಗಳ ಶಿಕ್ಷಣ ಮತ್ತು ಉದ್ಯೋಗದ ಗುಣಮಟ್ಟ ಅಧ್ಯಯನ ಮಾಡಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅಂತಹ ಸಮಸ್ಯೆಗಳಿಗೆ ಅದೊಂದೇ ಪರಿಹಾರ.

ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್‌)ಮಾದರಿಯಲ್ಲೇ ಕರ್ನಾಟಕದಲ್ಲೂ ಪ್ರತ್ಯೇಕ ಕೋಟಾ ವ್ಯವಸ್ಥೆ ಪರಿಚಯಿಸಲು ಸಾಧ್ಯವಿದೆಯೇ?

ಖಂಡಿತ ಸಾಧ್ಯವಿದೆ. ರಾಜ್ಯದಲ್ಲಿ ಎಷ್ಟು ಜಾತಿಗಳಿವೆ? ಯಾರಿಗೆ ಎಷ್ಟು ಮೀಸಲಾತಿ ಮತ್ತು ಸರ್ಕಾರದ ಸೌಲಭ್ಯಗಳು ಸಿಗುತ್ತಿವೆ ಎನ್ನುವುದನ್ನು ಲೆಕ್ಕಹಾಕಿ, ಸೂಕ್ತ ಅಧ್ಯಯನ ಮಾಡಿ ಪ್ರತ್ಯೇಕ ವ್ಯವಸ್ಥೆ ಜಾರಿಗೊಳಿಸಲು ಅವಕಾಶ ಇದೆ. ಆದರೆ, ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು.

ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ನಡೆಸಿದ ಸಮೀಕ್ಷೆ ಬಗ್ಗೆ ಹೇಳಿ…

– ನಾನು ಸೇರಿದಂತೆ ಆಯೋಗದ ಐದು ಜನ ಸದಸ್ಯರು ರಾಜ್ಯದ 18ರಿಂದ 20 ಜಿಲ್ಲೆಗಳ ಹಳ್ಳಿ-ಹಳ್ಳಿಗಳನ್ನು ಸುತ್ತಿದ್ದೇವೆ. ಮನೆ-ಮನೆಗಳಿಗೆ ಭೇಟಿ ಮಾಡಿ, ಆ ಮನೆಗಳಲ್ಲಿ ಎಷ್ಟು ಜನ ಕಲಿತಿದ್ದಾರೆ? ಎಷ್ಟು ಜನ ಉದ್ಯೋಗದಲ್ಲಿದ್ದಾರೆ? ಆದಾಯ ಎಷ್ಟಿದೆ? ಈ ಎಲ್ಲ ಮಾಹಿತಿ ಕಲೆಹಾಕಿ ವರದಿ ಸಿದ್ಧಪಡಿಸಲಾಗುತ್ತಿದೆ.

ಬರೀ ಮಧ್ಯಂತರ ವರದಿ ಆಗಿತ್ತು:

ಮಧ್ಯಂತರ ವರದಿ ಆಧರಿಸಿ ಸರ್ಕಾರ ಘೋಷಿಸಿದ್ದ ವೀರಶೈವ- ಲಿಂಗಾಯತ ಮತ್ತು ಒಕ್ಕಲಿಗರಿಗೆ ಪ್ರವರ್ಗ 2ಡಿ ಹಾಗೂ 2ಸಿ ಮೀಸಲಾತಿ ಘೋಷಣೆಗೆ ನ್ಯಾಯಾಲಯದಲ್ಲಿ ಮನ್ನಣೆಯೇ ಸಿಗಲಿಲ್ಲ. ಇದು ಪರೋಕ್ಷವಾಗಿ ನಿಮ್ಮ ವರದಿಯನ್ನು ಪ್ರಶ್ನಿಸಿದಂತೆ ಆಗಲಿಲ್ಲವೇ? –

ಅದು ಬರೀ ಮಧ್ಯಂತರ ವರದಿ ಆಗಿತ್ತು. ಸರ್ಕಾರ ತೀರ್ಮಾನ ಕೈಗೊಳ್ಳಬೇಕಾದ್ದು ಅಂತಿಮ ವರದಿ ಬಂದ ಬಳಿಕ. ಹಾಗಾಗಿ, ಅದನ್ನು ಕೋರ್ಟ್‌ನಲ್ಲಿ ಕೆಲವರು ಚಾಲೆಂಜ್‌ ಮಾಡಿದರು. ಕೊನೆಗೆ ಅಂದಿನ ಸರ್ಕಾರ ತನ್ನ ಆದೇಶವನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿತು.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next