Advertisement
ಜಾತಿಗಣತಿಯಿಂದ ಹಿಂದುಳಿದವರಿಗೆ ಅರ್ಹ ನ್ಯಾಯ
Related Articles
Advertisement
ಇದನ್ನು ಮನಗಂಡ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ 2013ರಲ್ಲಿ ರಾಷ್ಟ್ರದಲ್ಲೇ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಆದೇಶ ನೀಡಿ, 178.00 ಕೋಟಿ ರೂ. ಬಿಡುಗಡೆ ಮಾಡಿ, ಕೀರ್ತಿಗೆ ಪಾತ್ರರಾಗಿರುತ್ತಾರೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗಗಳನ್ನು ನೇಮಿಸಿರುವುದು ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠ ನೀಡಿರುವ ನಿರ್ದೇಶನದ ಮೇಲೆ. (ಇಂದಿರಾ ಸಾಹಿ° ವರ್ಸಸ್ ಯೂನಿಯನ್ ಆಫ್ ಇಂಡಿಯಾ) ಈ ಕಾರಣಕ್ಕೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಆಯಾ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಆಯೋಗಗಳನ್ನು ನೇಮಿಸಿವೆ.
ಈ ಹಿನ್ನೆಲೆಯಲ್ಲಿ ಸದರಿ ಹಿಂದುಳಿದ ವರ್ಗಗಳ ಆಯೋಗ ಜಾತಿಪಟ್ಟಿ ಮತ್ತು ಪ್ರವರ್ಗಗಳನ್ನು ರೂಪಿಸಿರುವುದು ಅನೇಕ ಆಯೋಗಗಳ ವರದಿಗಳ ಆಧಾರದ ಮೇಲೆ ಮತ್ತು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ನೀಡಿರುವ ನಿರ್ದಿಷ್ಟ ಮಾನದಂಡಗಳ (ಇಂಡಿಕೇಟರ್) ಆಧಾರದ ಮೇಲೆ ಅನ್ನುವುದು ಗಮನಾರ್ಹ. ಬಹುಮುಖ್ಯವಾಗಿ ಪ್ರವರ್ಗ 2 (ಎ)ನಲ್ಲಿರುವ ಜಾತಿವರ್ಗಗಳು ಬಹುತೇಕ ಕುಶಲಕರ್ಮಿಗಳು ಮತ್ತು ಭೂ ರಹಿತರು. ಇವರು ಮೂಲತ: ಕುಲಕಸುಬುಗಳನ್ನು ಹೊಂದಿರುವವರು. ಆದರೆ ಇಂದು ಪ್ರವರ್ಗ 2(ಎ)ಗೆ ತಮ್ಮನ್ನು ಹಾಕಬೇಕೆಂದು ಆಗ್ರಹಿಸುತ್ತಿರುವವರು ಅವರೇ ಹೇಳುವಂತೆ ಕೃಷಿಕರು ಮತ್ತು ಭೂ ಒಡೆತನ ಹೊಂದಿರುವವರು. ಈ ಮೂಲಭೂತ ವ್ಯತ್ಯಾಸದ ಕಾರಣಕ್ಕೆ ಸದರಿ ಮುಂದುವರಿದ ಸಮುದಾಯವನ್ನು ಪ್ರವರ್ಗ 2(ಎ) ಪಟ್ಟಿಗೆ ಸೇರಿಸಲು ಆಗ್ರಹಿಸುತ್ತಿರುವುದು ವೈಜಾ`ನಿಕವಾಗಿ ಮತ್ತು ಸಾಂವಿಧಾನಿಕವಾಗಿ ಅಸಿಂಧುವಾಗಿರುತ್ತದೆ.
ಈ ಎಲ್ಲ ಗೊಂದಲಗಳನ್ನು ಪರಿಹರಿಸುವ ಏಕೈಕ ಮಾರ್ಗವೆಂದರೆ ಜಾತಿಗಣತಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸುಮಾರು 3 ವರ್ಷಗಳ ಕಾಲ ಸಮೀಕ್ಷೆ ಮಾಡಿ, ಈ ವರದಿಯನ್ನು ಸಿದ್ಧ ಪಡಿಸಿದೆ. ಹಿಂದುಳಿದ ವರ್ಗಗಳ ಆಯೋಗದ ಮೂಲಕ ಮಾಡಿರುವ ಜಾತಿವಾರು ಸಮೀಕ್ಷೆಯನ್ನು ಸ್ವೀಕರಿಸಿ ಆಯೋಗ ನೀಡಿರುವ ಅಂಕಿಅಂಶಗಳ ಆಧಾರದ ಮೇಲೆ ಈಗಿರುವ ಪಟ್ಟಿಗಳನ್ನು ಪುನರ್ ಪರಿಶೀಲಿಸಿ, ಪರಿಷ್ಕೃತ ಪಟ್ಟಿಗಳನ್ನು ರೂಪಿಸುವ ಆವಶ್ಯಕತೆ ಇರುತ್ತದೆ. ಪ್ರವರ್ಗ 2ಎ ನಲ್ಲಿ 102 ಜಾತಿಗಳಿದ್ದು, ಶೇ.15 ಮೀಸಲಾತಿ, ಪ್ರವರ್ಗ 1ರಲ್ಲಿ 95 ಜಾತಿಗಳಿದ್ದು ಶೇ. 4 ಮೀಸಲಾತಿ, ಪ್ರವರ್ಗ 2ಬಿಗೆ ಶೇ.4 ಮೀಸಲಾತಿ, ಪ್ರವರ್ಗ 3ಎಗೆ ಶೇ.4 ಮೀಸಲಾತಿ, ಪ್ರವರ್ಗ 3ಬಿಗೆ ಶೇ.5 ಮೀಸಲಾತಿ ನೀಡಲಾಗಿದ್ದು, ಒಟ್ಟು ಶೇ. 32 ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರುವುದು ಸರಿಯಷ್ಟೆ.
ಹಾಲಿ ಎಲ್ಲ ಹಿಂದುಳಿದ ವರ್ಗಗಳಿಗೂ ಒಟ್ಟಾರೆ ಶೇ.32 ಮೀಸಲಾತಿ ಇದೆ. ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಹಾಗೂ ಯಾವುದೇ ಮಾನದಂಡಗಳನ್ನು ಅನುಸರಿಸದೆ, ಯಾವುದೇ ಆಯೋಗಗಳಿಂದ ಶಿಫಾರಸು ಇಲ್ಲದೆ, ಕೇವಲ ರಾಜಕೀಯ ಉದ್ದೇಶಗಳಿಗಾಗಿ ಹಿಂದಿನ ಸರಕಾರಗಳು ಈ ಮೀಸಲಾತಿ ನೀಡಿವೆ. ಇದನ್ನು ಆಯಾ ಜಾತಿಗಳ ಜನಸಂಖ್ಯಾನುಸಾರವಾಗಿ ನೀಡದಿರುವುದರಿಂದ ಶೇ.90ರಷ್ಟು ಜಾತಿಗಳಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಯಾವುದೇ ಸವಲತ್ತುಗಳು ಸಿಕ್ಕಿಲ್ಲ. ಈಗ ಜಾತಿಗಣತಿಯನ್ನು ಪರಿಗಣಿಸುವುದರಿಂದ ಯಾವ ಯಾವ ಜಾತಿಯಲ್ಲಿ ಎಷ್ಟು ಜನರು ಇದ್ದಾರೆ? ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಏನಿದೆ? ಹಿಂದುಳಿದ ವರ್ಗಗಳು ಎಲ್ಲೆಲ್ಲಿ, ಎಷ್ಟು ಜನರಿದ್ದಾರೆ? ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ? ಎಂಬುದನ್ನು ಅರಿತು ಅವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಅವಕಾಶವಿದೆ.
ಆದ್ದರಿಂದ ಪ್ರಸಕ್ತ ಜಾರಿಯಲ್ಲಿರುವ ಶೇ.32 ಮೀಸಲಾತಿ ಸೌಲಭ್ಯಗಳನ್ನು ಸಂಪೂರ್ಣವಾಗಿ ಪುನರ್ ಪರಿಶೀಲಿಸಬೇಕು. ಅತೀ ಹಿಂದುಳಿದ ಎಲ್ಲ ಜಾತಿಗಳಿಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸಬೇಕು. ಪ್ರವರ್ಗ 2ಎನಲ್ಲಿ ಬರುವ ಹಿಂದುಳಿದ ವರ್ಗಗಳಲ್ಲಿ ಅತೀ ಹಿಂದುಳಿದಿರುವ ಜಾತಿಗಳಿಗೆ ಒಳ ಮೀಸಲಾತಿ ನೀಡಿ, ಸಾಮಾಜಿಕ ನ್ಯಾಯ ನೀಡಬೇಕು. ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು ಆಯೋಗದಲ್ಲಿರುವ ಜಾತಿ ಸಮೀಕ್ಷಾ ವರದಿಯನ್ನು ರಾಜ್ಯ ಸರಕಾರ ತರಿಸಿಕೊಂಡು ಕೂಡಲೇ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು.
ಎಂ.ಸಿ.ವೇಣುಗೋಪಾಲ್
(ಲೇಖಕರು ವಿಧಾನ ಪರಿಷತ್ತಿನ ಮಾಜಿ ಸದಸ್ಯರು, ಕರ್ನಾಟಕ ರಾಜ್ಯ ಅತೀ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷರು)
ಲೋಪದ ಜಾತಿಗಣತಿ ಒಪ್ಪಲು ಅಸಾಧ್ಯ
ವೀರಶೈವ-ಲಿಂಗಾಯತ ಧರ್ಮವು ವರ್ಗ, ವರ್ಣ, ವೃತ್ತಿ, ಲಿಂಗಭೇದಗಳನ್ನು ಪರಿಗಣಿಸದೆ “ಸರ್ವರಿಗೂ ಸಮಪಾಲು; ಸರ್ವರಿಗೂ ಸಮಬಾಳು’ ಎಂಬ ಉದಾತ್ತ ಆಶಯಗಳ ಮೂಲಕ ದಯವೇ ಧರ್ಮದ ಮೂಲವೆಂದು ಸಾರಿ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವಿಶಾಲ ವ್ಯಾಪ್ತಿಯ ಧರ್ಮ. ನಮ್ಮ ಸಮಾಜದ ಮಠಗಳು ಎಲ್ಲ ವರ್ಗಗಳ ಜನರಿಗೆ ಅಕ್ಷರ, ಊಟ, ವಸತಿ ನೀಡುತ್ತಿರುವುದು ಇದಕ್ಕೊಂದು ಉದಾಹರಣೆ.
ಬಸವಾದಿ ಶಿವಶರಣರ ಆಶೋತ್ತರಗಳನ್ನು ಅನುಸರಿಸಿಕೊಂಡು ಬರುತ್ತಿರುವ ಅಖೀಲ ಭಾರತ ವೀರ ಶೈವ- ಲಿಂಗಾಯತ ಮಹಾ ಸಭೆಯು ಎಂದಿಗೂ ಜಾತಿಗಣತಿಯನ್ನಾಗಲೀ ಅಥವಾ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಯನ್ನಾಗಲೀ ವಿರೋಧಿಸಿಲ್ಲ. ಸರಕಾರದ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯಬೇಕೆಂಬುದು ಮಹಾಸಭೆಯ ಆಶಯ. ಇಂತಹ ಗಣತಿಗಳಿಂದ ಸರಕಾರದ ಸೌಲಭ್ಯಗಳು ನ್ಯಾಯಯುತವಾಗಿ ಎಲ್ಲ ಸಮಾಜ ದವರಿಗೂ ಅವರುಗಳ ಸಂಖ್ಯೆಗನುಗುಣವಾಗಿ ದೊರೆಯುವಂತಾಗಬೇಕೆಂಬುದು ಸಂವಿಧಾನದ ಆಶಯ ಕೂಡ ಆಗಿದೆ.
ಆದರೆ ಕಾಂತರಾಜು ಆಯೋಗದ ವರದಿಯು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ ಜತೆಗೆ ಜಾತಿವಾರು ಸಮೀಕ್ಷೆಯನ್ನು ಮಾಡಿರುವುದು, ವರದಿ ಬಿಡುಗಡೆಗೂ ಮುಂಚೆಯೇ ಮಾಧ್ಯಮಗಳಲ್ಲಿ ಸಮೀಕ್ಷೆಯ ಜಾತಿವಾರು ಅಂಕಿ-ಅಂಶಗಳು ಬಹಿರಂಗವಾಗಿರು ವುದು, ಈ ಅಂಕಿ-ಅಂಶಗಳನ್ನು ಆಯೋಗವಾಗಲೀ ಅಥವಾ ಸರಕಾರವಾಗಲೀ ತಿರಸ್ಕರಿಸದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
1984ರಲ್ಲಿ ನ್ಯಾ| ಚಿನ್ನಪ್ಪರೆಡ್ಡಿ ಹಿಂದುಳಿದ ವರ್ಗದ ಆಯೋಗವು ನೀಡಿದ ವರದಿಯ ಪ್ರಕಾರ 43 ಉಪಜಾತಿಗಳನ್ನೊಳಗೊಂಡ ವೀರಶೈವ- ಲಿಂಗಾಯತರ ಜನಸಂಖ್ಯೆ 61,42,000 (ಅರವತ್ತೂಂದು ಲಕ್ಷದ ನಲವತ್ತೆರಡು ಸಾವಿರ) ಇದ್ದು, ಅವರು ಸೂಚಿಸಿದ ಪ್ರಕಾರವೇ ಲೆಕ್ಕ ಹಾಕಿದರೆ 2016ಕ್ಕೆ 1,13,70,000 (ಒಂದು ಕೋಟಿ ಹದಿಮೂರು ಲಕ್ಷದ ಎಪ್ಪತ್ತು ಸಾವಿರ) ಜನ ಸಂಖ್ಯೆ ಇರಬೇಕು. ಈಗ ಕಾಂತರಾಜ್ ಆಯೋ ಗವು 107 ಉಪಜಾತಿಗಳನ್ನು ಗುರುತಿಸಿದ್ದು, ಚಿನ್ನಪ್ಪ ರೆಡ್ಡಿ ಆಯೋಗವು ಗುರುತಿಸಿದ್ದಕ್ಕಿಂತ 64 ಉಪಜಾತಿಗಳು ಜಾಸ್ತಿಯಾಗಿವೆ. ಆದರೂ ಕಾಂತರಾಜುರವರ ಆಯೋಗವು ನಡೆಸಿದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯಲ್ಲಿ ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮಾಜದ ಜನಸಂಖ್ಯೆ ಕೇವಲ 59 ಲಕ್ಷ ಕುಸಿದಿದೆ. ಇದರಿಂದ ಈ ಸಮೀಕ್ಷೆಯು ಅವೈಜ್ಞಾನಿಕತೆಯಿಂದ ಕೂಡಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಗಣತಿಯಲ್ಲಿ ನಮ್ಮ ಸಮಾಜದ 78 ಜಾತಿ, ಉಪಜಾತಿಗಳಿಗೆ ಸಂಕೇತ ಸಂಖ್ಯೆ ಕೊಟ್ಟಿದ್ದು, ಇಲ್ಲಿ ದುರುದ್ದೇಶದಿಂದಲೋ ಅಥವಾ ನಮ್ಮ ಸಮಾಜದವರಿಗೆ ಗೊಂದಲ ಉಂಟುಮಾಡುವ ಸಲುವಾಗಿಯೋ ಪ್ರಕಟನೆ ಮಾಡಿದಂತಿದೆ. ಕೆಲವೊಂದು ಹೆಸರಿನ ಸುಮಾರು 10 ಉಪಜಾತಿಗಳನ್ನು ಸೇರಿಸಿ ಒಂದೇ ಸಂಕೇತ ಸಂಖ್ಯೆ ಕೊಟ್ಟಿದ್ದಾರೆ. ಕೆಲವೊಂದು ಜಾತಿ, ಉಪಜಾತಿಗಳ ಪರ್ಯಾಯ ಹೆಸರಿನ 10 ಉಪಜಾತಿಗಳಿಗೂ ಒಂದೊಂದು ಪ್ರತ್ಯೇಕ ಸಂಕೇತ ಸಂಖ್ಯೆಗಳನ್ನು ಕೊಟ್ಟು ಗೊಂದಲ ಮೂಡಿಸಿದ್ದಾರೆ. ಸಮಾಜದ ಸುಮಾರು 78 ಜಾತಿ, ಉಪಜಾತಿಗಳಿಗೆ ಸಂಕೇತ ಸಂಖ್ಯೆ ಕೊಟ್ಟಿದ್ದು, ಇನ್ನೂ 29 ಉಪಜಾತಿಗಳಿಗೆ ಸಂಕೇತ ಸಂಖ್ಯೆಯನ್ನು ಕೊಡದೇ ಹಿಂದೂ ಧರ್ಮದ ಪಂಗಡಗಳಲ್ಲಿ ಸೇರಿಸಿರುತ್ತಾರೆ. ಈ ನ್ಯೂನತೆಗಳನ್ನು ಸರಿಪಡಿಸುವಂತೆ ಮಹಾಸಭೆ ಯಿಂದ ಸಾಕಷ್ಟು ಮನವಿಗಳನ್ನು ಕೊಟ್ಟಿದ್ದರೂ ಸಹ ಯಾವುದೇ ತಿದ್ದುಪಡಿ ಮಾಡದೇ ಸಮೀಕ್ಷೆ ಮಾಡಿರುವುದು ನಮ್ಮ ಆತಂಕವನ್ನು ಹೆಚ್ಚು ಮಾಡಿದೆ. ನಮ್ಮ ಆಂತರಿಕ ಮಾಹಿತಿ ಪ್ರಕಾರ ಗಣತಿ ದಾರರು ಸುಮಾರು ವೀರಶೈವ-ಲಿಂಗಾಯತರ ಮನೆಗಳಿಗೆ ಭೇಟಿ ನೀಡಿಲ್ಲ.
ಆದ್ದರಿಂದ ಈ ವರದಿ ಸಮಗ್ರವಾಗಿಲ್ಲ ಮತ್ತು ವೈಜ್ಞಾನಿಕವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಬದಲು ಕೇವಲ ಜಾತಿವಾರು ಸಂಖ್ಯೆಯನ್ನು ವ್ಯವಸ್ಥಿತವಾಗಿ ಸೋರಿಕೆ ಮಾಡಿ ಗೊಂದಲ ಮೂಡಿಸಲಾಗಿದೆ. ಈ ಸಮೀಕ್ಷೆಯ ಹಿಂದೆ ರಾಜಕೀಯ ದುರುದ್ದೇಶವಿದೆ. ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆಯುವ ಹುನ್ನಾರವಿದೆ ಎಂಬ ಆತಂಕವನ್ನುಂಟು ಮಾಡಿದೆ.
ಹಿಂದುಳಿದ ವರ್ಗಗಳನ್ನು ಗುರುತಿಸುವ ಗಣ ತಿಗೆ ಮಹಾಸಭಾದ ವಿರೋಧವಿಲ್ಲ. ಆದರೆ ಅದು ವೀರಶೈವ-ಲಿಂಗಾಯತರಲ್ಲಿರುವ ಹಿಂದುಳಿದ ವರನ್ನೂ ಪರಿಗಣಿಸಬೇಕು. ಯಾವುದೇ ಗಣತಿ ವೈಜ್ಞಾನಿಕವಾಗಿರಬೇಕು, ಪಾರದರ್ಶಕವಾಗಿರ ಬೇಕು ಮತ್ತು ಸಮಗ್ರವಾಗಿರಬೇಕು. ಗಣತಿ ಬಗ್ಗೆ ಜಾಗೃತಿ ಮೂಡಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು. ಡಿಜಿಟಲ್ ಗಣತಿ ನಡೆಯಬೇಕು. ಮೊಬೈಲ್ ಆ್ಯಪ್ಲಿಕೇಶನ್ ಮೂಲಕ ವಿವರಗಳನ್ನು ಸಂಗ್ರಹಿಸಬೇಕು. ಆಧಾರ್ ಸಂಖ್ಯೆ ಜೋಡಣೆಯಾಗಬೇಕು. ಕುಟುಂಬವನ್ನು ಒಂದು ಘಟಕವಾಗಿ ಪರಿಗಣಿಸಬೇಕು. ಗಣತಿ ಕುರಿತು ಒಂದು ಪೋರ್ಟಲ್/ವೆಬ್‌ಸೈಟ್‌ನಲ್ಲಿ ಸ್ವಯಂ ವಿವರಗಳನ್ನು ದಾಖಲಿಸುವ ವ್ಯವಸ್ಥೆಯಿರಬೇಕು. ಪ್ರತೀ ಕುಟುಂಬಕ್ಕೆ ಆ ಪೋರ್ಟಲ್‌ನಲ್ಲಿ ಗುರುತಿನ ಸಂಖ್ಯೆಯನ್ನು ಸೃಷ್ಟಿಸಬೇಕು. ಗಣತಿದಾರರು ಮನೆ-ಮನೆಗೆ ಭೇಟಿ ನೀಡಿದಾಗ ಆ ಸ್ವಯಂ ವಿವರಗಳನ್ನು ಖಚಿತ ಪಡಿಸಿಕೊಳ್ಳಬೇಕು. ಜಾತಿವಾರು ಸ್ಥಿತಿ-ಗತಿ ವಿವರಗಳ ವರ್ಗೀಕರಣಕ್ಕೆ ಡಾಟಾ ಸೈನ್ಸ್ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಸಾಧನಗಳನ್ನು ಬಳಸಬೇಕು.
ಆದ್ದರಿಂದ ಸುಮಾರು ಎಂಟು ವರ್ಷಗಳಷ್ಟು ಹಳೆಯದಾದ ಮತ್ತು ಅನೇಕ ಲೋಪದೋಷ ಗಳಿಂದ ಕೂಡಿರುವ ಕಾಂತರಾಜು ಆಯೋಗದ ವರದಿಯು ಈಗಿನ ಕಾಲಕ್ಕೆ ಅಪ್ರಸ್ತುತವಾಗಿದೆ. ಮೇಲ್ಕಂಡ ಎಲ್ಲ ತಂತ್ರಜ್ಞಾನಗಳನ್ನು ಬಳಸಿಕೊಂಡು, ಲೋಪ-ದೋಷಗಳನ್ನು ಸರಿಪಡಿಸಿಕೊಂಡು ಸರಕಾರವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವುದಾದರೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ. ಸರಕಾರ ಯಾವುದೋ ಉದ್ದೇಶದಿಂದ ವರದಿಯನ್ನು ಅಂಗೀಕರಿಸುವ ಹಠಕ್ಕೆ ಬೀಳದೇ, ಎಲ್ಲರ ಅಭಿಪ್ರಾಯಗಳನ್ನು ಗೌರವಿಸುವ ಮೂಲಕ ಸರ್ವಜನಾಂಗದ ಶಾಂತಿಯ ತೋಟವಾಗಿರುವ ನಮ್ಮ ರಾಜ್ಯದಲ್ಲಿ ಅಶಾಂತಿಯನ್ನು ಉಂಟುಮಾಡ ಬಾರದು ಎಂಬ ವಿನಮ್ರ ಕಳಕಳಿ ನಮ್ಮದು.
ಎಚ್.ಎಂ.ರೇಣುಕ ಪ್ರಸನ್ನ
(ಲೇಖಕರು ಅಖೀಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಕಾರ್ಯದರ್ಶಿ)