Advertisement
ಜಾತಿಗಣತಿ ಹಿನ್ನೆಲೆಭಾರತದಲ್ಲಿ ಬ್ರಿಟಿಷರು ಆಡಳಿತ ನಡೆಸುತ್ತಿದ್ದ ವೇಳೆ ಜಾತಿ ಆಧರಿತ ಜನಗಣತಿಯನ್ನು ನಡೆಸುತ್ತಿದ್ದರು. 1881ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಬ್ರಿಟಿಷರು ಜನಗಣತಿ ನಡೆಸಿದ್ದರು. ಈ ಸಂದರ್ಭದಲ್ಲಿ ಜಾತಿಗಳನ್ನು ಆಧರಿಸಿ ಜನಗಣತಿಯನ್ನು ನಡೆಸಲಾಗಿತ್ತು. 1931ರ ವರೆಗೆ ಇದೇ ಮಾದರಿಯಲ್ಲಿ ದೇಶದಲ್ಲಿ ಜನಗಣತಿಯನ್ನು ನಡೆಸುತ್ತ ಬರಲಾಗಿತ್ತು. 1941ರಲ್ಲಿ ಜಾತಿ ಆಧರಿತ ಜನಗಣತಿಯನ್ನು ನಡೆಸಲಾಗಿತ್ತಾದರೂ ಇದರ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಲಾಗಿರಲಿಲ್ಲ.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ರಾಷ್ಟ್ರದ ಸಂವಿಧಾನ ನಿರ್ಮಾತೃಗಳು ಮತ್ತು ಸ್ವತಂತ್ರ ಭಾರತದ ಮೊದಲ ಸರಕಾರದ ಕ್ಯಾಬಿನೆಟ್, ಜಾತಿಗಣತಿ ಆಧರಿತ ಜನಗಣತಿಯನ್ನು ನಡೆಸದಿರುವ ತೀರ್ಮಾನ ಕೈಗೊಂಡಿತು. ಜಾತಿಗಣತಿ ನಡೆಸುವುದರಿಂದ ಸಮಾಜ ಜಾತಿ ಆಧರಿತವಾಗಿ ವಿಭಜನೆಗೊಂಡೀತು ಎಂಬ ಆತಂಕವನ್ನು ಆಗಿನ ನಾಯಕರು ವ್ಯಕ್ತಪಡಿಸಿದ್ದರು. ಈ ಕ್ಯಾಬಿನೆಟ್‌ನಲ್ಲಿ ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್‌ರಂತಹ ನಾಯಕರಿದ್ದರು ಎಂಬುದಿಲ್ಲಿ ಉಲ್ಲೇಖಾರ್ಹ. ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ 1951ರಲ್ಲಿ ದೇಶದಲ್ಲಿ ಸಾರ್ವತ್ರಿಕ ಜನಗಣತಿ ನಡೆಯಿತು. ಸಂವಿಧಾನದಲ್ಲಿ ಎಸ್ಸಿ/ಎಸ್ಟಿಗೆ ಮೀಸಲಾತಿ ಕಲ್ಪಿಸಿದ್ದುದರಿಂದ ಜನಗಣತಿ ವೇಳೆ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜಾತಿಗಳ ಗಣತಿಯನ್ನು ಮಾತ್ರವೇ ಪ್ರತ್ಯೇಕವಾಗಿ ನಡೆಸಲಾಗಿತ್ತು.
Related Articles
1931ರ ಜಾತಿಗಣತಿಯ ಪ್ರಕಾರ ದೇಶದಲ್ಲಿ ಒಟ್ಟು 4,147 ಜಾತಿಗಳಿದ್ದರೆ ಎಸ್‌ಇಸಿಸಿ-2011ರ ಪ್ರಕಾರ ದೇಶದಲ್ಲಿ 46 ಲಕ್ಷ ವಿವಿಧ ಜಾತಿ, ಉಪಜಾತಿಗಳಿದ್ದವು. ಇಷ್ಟೊಂದು ಭಾರೀ ಸಂಖ್ಯೆಯ ಜಾತಿಗಳು ದೇಶದಲ್ಲಿರಲು ಅಸಾಧ್ಯ. ಜಾತಿಗಣತಿಯ ವರದಿ ಸಂಪೂರ್ಣ ಲೋಪದೋಷಗಳಿಂದ ಕೂಡಿದ್ದಾಗಿದ್ದು ಈ ವರದಿಯ ಅಂಕಿಅಂಶಗಳನ್ನು ಮೀಸಲಾತಿ ಅಥವಾ ಇತರ ನೀತಿ ನಿರ್ಣಾಯಕ ವಿಷಯಗಳಲ್ಲಿ ಪರಿಗಣಿಸಲು ಸಾಧ್ಯವಾಗದು ಎಂಬುದು ಕೇಂದ್ರ ಸರಕಾರದ ವಾದವಾಗಿದೆ.
Advertisement
ಜಾತಿಗಣತಿ ನಡೆಸಲು ಕೇಳಿಬಂದಿತ್ತು ಆಗ್ರಹಬಡತನ ನಿರ್ಮೂಲನೆ, ಸಾಮಾಜಿಕ ನ್ಯಾಯ, ಸಮಾನತೆ ಮತ್ತಿತರ ಕಾರಣಗಳನ್ನು ಮುಂದಿಟ್ಟು ಕೆಲವೊಂದು ಅದರಲ್ಲೂ ಮುಖ್ಯವಾಗಿ ಜಾತಿ ಆಧರಿತ ಪಕ್ಷಗಳೇ ಜಾತಿಗಣತಿಗಾಗಿ ಸರಕಾರವನ್ನು ಆಗ್ರಹಿಸಲಾರಂಭಿಸಿದವು. 1980ರ ದಶಕದ ಬಳಿಕವಂತೂ ದೇಶದಲ್ಲಿ ಹಲವಾರು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಈ ಪಕ್ಷಗಳು ಸರಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಜಾತಿವಾರು ಮೀಸಲಾತಿಯ ಬೇಡಿಕೆಯನ್ನು ಸರಕಾರದ ಮುಂದಿಟ್ಟವು. ಬಿಎಸ್‌ಪಿ ನಾಯಕ ಕಾನ್ಶಿàರಾಮ್ ಅವರು ಉತ್ತರ ಪ್ರದೇಶದಲ್ಲಿ ಜಾತಿ ಆಧಾರದಲ್ಲಿ ಮೀಸಲಾತಿಯನ್ನು ನೀಡಬೇಕೆಂಬ ಬೇಡಿಕೆಯನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಮಂಡಲ್ ಆಯೋಗ ಮತ್ತು ವಿವಾದ
1979ರಲ್ಲಿ ಕೇಂದ್ರ ಸರಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಸಂಬಂಧ ಅಧ್ಯಯನ ನಡೆಸಲು ಮಂಡಲ್ ಆಯೋಗವನ್ನು ರಚಿಸಿತು. ಈ ಆಯೋಗವು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಂತೆ ತನ್ನ ವರದಿಯಲ್ಲಿ ಸರಕಾರಕ್ಕೆ ಶಿಫಾರಸು ಮಾಡಿತು. 1990ರಲ್ಲಿ ಪ್ರಧಾನಿ ವಿ.ಪಿ.ಸಿಂಗ್ ನೇತೃತ್ವದ ಸರಕಾರ ಮಂಡಲ್ ಆಯೋಗದ ಶಿಫಾರಸನ್ನು ಜಾರಿಗೊಳಿಸಿತು. ಇದನ್ನು ವಿರೋಧಿಸಿ ದೇಶಾದ್ಯಂತ ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಬೀದಿಗಿಳಿದು ಭಾರೀ ಪ್ರತಿಭಟನೆಯನ್ನು ನಡೆಸಿದರು.
ಇದು ದೇಶಾದ್ಯಂತ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಯಿತು. ಯುಪಿಎ ಅವಧಿಯಲ್ಲಿ ನಡೆದಿತ್ತು ಎಸ್‌ಇಸಿಸಿ!
2010ರಲ್ಲಿ ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್‌ರಂತಹ ಒಬಿಸಿ ನಾಯಕರು ಜಾತಿಗಣತಿ ನಡೆಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರದ ಮೇಲೆ ಭಾರೀ ಒತ್ತಡ ಹೇರಿದ್ದರು. ಅಷ್ಟೇ ಅಲ್ಲದೆ ಹಿಂದುಳಿದ ವರ್ಗಗಳಿಗೆ ಸೇರಿದ ಕಾಂಗ್ರೆಸ್ ನಾಯಕರು ಕೂಡ ಈ ಬೇಡಿಕೆಗೆ ದನಿಗೂಡಿಸಿದ್ದರು. 2011ರಲ್ಲಿ ಮನಮೋಹನ್ ಸಿಂಗ್ ಸರಕಾರ ಸಾಮಾಜಿಕ-ಆರ್ಥಿಕ ಜಾತಿಗಣತಿ (ಎಸ್‌ಇಸಿಸಿ)ಯನ್ನು ನಡೆಸುವ ನಿರ್ಧಾರ ಕೈಗೊಂಡಿತು. ಎಸ್‌ಇಸಿಸಿ ನಡೆಸಲು ಸರಕಾರ ಬಜೆಟ್‌ನಲ್ಲಿ 4,389ಕೋ. ರೂ.ಗಳನ್ನು ಮೀಸಲಿರಿಸಿತ್ತು. 2013ರಲ್ಲಿ ಈ ಜಾತಿಗಣತಿ ಪೂರ್ಣಗೊಂಡಿತ್ತಾದರೂ ಅಂತಿಮ ವರದಿ ರಚನೆ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಆ ಬಳಿಕ ಸರಕಾರಕ್ಕೆ ಅಂತಿಮ ವರದಿ ಸಲ್ಲಿಕೆಯಾದರೂ ಈವರೆಗೂ ಎಸ್‌ಇಸಿಸಿ ವರದಿಯನ್ನು ಕೇಂದ್ರ ಸರಕಾರ ಬಹಿರಂಗಗೊಳಿಸಿಲ್ಲ. ಬಿಜೆಪಿ ವಿರೋಧ ಯಾಕೆ?
ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಜಾತಿಗಣತಿಗೆ ಈ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸಲು ವಿಪಕ್ಷಗಳು ಯತ್ನಿಸುತ್ತಿವೆ. ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ಇದೇ ತಂತ್ರವನ್ನು ಅನುಸರಿಸಿದ್ದ ವಿಪಕ್ಷಗಳು ಈಗಲೂ ಅದನ್ನೇ ಅನುಸರಿಸುತ್ತಿವೆ ಎಂದು ಆರೋಪಿಸಿದೆ. ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ವಿಪಕ್ಷಗಳು ಅಧಿಕಾರದಲ್ಲಿದ್ದ ವೇಳೆ ಈ ಸಮುದಾಯಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸದೇ ಅವರನ್ನು ಮತ್ತಷ್ಟು ಬಡವರನ್ನಾಗಿಸಿದರು. ಈಗ ಮತ್ತದೇ ನಾಟಕವಾಡುತ್ತಿದೆ ಎಂಬುದು ಬಿಜೆಪಿಯ ನೇರ ಆರೋಪ. ಆದರೆ ವಾಸ್ತವದಲ್ಲಿ ಬಿಜೆಪಿಗೆ ಜಾತಿಗಣತಿ ವಿಚಾರ ಇತ್ತ ನುಂಗಲೂ ಆಗದ, ಅತ್ತ ಉಗುಳಲೂ ಆಗದ ಬಿಸಿತುಪ್ಪದಂತಾಗಿದೆ. ವಿಪಕ್ಷಗಳ ಈ ಅಸ್ತ್ರ ಬಿಜೆಪಿಯನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ. ತನ್ನ ಸಾಂಪ್ರದಾಯಿಕ ಮೇಲ್ಜಾತಿ ಮತ್ತು ಶ್ರೀಮಂತ ವರ್ಗದ ಓಟ್‌ಬ್ಯಾಂಕ್ ಅನ್ನು ಉಳಿಸಿಕೊಳ್ಳುವುದರ ಜತೆಯಲ್ಲಿ ಒಬಿಸಿ ಮತಗಳನ್ನು ತನ್ನತ್ತ ಸೆಳೆಯುವ ಅನಿವಾರ್ಯತೆಯಲ್ಲಿ ಬಿಜೆಪಿ ಸಿಲುಕಿದೆ. ಹೀಗಾಗಿಯೇ ಪ್ರಧಾನಿ ಮೋದಿ ಆದಿಯಾಗಿ ಬಿಜೆಪಿ ಘಟಾನುಘಟಿ ನಾಯಕರು ವಿಪಕ್ಷಗಳತ್ತ ರಾಜಕೀಯ ಪ್ರತ್ಯಸ್ತ್ರಗಳನ್ನು ಪ್ರಯೋಗಿಸಲಾರಂಭಿಸಿದ್ದಾರೆ. ಇದರ ಭಾಗವೇ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಪಕ್ಷಗಳನ್ನು ಗುರಿಯಾಗಿಸಿ ಅಲ್ಪಸಂಖ್ಯಾಕ ಅಸ್ತ್ರವನ್ನು ಪ್ರಯೋಗಿಸಿರುವುದು. ಮೋದಿ ಸರಕಾರದಿಂದ ಸುಪ್ರೀಂಗೆ ಅಫಿದವಿತ್
ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿ 2021ರ ಜನಗಣತಿ ವೇಳೆ ಗ್ರಾಮೀಣ ಭಾರತದಲ್ಲಿ ಹಿಂದುಳಿದ ವರ್ಗಗಳ ಜನರ ಸ್ಥಿತಿಗತಿಯನ್ನು ಅರಿತುಕೊಳ್ಳಲು ಸಾಧ್ಯವಾಗುವಂತೆ ಹಿಂದುಳಿದ ವರ್ಗಗಳ ಜನರ ಅಂಕಿಅಂಶಗಳನ್ನು ಸಂಗ್ರಹಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಂಡಿತ್ತು. ಅಲ್ಲದೆ ಎಸ್‌ಇಸಿಸಿ-2011ರಲ್ಲಿ ಇತರ ಹಿಂದುಳಿದ ವರ್ಗಗಳ ಬಗೆಗೆ ಸಂಗ್ರಹಿಸಲಾದ ಅಂಕಿಅಂಶಗಳನ್ನು ಬಿಡುಗಡೆ ಮಾಡುವಂತೆಯೂ ಕೋರಲಾಗಿತ್ತು. 2021ರ ಸೆಪ್ಟಂಬರ್ 23ರಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿದವಿತ್‌ನಲ್ಲಿ ಸಾಮಾಜಿಕ-ಆರ್ಥಿಕ ಜಾತಿ ಗಣತಿಯನ್ನು ನಡೆಸುವ ಯಾವುದೇ ಇರಾದೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಅಷ್ಟು ಮಾತ್ರವಲ್ಲದೆ ಇದರಲ್ಲಿ ಮೂರು ಪ್ರಮುಖ ಅಂಶಗಳ ಬಗೆಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. 01 ಇದೊಂದು ನೀತಿ ನಿರೂಪಣ ನಿರ್ಧಾರವಾಗಿರುವುದರಿಂದ ನ್ಯಾಯಾಲಯಗಳು ಇದರಲ್ಲಿ ಹಸ್ತಕ್ಷೇಪ ನಡೆಸುವಂತಿಲ್ಲ.
02 ಜಾತಿ ಆಧರಿತ ಗಣತಿ ನಡೆಸುವುದು ಪ್ರಾಯೋಗಿಕವಾದುದಲ್ಲ.
03 ಜಾತಿ ಆಧರಿತ ಗಣತಿ ನಡೆಸುವುದು ಆಡಳಿತಾತ್ಮಕವಾಗಿಯೂ ಭಾರೀ ಕಷ್ಟದಾಯಕ ಕಾರ್ಯವಾಗಿದೆ. ನನೆಗುದಿಗೆ ಬಿದ್ದ ವರದಿ
2013ರಲ್ಲಿ ಎಸ್‌ಇಸಿಸಿ ಪೂರ್ಣಗೊಂಡು ಅಂತಿಮ ವರದಿಯನ್ನು ಸಿದ್ಧಪಡಿಸಲಾಗಿತ್ತು. 2014ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಿತು. 2015ರ ಜುಲೈಯಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯುವುದಕ್ಕೂ ಮುನ್ನ ಆಗಿನ ಕೇಂದ್ರ ಹಣ ಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಜಾತಿಗಣತಿ ವರದಿ ಯನ್ನು ಬಹಿರಂಗಗೊಳಿಸುವುದಾಗಿ ಭರವಸೆ ನೀಡಿದ್ದರು. ಈ ವರದಿ ಯಲ್ಲಿ 46 ಲಕ್ಷ ಜಾತಿಗಳು ಮತ್ತು ಉಪಜಾತಿಗಳನ್ನು ಉಲ್ಲೇಖೀಸ ಲಾಗಿದೆ. ಹೀಗಾಗಿ ಇದನ್ನು ಕ್ರೋಡೀಕರಿಸಿ ಕೊಡಲು ರಾಜ್ಯ ಸರಕಾರ ಗಳಿಗೆ ಕಳುಹಿಸಿ ಕೊಡಲಾಗಿದೆ ಎಂದಿದ್ದರು. ಅಷ್ಟು ಮಾತ್ರವಲ್ಲದೆ ಜಾತಿ ಗಳಿಗೆ ಸಂಬಂಧಿಸಿದ ಅಂಕಿಅಂಶಗಳ ವರ್ಗೀಕರಣಕ್ಕಾಗಿ ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದ ಅರವಿಂದ ಪನಗರಿಯಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣ ಗೊಂಡ ಬಳಿಕ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಜೇಟ್ಲಿ ತಿಳಿಸಿದ್ದರು. ವರದಿಯ ಆಂಶಿಕ ಭಾಗ ಬಿಡುಗಡೆ
2016ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಜಾತಿಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಹೊರತುಪಡಿಸಿದಂತೆ ವರದಿಯ ಇನ್ನಿತರ ಅಂಕಿಅಂಶಗಳು ಮತ್ತು ಶಿಫಾರಸುಗಳನ್ನು ಬಹಿರಂಗಪಡಿಸಿತು. ಅಚ್ಚರಿ ಎಂದರೆ ಪನಗರಿಯಾ ನೇತೃತ್ವದ ಸಮಿತಿಯ ಇನ್ನಿತರ ಸದಸ್ಯರ ಹೆಸರನ್ನು ಸರಕಾರ ಸೂಚಿಸದಿದ್ದರಿಂದಾಗಿ ಈ ಸಮಿತಿ ಒಂದು ಬಾರಿಯೂ ಸಭೆ ನಡೆಸಲಿಲ್ಲ. ಈ ಕಾರಣದಿಂದಾಗಿ ಜಾತಿಗಣತಿಯ ವೇಳೆ ಸಂಗ್ರಹಿಸಲಾದ ಜಾತಿಗಳ ಕುರಿತಾಗಿನ ಅಂಕಿಅಂಶಗಳು ಸರಕಾರದ ಕಡತದಲ್ಲಿಯೇ ಉಳಿಯುವಂತಾಯಿತು. ಜಾತಿಗಣತಿ ಪರ ಕಾಂಗ್ರೆಸ್ ಸಹಿತ ವಿಪಕ್ಷಗಳ ಬ್ಯಾಟಿಂಗ್
ಜಾತಿಗಣತಿ ಬಗೆಗೆ ಈ ಹಿಂದಿನಿಂದಲೂ ದ್ವಂದ್ವ ನಿಲುವು ಅನುಸರಿಸುತ್ತಲೇ ಬಂದಿದ್ದ ಕಾಂಗ್ರೆಸ್ ಕಳೆದ ಕೆಲವು ವರ್ಷಗಳಿಂದೀಚೆಗೆ ಜಾತಿಗಣತಿಯ ಪರವಾಗಿ ದನಿ ಎತ್ತಲಾರಂಭಿಸಿದೆ. ಯುಪಿಎ-2 ಸರಕಾರದ ಅವಧಿಯಲ್ಲಿ ಮಿತ್ರಪಕ್ಷಗಳನ್ನು ಮೆಚ್ಚಿಸಲು 2011ರಲ್ಲಿ ಎಸ್‌ಇಸಿಸಿ ಯನ್ನು ಕೈಗೆತ್ತಿಕೊಂಡಿತು. ಆದರೆ ಅಂತಿಮ ವರದಿ ಕೈಸೇರುವ ವೇಳೆಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರುವುದರೊಂದಿಗೆ ಕಾಂಗ್ರೆಸ್ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿತು. ಇತ್ತ ಕರ್ನಾಟಕದಲ್ಲಿ 2014-15ರಲ್ಲಿ ಕಾಂಗ್ರೆಸ್ ಇಂತಹುದೇ ಸಮೀಕ್ಷೆ ನಡೆಸಿದರೂ ವರದಿಯನ್ನು ಬಿಡುಗಡೆ ಮಾಡುವ ಸಾಹಸಕ್ಕೆ ಕೈಹಾಕಿರಲಿಲ್ಲ. ಇತ್ತೀಚೆಗೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮೇಲಣ ಚರ್ಚೆ ವೇಳೆ ಒಬಿಸಿಗೆ ಪ್ರತ್ಯೇಕ ಮೀಸಲು ನಿಗದಿಪಡಿಸಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು. ಹಲವಾರು ಪ್ರಾದೇಶಿಕ ಪಕ್ಷಗಳನ್ನೊಳಗೊಂಡ ವಿಪಕ್ಷ ಮೈತ್ರಿಕೂಟ ಐ.ಎನ್.ಡಿ.ಐ.ಎ. ರಚನೆಯಾದ ಬಳಿಕವಂತೂ ಕಾಂಗ್ರೆಸ್ ಜಾತಿಗಣತಿಯನ್ನು ಬಲವಾಗಿ ಪ್ರತಿಪಾದಿಸುತ್ತಿದೆ. ಹಾಗೆಂದು ಈಗಲೂ ಕಾಂಗ್ರೆಸ್‌ನಲ್ಲಿ ಮತ್ತು ಇತರ ವಿಪಕ್ಷಗಳ ನಾಯಕರಲ್ಲಿ ಜಾತಿಗಣತಿಗೆ ವಿಚಾರದಲ್ಲಿ ಸಂಪೂರ್ಣ ಸಹಮತವಿಲ್ಲ ಎಂಬುದು ಗಮನಾರ್ಹ.