ಮೊರಾದಾಬಾದ್: “ನಾವು ಅಧಿಕಾರಕ್ಕೆ ಬಂದ ಕೂಡಲೇ ದೇಶದಲ್ಲಿ ಜಾತಿ ಗಣತಿಗೆ ತೀರ್ಮಾನ ಕೈಗೊಳ್ಳುತ್ತೇವೆ’ – ಹೀಗೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಶನಿವಾರ ಘೋಷಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕಿ ಬಿಜೆಪಿ ವಿರುದ್ಧ ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ.
ಸಂಸದ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಪ್ರಯುಕ್ತ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಘೋಷಣೆ ಮಾಡಿದ್ದಾರೆ.
ಈ ದೇಶದಲ್ಲಿ ಶೇ. 50 ಮಂದಿ ಹಿಂದುಳಿದ ವರ್ಗದವರು ಇದ್ದಾರೆ. ಶೇ. 15 ಮಂದಿ ಅಲ್ಪಸಂಖ್ಯಾಕರು, ಶೇ. 15 ಮಂದಿ ದಲಿತರು, ಶೇ. 8 ಮಂದಿ ಆದಿವಾಸಿಗಳು ಇದ್ದಾರೆ. ಈ ಪೈಕಿ ಎಷ್ಟು ಮಂದಿ ಮಾಧ್ಯಮಗಳಲ್ಲಿದ್ದಾರೆ. ಅವರೆಲ್ಲ ನರೇಗಾ ಕೂಲಿ ಕಾರ್ಮಿಕರ ಪಟ್ಟಿಯಲ್ಲಿದ್ದಾರೆಯೇ ಹೊರತು ದೊಡ್ಡ ಕಂಪೆನಿಗಳಲ್ಲಿ ಅಲ್ಲ ಎಂದು ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಕೂಡವೇ ದೇಶದಲ್ಲಿ ಜಾತಿ ಗಣತಿ ನಡೆಸಲು ಮೊದಲ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪ್ರಿಯಾಂಕಾ, ರಾಹುಲ್ ಘೋಷಣೆ ಮಾಡಿದ್ದಾರೆ.
ಇಂದು ಅಖೀಲೇಶ್ ಭಾಗಿ?
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ರವಿವಾರ ಯಾತ್ರೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜತೆಗಿನ ಸ್ಥಾನ ಹೊಂದಾಣಿಕೆ ಅಂತಿಮಗೊಂಡಿರುವುದರಿಂದ ಅವರು ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ.