ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲು ವಿವಾದಕ್ಕೆ ಸಂಬಂಧಪಟ್ಟಂತೆ ಜಾತಿ ಗಣತಿ ದತ್ತಾಂಶವನ್ನು ಪರಿಗಣಿಸುವುದು ಕಾನೂನು ಪ್ರಕಾರ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಡ್ವೊಕೇಟ್ ಜನರಲ್ ಅವರು ಸರಕಾರಕ್ಕೆ ಅಭಿಪ್ರಾಯ ತಿಳಿಸಿದ್ದಾರೆ.
ಸರಕಾರದ ಉನ್ನತ ಮೂಲಗಳಿಂದ ಈ ಮಾಹಿತಿ ಲಭ್ಯವಾಗಿದೆ. ಜಾತಿ ಗಣತಿ ದತ್ತಾಂಶಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಸಂಬಂಧಪಟ್ಟಂತೆ ಮಾತ್ರ ಇದೆ. ರಾಜಕೀಯ ಮೀಸಲು ವಿಚಾರಕ್ಕೆ ಅನ್ವಯವಾಗುವುದಿಲ್ಲ. ಹೀಗಾಗಿ ಈ ವಿಚಾರವನ್ನು ಆಧಾರವಾಗಿಟ್ಟುಕೊಂಡು ಹಿಂದುಳಿದ ವರ್ಗಗಳ ಮೀಸಲು ನಿಗದಿ ಅಸಾಧ್ಯ ಎಂದು ಅಡ್ವೊಕೇಟ್ ಜನರಲ್ ಅಭಿಪ್ರಾಯ ನೀಡಿದ್ದಾರೆ ಎಂದು ಸರಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:ಇಂದಿರಾ ಗಾಂಧಿ, ನಿಜಲಿಂಗಪ್ಪರನ್ನು ಬಂಗಾರದಲ್ಲಿ ತೂಗಿದ್ದೇವೆ, ಆದರೆ… : ಕಾರಜೋಳ ವಿಷಾದ
ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಿ ನಿಗದಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅಡ್ಡಿಯಾಗಿ ಪರಿಣಮಿಸಿದ್ದು, ಜಾತಿ ಗಣತಿ ಸಮೀಕ್ಷೆಯನ್ನು ಇದಕ್ಕೆ ಬಳಸಿಕೊಳ್ಳಬಹುದೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದರು. ದತ್ತಾಂಶ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದರು. ಆದರೆ ಎಜಿ ಅಭಿಪ್ರಾಯದಿಂದ ಈ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ಆಯೋಗ ರಚನೆ: ಮೂಲಗಳ ಪ್ರಕಾರ, ಈ ವಿವಾದ ಬಗೆಹರಿಸಲು ಪ್ರತ್ಯೇಕ ಆಯೋಗ ರಚನೆ ಮಾಡಲು ಸರಕಾರ ಚಿಂತನೆ ನಡೆಸಿದೆ. ಆದರೆ ಆಯೋಗದ ವರದಿ ಬರುವುದಕ್ಕೆ ವಿಳಂಬವಾಗುತ್ತದೆ. ಹೀಗಾಗಿ ಹಳೆ ವ್ಯವಸ್ಥೆಯಲ್ಲಿ ಚುನಾವಣೆ ನಡೆಸಲು ಅವಕಾಶ ನೀಡಿ ಎಂದು ಸುಪ್ರೀಂ ಕೋರ್ಟ್ ಗೆ ವಿಶೇಷ ಮೇಲ್ಮನವಿ ಸಲ್ಲಿಸಲು ಸರಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.