ಉಡುಪಿ: ರಾಜ್ಯ ಹಿಂದು ಳಿದ ವರ್ಗಗಳ ಶಾಶ್ವತ ಆಯೋಗದಿಂದ ಸಿದ್ಧಪಡಿಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಈ ವರದಿಗೆ ದತ್ತಾಂಶ ಸಿದ್ಧಪಡಿಸುವಾಗ ಜಾತಿಯ ವಿವರನ್ನು ಕೇಳಲಾಗಿದೆಯೇ ವಿನಾ ಇದು ಜಾತಿ ಸಮೀಕ್ಷೆಯಲ್ಲ. ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಜಾತಿ ಲೆಕ್ಕಾಚಾರಗಳು ನಮ್ಮ ವರದಿಯದ್ದಲ್ಲ. ಸರಕಾರ ನಮ್ಮ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಸಾರ್ವಜನಿಕ ಚರ್ಚೆಗೆ ಬಿಡುವ ವಿಶ್ವಾಸವಿದೆ ಎಂದು ಆಯೋಗದ ನಿಕಟಪೂರ್ವ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಜಿಲ್ಲಾ ಪತ್ರಿಕಾಭವನದಲ್ಲಿ ಸೋಮ ವಾರ ಮಾಧ್ಯಮ ಸಂವಾದದಲ್ಲಿ ಮಾತ ನಾಡಿದ ಅವರು, ಕಾಂತರಾಜ್ ಅಧ್ಯಕ್ಷ ರಾಗಿದ್ದ ಸಂದರ್ಭದಲ್ಲಿ ಜಿಲ್ಲಾಡಳಿತ ಸಹಿತವಾಗಿ ವಿವಿಧ ಇಲಾಖೆಗಳ ಸಹ ಕಾರದೊಂದಿಗೆ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರ ಹಿಸಿದ್ದರು. ಕಾಂತರಾಜ್ ವರದಿ ಯನ್ನು ತಾಂತ್ರಿಕ ಕಾರಣದಿಂದ ಸರಕಾರ ಪಡೆದಿರಲಿಲ್ಲ. ಆ ವರದಿಯ ದತ್ತಾಂಶವನ್ನು ಆಧರಿಸಿ ಪ್ರತ್ಯೇಕ ಅಧ್ಯಯನ ನಡೆಸಿ ನಮ್ಮ ವರದಿಯನ್ನು ಸಲಿಸಿದ್ದೇವೆ ಎಂದರು.
ಆಯೋಗದ ಮೂಲಕ ತಜ್ಞರ ಸಮಿತಿ ರಚಿಸಿ ಸಮರ್ಪಕ ಅಧ್ಯಯನ ನಡೆಸಿದ್ದೇವೆ. ಹಿಂದುಳಿದ ವರ್ಗದ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಸಹಿತವಾಗಿ ವಿವಿಧ ಶಿಫಾರಸುಗಳನ್ನು ಸಲ್ಲಿಸಿದ್ದೇವೆ. ಹಲವು ಉಪಜಾತಿಗಳು ಸಿಕ್ಕಿವೆ. 2015ರಲ್ಲಿ ಸಿದ್ಧಪಡಿಸಿದ ವರದಿಗೆ ಪೂರಕವಾದ ದತ್ತಾಂಶ ಸಿದ್ಧಪಡಿಸಿದ್ದರು. ದತ್ತಾಂಶ ಈಗ ಭಾರತ್ ಎಲೆಕ್ಟ್ರಾನಿಕ್ಸ್ ಲಿ. (ಬಿಇಎಲ್)ನಲ್ಲಿದೆ. ಆ ದತ್ತಾಂಶ ಪಡೆದು ಅದರ ಆಧಾರದಲ್ಲಿ ಅಧ್ಯಯನ ನಡೆಸಿ ನಮ್ಮ ವರದಿ ಸಿದ್ಧಪಡಿಸಿದ್ದೇವೆ. ಸರಕಾರ ಅಂಗೀಕರಿಸುವ ವಿಶ್ವಾಸವಿದೆ. ಇದರಿಂದ ಹಿಂದುಳಿದ ವರ್ಗಗಳ ಶೈಕ್ಷಣಿಕ, ಔದ್ಯೋಗಿಕ ಏಳ್ಗೆಗೆ ಅನುಕೂಲವಾಗಲಿದೆ ಎಂದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಸಾರ್ವಜನಿಕರಿಗೆ ಸಿಕ್ಕ ಅನಂತ ರದಲ್ಲಿ ವ್ಯಾಪಕ ಚರ್ಚೆಯಾಗಬೇಕು. ಅನುಷ್ಠಾನ ಮಾಡುವುದು ಅಥವಾ ಬಿಡುವುದು ಸರಕಾರಕ್ಕೆ ಬಿಟ್ಟದ್ದು. ಸಾರ್ವಜನಿಕವಾಗಿ ಚರ್ಚೆಯಾದಾಗ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದು ತಿಳಿಯುತ್ತದೆ ಎಂದು ಹೇಳಿದರು.
2015ರಿಂದ ಈವರೆಗೆ 163 ಕೋ.ರೂ. ವೆಚ್ಚವಾಗಿದೆ. ನಮ್ಮ ಅವಧಿಯಲ್ಲಿ ಈ ವರದಿ ಸಹಿತ 57 ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಮುಖ್ಯವಾಗಿ ಅನಾಥ ಮಕ್ಕಳಿಗೆ ಮೀಸಲಾತಿ ನೀಡುವುದು, ಅಲೆಮಾರಿ ಜನಾಂಗವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದು ಇತ್ಯಾದಿ ವರದಿ ಸೇರಿಕೊಂಡಿದೆ ಎಂದರು.