ಬೆಂಗಳೂರು: ಜಾತಿ, ಹಣದ ಕಾರಣಕ್ಕೆ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಿಲ್ಲುವವರೆಗೆ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉತ್ತಮ ಆಡಳಿತ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯೇ ಉತ್ತಮ ಆಡಳಿತ ಎಂದು ಅಭಿಪ್ರಾಯಪಟ್ಟರು.
ವಿಷ ಬೀಜ: ರಾಜಕಾರಣದ ಸಮೀಕರಣದಲ್ಲಿ ದುಡ್ಡು ಮತ್ತು ಜಾತಿ ಹೊರತಾಗಿ ಬೇರೆ ವಿಚಾರಗಳ ಬಗ್ಗೆ ಚರ್ಚೆಯಾಗುವುದಿಲ್ಲ. ಆತ ನಮ್ಮ ಜಾತಿಯವನು, ದುಡ್ಡು ಕೊಟ್ಟಿದ್ದಾನೆ, ಒಳ್ಳೆಯ ಭರವಸೆಗಳನ್ನು ನೀಡಿದ್ದಾನೆ ಎಂದು ಪ್ರಜೆಗಳು ಮತ ಹಾಕುತ್ತಾರೆ. ವಿಷ ಬಿತ್ತಿರುವ ಜನ ಅಮೃತ ಪಡೆಯಲು ಸಾಧ್ಯವೇ? ಅಯೋಗ್ಯರಿಗೆ ಕೊಟ್ಟ ಮತ ಯೋಗ್ಯ ಆಡಳಿತ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ವಾಜಪೇಯಿ ಮಾದರಿ: ಉತ್ತಮ ಆಡಳಿತ ಎಂದರೆ ಜನರ ಪಾಲ್ಗೊಳ್ಳುವಿಕೆ. ಪ್ರತಿನಿತ್ಯದ ಆಡಳಿತದಲ್ಲಿ ನಮ್ಮ ಹೊಣೆಗಾರಿಕೆ ಏನು ಎಂಬುದನ್ನು ಅರಿತು ಬದುಕಬೇಕು. ನೀವು ತೆರಿಗೆ ಕೊಟ್ಟಿರುತ್ತೀರಿ. ಅದನ್ನು ಸಂಗ್ರಹಿಸುವ ಸರ್ಕಾರ ವಾಪಸ್ ಜನರಿಗಾಗಿ ಖರ್ಚು ಮಾಡುತ್ತದೆ. ವರ್ಷಕ್ಕೊಮ್ಮೆ ಸರ್ಕಾರ ಈ ಬಗ್ಗೆ ಕೊಡುವ ಲೆಕ್ಕ ಜನರಿಗೆ ನಿಮಗೆ ತೃಪ್ತಿಯಾಗುತ್ತದೆ ಎಂದರೆ ಅದುವೇ ಪರಿಣಾಮಕಾರಿ ಆಡಳಿತ. ಆ ಪರಿಕಲ್ಪನೆ ಹುಟ್ಟುಹಾಕಿದ್ದು ಅಟಲ್ ಬಿಹಾರಿ ವಾಜಪೇಯಿ ಎಂದರು.
ಕಾಮಗಾರಿಗಳೇ ಅಭಿವೃದ್ಧಿಯಲ್ಲ: ಸೋಕಾಲ್ಡ್ ಬುದ್ಧಿಜೀವಿಗಳು, ಸೋ ಕಾಲ್ಡ್ ಡೆವಲಪ್‌ಮೆಂಚ್ ಅಡ್ವೋಕೇಟ್‌ಗಳು ಯೋಚನೆ ಮಾಡುವುದೇ ಕಾಮಗಾರಿಗಳನ್ನು ಆಧರಿಸಿ. ಆರ್ಥಿಕ, ಬೌದ್ಧಿಕ, ಸಾಂಸ್ಕೃತಿಕ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುವುದಿಲ್ಲ. ಆದರೆ, ಆರ್ಥಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ, ಊಟ ಹಾಕುವುದನ್ನು ಬಿಟ್ಟು ಊಟಕ್ಕೆ ಬೇಕಾದ ಶಕ್ತಿಯನ್ನು ಒಬ್ಬ ವ್ಯಕ್ತಿಗೆ ನೀಡುವ ಪ್ರಧಾನಿ ಮೋದಿಯವರ ಕೆಲಸದಿಂದಾಗಿಯೇ ವಿಶ್ವ ಅವರನ್ನು ಗೌರವಿಸುತ್ತಿದೆ ಎಂದು ಹೇಳಿದರು.
ರಾಜಕೀಯವೆಂದರೆ ಬಚ್ಚಲುಮನೆ: ರಾಜಕೀಯ ಕ್ಷೇತ್ರವನ್ನು ಯಾರೂ ದೇವರ ಕೋಣೆ ಎನ್ನುವುದಿಲ್ಲ, ಬಚ್ಚಲುಮನೆ ಎನ್ನುತ್ತಾರೆ. ಪ್ರತಿನಿತ್ಯ ಎಲ್ಲರೂ ಬಂದು ಹೋಗುತ್ತಾರೆ. ಹೀಗಾಗಿ ಬೇಗ ಗಲೀಜಾಗುತ್ತದೆ. ದೇವರ ಮನೆಯನ್ನು ಒಂದು ದಿನ ಸ್ವತ್ಛಗೊಳಿಸದಿದ್ದರೆ ಏನೂ ಆಗುವುದಿಲ್ಲ. ಆದರೆ, ಬಚ್ಚಲುಮನೆಯನ್ನು ಸ್ವತ್ಛಗೊಳಿಸದಿದ್ದರೆ ಹೇಗೆ? ಹೀಗಾಗಿ ರಾಜಕೀಯ ಕ್ಷೇತ್ರವನ್ನೂ ಸ್ವತ್ಛಗೊಳಿಸುವ ನಿಟ್ಟಿನಲ್ಲಿ ಕೆಲಸವಾಗಬೇಕು. ಅದಕ್ಕೆ ಸಂಸ್ಕಾರ, ಸಂಸ್ಕೃತಿಬೇಕು ಎಂದು ಹೇಳಿದರು. ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತಿತರರು ಉಪಸ್ಥಿತರಿದ್ದರು.