Advertisement
ಶೋಭಾಗೆ ಮಹಿಳೆಯರು ಹೆಚ್ಚು ಮತ ನೀಡಿದರು, ಶೋಭಾ ಒಕ್ಕಲಿಗರಾದ ಕಾರಣ ಅವರಿಗೆ ಒಕ್ಕಲಿಗರು ಹೆಚ್ಚಿಗೆ ಮತ ನೀಡಿದರು ಎಂದು; ಪ್ರಮೋದ್ ಮಧ್ವರಾಜ್ ಮೊಗವೀರ ಸಮುದಾಯಕ್ಕೆ ಸೇರಿದವರಾದ ಕಾರಣ ಮೊಗವೀರರು ಅವರಿಗೆ ಹೆಚ್ಚಿಗೆ ಮತ ನೀಡಿದರು ಎಂದು ಯಾರೂ ಹೇಳುವಂತಿಲ್ಲ. ಈ ಅರ್ಥದಲ್ಲಿ ಇದು ಜಾತ್ಯತೀತ ಚುನಾವಣೆ ಎನ್ನಬಹುದು.
ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡದ್ದರಿಂದಲೇ ಇಂತಹ ಪರಿಸ್ಥಿತಿ ಎದುರಿಸಬೇಕಾಯಿತು ಎಂದು ಕಾಂಗ್ರೆಸ್‌ನ ಕೆಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಮೈತ್ರಿ ಮಾಡಿಕೊಳ್ಳದೆ ಇದ್ದರೆ ಗೆಲುವಿನ ಸಾಧ್ಯತೆ ಇತ್ತೆ? ಉಡುಪಿಯಾಗಲೀ, ಚಿಕ್ಕಮಗಳೂರಾಗಲೀ ಕಾಂಗ್ರೆಸ್‌ನ ಕೈ ಚಿಹ್ನೆ ಜನರಿಗೆ ಚಿರಪರಿಚಿತ ಎನ್ನುವುದರಲ್ಲಿ ಅನುಮಾನವಿಲ್ಲದಿದ್ದರೂ ಈಗಿನ
ಮೋದಿ ಅಲೆ ನೋಡಿದರೆ ಯಾರು ನಿಂತರೂ ಕಷ್ಟ ಎಂಬ ಸ್ಥಿತಿ ಇದೆ. ಕೈ ಚಿಹ್ನೆ ಇಲ್ಲವಾದುದು ಮತದಾರರಿಗೆ ಒಂದಷ್ಟು ಗೊಂದಲಕ್ಕೆ ಕಾರಣವಾದದ್ದು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ತೆನೆ ಹೊತ್ತ ರೈತ ಮಹಿಳೆ ಚಿಹ್ನೆಯನ್ನು ತೋರಿಸಿ ಮತ ನೀಡಿರೆಂದು ಹೇಳಲು ಮುಜುಗರವಾದದ್ದು ನಿಜ. ಕಾಂಗ್ರೆಸ್ ನಾಯಕರಾದ ಪ್ರಮೋದ್ ಮಧ್ವರಾಜ್ ಒಂದು ವೇಳೆ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದರೆ ಈಗಿನದ್ದಕ್ಕಿಂತ ಹೆಚ್ಚಿಗೆ ಮತ ಪಡೆಯುತ್ತಿದ್ದರು ಎಂದು ಹೇಳಬಹುದಷ್ಟೆ. ಹಿನ್ನಡೆಗೆ ಕಾರಣಗಳೇನು?
ಪ್ರಧಾನಿ ನರೇಂದ್ರ ಮೋದಿ ಎದುರು ಮತಗಳನ್ನು ಸೆಳೆಯಬಲ್ಲ ರಾಹುಲ್ ಗಾಂಧಿ, ಪ್ರಿಯಾಂಕಾಗಾಂಧಿಯಂತಹ ನಾಯಕರು ಪ್ರಚಾರಕ್ಕೆ ಬಾರದೆ ಹೋದುದು ನೇತ್ಯಾತ್ಮಕ ಅಂಶವೇ. ಅ) “ಸಹಬಾಳ್ವೆ’ಚುನಾವಣೆ ಘೋಷಣೆಯಾಗುತ್ತದೆ ಎನ್ನುವಾಗ “ಸಹಬಾಳ್ವೆ’ ಹೆಸರಿನ ಸಮಾವೇಶದಲ್ಲಿ ಬಂದ ಕೆಲವರ ಭಾಷಣ “ಸಹಬಾಳ್ವೆ’ ಶಬ್ದಕ್ಕೆ ವಿರುದ್ಧವಾಗಿತ್ತು ಎನ್ನಲಾಗುತ್ತದೆ ಮತ್ತು ಇದನ್ನು ಸಾಬೀತುಪಡಿಸುವಂತೆ ಜಿಲ್ಲಾಡಳಿತ ಪ್ರಕರಣವನ್ನೂ ದಾಖಲಿಸಿತ್ತು. ವಿಚಿತ್ರವೆಂದರೆ ಈ ಸಮಾವೇಶವನ್ನು ಆಯೋಜಿಸಿದ ಅಮೃತ್ ಶೆಣೈಯವರೇ ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಸೀಟು ಬಿಟ್ಟುಕೊಟ್ಟದ್ದನ್ನು ವಿರೋಧಿಸಿ ಪಕ್ಷೇತರರಾಗಿ ಸ್ಪರ್ಧಿಸಿದರು. ಅದನ್ನು ಪಕ್ಷಾತೀತ ಸಭೆ ಎಂದು ಕರೆಯಲಾಗಿತ್ತು. ಕಾಂಗ್ರೆಸ್‌ಗೆ ಪೂರಕ ಪರಿಸ್ಥಿತಿ ನಿರ್ಮಿಸುವುದಕ್ಕಾಗಿ ಈ ಸಭೆಯನ್ನು ಆಯೋಜಿಸಿದ್ದು ಗುಟ್ಟಿನ ವಿಷಯವಲ್ಲ. ಆದರೆ ಕಾಂಗ್ರೆಸ್ ನಾಯಕರ ನಿರ್ಣಯ ವಿರುದ್ಧ ಆಯೋಜಕರೇ ಬಂಡೇಳಬೇಕಾಯಿತು ಮತ್ತು ಪಕ್ಷದಿಂದ ಅಮಾನತುಗೊಳ್ಳಬೇಕಾಯಿತು. ಚುನಾವಣೆ ಘೋಷಣೆಯಾಗುವ ಹಂತದಲ್ಲಿ ಆಯೋಜನೆಗೊಂಡ “ಸಹಬಾಳ್ವೆ’ ಮತ್ತು ಫಲಿತಾಂಶದಲ್ಲಿ ಕಂಡುಬಂದ ಜಾತಿ, ಲಿಂಗ ದೃಷ್ಟಿ ಇಲ್ಲದ ಚುನಾವಣೆ ಒಂದಕ್ಕೊಂದು ವಿರುದ್ಧವೂ, ಸಮಾನ ಅರ್ಥವೂ ಕೊಡುವಂತಿದೆ.