ಪಕ್ಕದ ಮನೆಗೆ ಬೆಂಕಿ ಬಿದ್ದಾಗ ಸುಮ್ಮನೆ ಕೂರುವ ಜಾಯಮಾನ ಭಾರತದ್ದಲ್ಲ. 1971ರ ಬಾಂಗ್ಲಾ ವಿಮೋಚನೆಗಾಗಿ ಭಾರತ ಸ್ಪಂದಿಸಿದ ಬಗೆಯೂ ಈ ತೆರನದ್ದೇ. ಸ್ವತಂತ್ರ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಭೂ- ವಾಯು- ನೌಕಾ ಸೇನೆಗಳ ವಿರಾಟರೂಪ ದರ್ಶನವಾದ ಸಂದರ್ಭ ಅದು. ಪಾಕ್ ವಿರುದ್ಧದ ಈ ಯುದ್ಧದಲ್ಲಿ ದೇಶಕ್ಕಾಗಿ ಮಿಡಿದ ಕರುನಾಡಿನ ಹೃದಯಗಳ ಅನುಭವ ಚಿತ್ರಣ ಸರಣಿ ಇಲ್ಲಿದೆ..
ಬಾಂಗ್ಲಾ ವಿಮೋಚನೆಗಾಗಿ 1971ರಲ್ಲಿ ನಡೆದ ಸಮರಕ್ಕೆ 50 ವರ್ಷ ತುಂಬಿದೆ. 1971ರ ಡಿ. 3ರ ಮಧ್ಯರಾತ್ರಿ ಪ್ರಾರಂಭಗೊಂಡಿದ್ದ ಬಾಂಗ್ಲಾ ವಿಮೋಚನ ಯುದ್ಧದಲ್ಲಿ ಐಎನ್‌ಎಸ್ ಗೋದಾವರಿ ಯುದ್ಧ ನೌಕೆಯನ್ನು ಮುನ್ನಡೆಸಿ ಕೊಚ್ಚಿ ಅರಬಿ ಸಮುದ್ರದಲ್ಲಿ ಪಾಕಿಸ್ಥಾನದ ವ್ಯಾಪಾರಿ ಹಡಗು ಪಸ್ನಿಯನ್ನು ವಶಕ್ಕೆ ಪಡೆದು 52 ಮಂದಿ ಪಾಕಿಸ್ಥಾನಿಗಳನ್ನು ಸೆರೆಹಿಡಿದ ಕೀರ್ತಿ ಮೂಡುಬೆಳ್ಳೆಯ ಕೊಮೊಡೊರ್ ಜೆರೋಮ್ ಕ್ಯಾಸ್ತಲಿನೊ ಅವರಿಗೆ ಸಲ್ಲುತ್ತದೆ.
ಯುದ್ಧದ ಅವಧಿಯಲ್ಲಿ ಕ್ಯಾಸ್ತಲಿನೊ ನೇತೃತ್ವದ ಐಎನ್‌ಎಸ್ ಗೋದಾವರಿ ಯುದ್ಧ ನೌಕೆಯು ಕೊಚ್ಚಿಯಿಂದ ಮುಂಬೈವರೆಗಿನ ಸಮುದ್ರ ದಲ್ಲಿ ಶತ್ರುಗಳು ನುಸುಳದಂತೆ ಕಣ್ಗಾವಲಿರಿಸಿ ಯಶಸ್ವಿಯಾಗಿತ್ತು. ಡಿ. 16ರಂದು ಬಾಂಗ್ಲಾ ವಿಮೋಚನ ಸಮರ ಕೊನೆಗೊಂಡ ಬಳಿಕ ಯುದ್ಧ ನೌಕೆ ಕೊಚ್ಚಿ ಬಂದರು ತಲುಪಿತ್ತು.
ರೋಚಕ ಕಾರ್ಯಾಚರಣೆ: 1971ರ ಡಿ. 4ರಂದು ನಸು ಕಿನ 4 ಗಂಟೆಗೆ ಪಾಕಿಸ್ಥಾನಿ ಹಡಗು ಪಸ್ನಿ ಪೂರ್ವ ಪಾಕಿಸ್ಥಾನದಿಂದ ಕರಾಚಿಯೆಡೆಗೆ ನಿಷೇಧಿತ ಸರಕು ಸಾಗಿಸುವ ಬಗ್ಗೆ ದಿಲ್ಲಿಯ ನೇವಿ ವಾರ್ ರೂಂನಿಂದ ಬಂದ ಮಾಹಿತಿಯಂತೆ ಐಎನ್‌ಎಸ್ ಗೋದಾವರಿ ಯುದ್ಧ ನೌಕೆ ಕೊಮೊ ಡೊರ್ ಜೆರೋಮ್ ಕ್ಯಾಸ್ತಲಿನೊ ನೇತೃತ್ವದಲ್ಲಿ ಕಾರ್ಯಾಚರಣೆ ಗಿಳಿದಿತ್ತು. ಮಂಗಳೂರು ಕರಾವಳಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿ ಪತ್ತೆ ಹಚ್ಚಿ, ಪಾಕಿಸ್ಥಾನಿ ಹಡಗನ್ನು ನಿಲ್ಲುವಂತೆ ಸೂಚನೆ ನೀಡಿದಾಗ ಹಡಗು ನಿಲ್ಲದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿತ್ತು. ಸುಮಾರು 15 ಕಿ.ಮೀ. ವರೆಗೆ ಈ ಕಾರ್ಯಾಚರಣೆ ನಡೆದಿದ್ದು, 4 ಇಂಚಿನ ಗನ್‌ನಿಂದ 6 ಶೆಲ್‌ಗಳನ್ನು ಸಿಡಿಸಿ ಹಡಗನ್ನು ಧ್ವಂಸಗೊಳಿಸುವ ಎಚ್ಚರಿಕೆ ಸಂದೇಶ ನೀಡ ಲಾಗಿತ್ತು. ಆಗಲೂ ನಿಲ್ಲದೇ ಇದ್ದಾಗ ಹಡಗಿನ ಬ್ರಿಡ್ಜ್ಗೆ ಶೆಲ್ ದಾಳಿ ನಡೆಸಿದ್ದು, ಹಡಗಿನ ಹಿಂಬದಿ ಮುಳುಗ ಲಾರಂಭಿಸಿತು. ಆ ಸಮಯ ನಿಲು ಗಡೆಗೊಂಡ ಹಡಗಿನಲ್ಲಿದ್ದ 52 ಪಾಕಿಸ್ಥಾನಿ ಸಿಬಂದಿಗೆ ಶರಣಾಗುವಂತೆ ಸೂಚಿಸಿ ಇಲ್ಲದಿದ್ದಲ್ಲಿ ಗುಂಡಿನ ದಾಳಿ ನಡೆಸುವುದಾಗಿ ಎಚ್ಚರಿಸಲಾಗಿತ್ತು. ಆ ಬಳಿಕ ಶರಣಾದ ಎಲ್ಲ 52 ಮಂದಿಯನ್ನು ಕೊಚ್ಚಿಗೆ ಕೊಂಡೊಯ್ದು ಸೇನೆಯ ಸುಪರ್ದಿಗೆ ಒಪ್ಪಿಸಲಾಗಿತ್ತು ಎಂದು ಕೊಮೊ ಡೊರ್ ಜೆರೋಮ್ ಕ್ಯಾಸ್ತ ಲಿನೊ ಉದಯ ವಾಣಿ ಯೊಂದಿಗೆ ತನ್ನ ಯುದ್ಧದ ಅನುಭವವನ್ನು ಹಂಚಿಕೊಂಡಿದ್ದಾರೆ.
1953ರಲ್ಲಿ ಭಾರತೀಯ ನೌಕಾ ಪಡೆಗೆ ಸೈಲರ್(ನಾವಿಕ) ಆಗಿ ಸೇರಿದ್ದ ಜೆರೋಮ್ ಕ್ಯಾಸ್ತಲಿನೊ ಅವರು 1988ರ ವರೆಗೆ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನೌಕಾ ಪಡೆಯಲ್ಲಿ ಕೊಮೊ ಡೊರ್ ಹುದ್ದೆಗೇರಿದ ಮೊದಲ ಕನ್ನಡಿಗರಾಗಿದ್ದಾರೆ. 1961ರ ಗೋವಾ ಯುದ್ಧ, 1965ರ ಭಾರತ -ಪಾಕಿ ಸ್ಥಾನ ಯುದ್ಧ ಮತ್ತು 1971ರ ಬಾಂಗ್ಲಾ ಯುದ್ಧ ಗಳಲ್ಲಿ ಪಾಲ್ಗೊಂಡ ಉಡುಪಿ ಜಿಲ್ಲೆಯ ಏಕೈಕ ಮಾಜಿ ಸೈನಿಕ ಕೊ| ಜೆರೋಮ್ ಕ್ಯಾಸ್ತಲಿನೊ. ಗೋವಾ ಯುದ್ಧದಲ್ಲಿ 1961ರ ಡಿ. 18ರಂದು ವೈಮಾ ನಿಕ ಸಾಗಾಣಿಕೆಯ ಬಹು ಖ್ಯಾತಿಯ ಯುದ್ಧನೌಕೆ “ಐಎನ್‌ಎಸ್ ವಿಕ್ರಾಂತ್’ನನ್ನು ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಯುದ್ಧ ನೌಕೆಯು ಗೋವಾ ಕಡಲಿನಲ್ಲಿ ಶತ್ರುಗಳ ನೌಕೆಗಳು ಬಾರದಂತೆ ತಡೆಯೊಡ್ಡಿತ್ತು.
ವಿಶಿಷ್ಟ ಸೇವಾ ಪದಕ: ಭಾರತೀಯ ನೌಕಾ ಪಡೆಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ 1984ರ ಜ. 26ರಂದು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಅವರು ಕ್ಯಾಸ್ತಲಿನೊ ಅವರಿಗೆ ವಿಶಿಷ್ಟ ಸೇವಾ ಪದಕವನ್ನು ಪ್ರದಾನಿಸಿ ಗೌರವಿಸಿದ್ದರು.
ಮನೆಯಂಗಳದಲ್ಲಿ ಯುದ್ಧ ಸ್ಮಾರಕ: ಯುದ್ಧ ಸ್ಮಾರಕಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಿಸ ಲಾಗುತ್ತದೆ. ಆದರೆ ಜೆರೋಮ್ ಕ್ಯಾಸ್ತಲಿನೊ ಅವರು ಯುದ್ಧದಲ್ಲಿ ಮಡಿದ ಯೋಧರಿಗಾಗಿ ಯುದ್ಧ ಸ್ಮಾರಕವನ್ನು ತಮ್ಮ ಮನೆ ಯಂಗಳದಲ್ಲಿ ನಿರ್ಮಿಸಿ ಮಾದರಿ ಯಾಗಿ ದ್ದಾರೆ. ಗೋವಾ ವಿಮೋ ಚನಾ ಚಳು ವಳಿಯ 50ನೆಯ ವರ್ಷ ಮತ್ತು ಬಾಂಗ್ಲಾ ದೇಶದ ವಿಮೋಚನಾ ಯುದ್ಧದ 40ನೇ ವರ್ಷದ ವಿಜಯ ದಿವಸದ ಸಂಭ್ರಮಕ್ಕಾಗಿ 2011ರ ಡಿ. 16ರಂದು ಮೂಡು ಬೆಳ್ಳೆಯ ತನ್ನ ಮನೆ ವನಸೌರಭದಲ್ಲಿ ಯುದ್ಧ ಸ್ಮಾರಕ ಸ್ಥಾಪಿಸಿ ದಾಖಲೆ ನಿರ್ಮಿಸಿದ್ದಾರೆ. ಇದನ್ನು ಗೋವಾ ಮತ್ತು ಬಾಂಗ್ಲಾ ದೇಶ ವಿಮೋಚನೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಸಮರ್ಪಿಸಲಾಗಿದೆ. ಜೆರೋಮ್ ಕ್ಯಾಸ್ತಲಿನೊ ಅವರು ಈ ಯುದ್ಧ ಸ್ಮಾರಕದ ಮುಂದೆ ಪ್ರತಿ ನಿತ್ಯವೂ ಧ್ವಜಾರೋಹಣ ಮಾಡುತ್ತಾರೆ.
1971ರ ಯುದ್ಧದ ನೆನಪಿಗಾಗಿ ಅಂದು ತಾನು ಯುದ್ಧದಲ್ಲಿ ಫೈರಿಂಗ್‌ಗೆ ಉಪಯೋಗಿಸಿದ್ದ 4 ಇಂಚಿನ ಗನ್‌ನ 1 ಶೆಲ್ ಮತ್ತು ಯುದ್ಧ ನೌಕೆಯ ಚುಕ್ಕಾಣಿಯನ್ನು ಗುಜರಾತ್ ದಾರುಖಾನದ ಶಿಪ್ ಬ್ರೇಕಿಂಗ್ ಯಾರ್ಡ್ ನಿಂದ ಪಡೆದು ಕೊಂಡು ಅಮೂಲ್ಯ ಸ್ಮಾರಕವಾಗಿ ತನ್ನ ಮನೆಯಲ್ಲಿ ಸಂರಕ್ಷಿಸಿಟ್ಟುಕೊಂಡಿದ್ದಾರೆ.
-ಡಿ. ಸತೀಶ್ಚಂದ್ರ ಶೆಟ್ಟಿ , ಶಿರ್ವ