Advertisement

First vote ದೇಶಕ್ಕಾಗಿ ಚಲಾಯಿಸಿ: ಇನ್ನು 3 ತಿಂಗಳು ಮೋದಿ ಮನ್‌ ಕೀ ಬಾತ್‌ ಇಲ್ಲ

01:02 AM Feb 26, 2024 | Team Udayavani |

ಹೊಸದಿಲ್ಲಿ: “ನಿಮ್ಮ ಮೊದಲ ಮತವನ್ನು ದೇಶಕ್ಕಾಗಿ ಚಲಾಯಿಸಿ’.ಇದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಹಕ್ಕು ಚಲಾಯಿಸಲಿರುವ ಯುವ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆ.

Advertisement

ರವಿವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನ 110ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, “18ನೇ ಲೋಕಸಭೆಯು ನಿಮ್ಮೆಲ್ಲರ ಆಕಾಂಕ್ಷೆಗಳ ಸಂಕೇತವಾಗಿದೆ. ಯುವಜನರು ಕೇವಲ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾದರೆ ಸಾಲದು, ಆ ಅವಧಿಯಲ್ಲಿ ನಡೆಯುವ ಎಲ್ಲ ರೀತಿಯ ಚರ್ಚೆ, ಸಂವಾದಗಳಿಗೂ ಕಿವಿಯಾಗಬೇಕು. ಚುನಾವಣೆ ಪ್ರಕ್ರಿಯೆಯಲ್ಲಿ ಯುವ ಮತದಾರರ ಭಾಗೀದಾರಿಕೆಯು ಹೆಚ್ಚಾದಂತೆ, ದೇಶಕ್ಕೆ ಅದರಿಂದ ಆಗುವ ಲಾಭಗಳೂ ಹೆಚ್ಚೇ ಆಗಿರುತ್ತವೆ. ಹೀಗಾಗಿ, ದಾಖಲೆ ಸಂಖ್ಯೆಯಲ್ಲಿ ಬಂದು ಹಕ್ಕು ಚಲಾಯಿಸಿ. ನಾನು ದೇಶಕ್ಕಾಗಿ ಮೊದಲ ಮತ ಚಲಾಯಿಸುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಿ’ ಎಂದು ಹೇಳಿದ್ದಾರೆ.

ಸಾಧನೆ ಅಪ್‌ಲೋಡ್‌ ಮಾಡಿ: ಇದೇ ವೇಳೆ, ಮುಂದಿನ 3 ತಿಂಗಳ ಅವಧಿಯಲ್ಲಿ “ಮನ್‌ ಕೀ ಬಾತ್‌’ ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಜನಸಾಮಾನ್ಯರ ಸಾಧನೆಗಳನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲು ಪ್ರಧಾನಿ ಮೋದಿ ದೇಶ ವಾಸಿಗಳಿಗೆ ಮನವಿ ಮಾಡಿದ್ದಾರೆ.

ಇನ್ನು 3 ತಿಂಗಳು ಮನ್‌ ಕೀ ಬಾತ್‌ ಇಲ್ಲ

ಮುಂದಿನ 3 ತಿಂಗಳ ಕಾಲ “ಮನ್‌ ಕೀ ಬಾತ್‌’ ಕಾರ್ಯಕ್ರಮ ಪ್ರಸಾರ ಆಗುವುದಿಲ್ಲ ಎಂದು ಪ್ರಧಾನಿ ಮೋದಿಯವರೇ ತಿಳಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. “ದೇಶದಲ್ಲಿ ಈಗ ಚುನಾವಣೆ ವಾತಾವರಣ ಇದೆ. ಕಳೆದ ಬಾರಿಯಂತೆಯೇ ಮಾರ್ಚ್‌ನಲ್ಲಿಯೇ ಮಾದರಿ ನೀತಿ ಸಂಹಿತೆ ಜಾರಿ ಆಗುವ ಸಾಧ್ಯತೆ ಇದೆ.  ಮನ್‌ ಕೀ ಬಾತ್‌ ಕಾರ್ಯಕ್ರಮ ರಾಜಕೀಯದಿಂದ ಹೊರತಾಗಿರುವಂಥದ್ದು. ಹೀಗಾಗಿ, ರಾಜಕೀಯ ನೈತಿಕತೆಯನ್ನು ಪಾಲಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮುಂದಿನ 3 ತಿಂಗಳ ಕಾಲ ಈ ಕಾರ್ಯಕ್ರಮ ಪ್ರಸಾರ ಆಗುವುದಿಲ್ಲ’ ಎಂದರು. 2019ರ ಲೋಕಸಭೆ ಚುನಾವಣೆಗೆ ಮುನ್ನವೂ ಮನ್‌ ಕೀ ಬಾತ್‌ ಅನ್ನು ಕೆಲವು ತಿಂಗಳ ಕಾಲ ಮುಂದೂಡಲಾಗಿತ್ತು.

Advertisement

ಶುಭ ಸೂಚಕ 111ನೇ ಆವೃತ್ತಿಯಲ್ಲಿ ಭೇಟಿಯಾಗೋಣ ಎಂದ ಮೋದಿ!

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 3 ತಿಂಗಳ ಕಾಲ ಮನ್‌ ಕೀ ಬಾತ್‌ ಪ್ರಸಾರ ಆಗುವುದಿಲ್ಲ ಎಂದು ಹೇಳುವುದರ ಜತೆಗೆ ಪ್ರಧಾನಿ ಮೋದಿಯವರು, “ಜೂನ್‌ ತಿಂಗಳಲ್ಲಿ “ಮನದ ಮಾತಿನ’ 111ನೇ ಆವೃತ್ತಿಯಲ್ಲಿ ಭೇಟಿಯಾಗೋಣ’ ಎಂದೂ ಹೇಳಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲೂ ತಾವೇ ಅಧಿಕಾರಕ್ಕೇರುವ ವಿಶ್ವಾಸವನ್ನು ಮತ್ತೂಮ್ಮೆ ವ್ಯಕ್ತಪಡಿಸಿದ್ದಾರೆ. “111 ಎನ್ನುವುದು ಶುಭ ಸಂಖ್ಯೆ. ಹೀಗಾಗಿ, ಜೂನ್‌ನಲ್ಲಿ ನಡೆಯುವ 111ನೇ ಆವೃತ್ತಿಯಲ್ಲಿ ಮತ್ತಷ್ಟು ವಿಚಾರಗಳ ಜತೆಗೆ ಮಾತನಾಡುತ್ತೇನೆ’ ಎಂದಿದ್ದಾರೆ.

ಬಾಗಲಕೋಟೆಯ ವೆಂಕಪ್ಪ ಸುಗೇತಕರರ ಗುಣಗಾನ

ಬಾಗಲ ಕೋಟೆ ಜಿಲ್ಲೆಯ ಜಾನಪದ ಹಾಡು ಗಾರ (ಗೊಂದಲಿ) ವೆಂಕಪ್ಪ ಅಂಬಾಜಿ ಸುಗತೇಕರ ಅವರ ಹೆಸರನ್ನು ಉಲ್ಲೇಖೀಸಿದ್ದಾರೆ. ಇದರ ಜತೆಗೆ ಬೆಂಗಳೂರಿನಲ್ಲಿ ಮ್ಯಾನೇಜ್‌ಮೆಂಟ್‌ ಕ್ಷೇತ್ರ ದಲ್ಲಿ ಉದ್ಯೋಗದಲ್ಲಿದ್ದು, ಒಡಿಶಾದ ಕಾಲಹಂದಿ ಜಿಲ್ಲೆ ಯಲ್ಲಿ ಆಡುಗಳ ಬ್ಯಾಂಕ್‌ ಸ್ಥಾಪಿಸಿದ ಜಯಂತಿ ಮಹಾ ಪಾತ್ರ ಮತ್ತು ಬೀರೇನ್‌ ಸಾಹು, ಬೆಂಗಳೂರಿನ 2 ಆ್ಯಪ್‌ಗ್ಳ ಬಗ್ಗೆಯೂ ಮೆಚ್ಚುಗೆಯ ಮಾತಾಡಿದ್ದಾರೆ.

82 ವರ್ಷದ ವೆಂಕಟಪ್ಪ ಅಂಬಾಜಿ ಸುಗತೇಕರ ನಿಶುಲ್ಕವಾಗಿ ಸಾವಿರಾರು ಮಂದಿಗೆ ಜಾನಪದ ಹಾಡುಗಳನ್ನು ಕಲಿಸಿಕೊಟ್ಟ ಹೆಗ್ಗಳಿಕೆ ಹೊಂದಿದ್ದಾರೆ ಎಂದರು. ದೇಶ ಹೊಂದಿರುವ ಸಾಂಸ್ಕೃತಿಕ ಕ್ಷೇತ್ರ ಮತ್ತು ಗಾಯನ ಕ್ಷೇತ್ರಕ್ಕೆ ಹಲವಾರು ಮಂದಿ ಕೊಡುಗೆಯನ್ನು ನೀಡಿದ್ದಾರೆ. ಅಂಥವರಲ್ಲಿ ವೆಂಕಪ್ಪ ಅಂಬಾಜಿ ಸುಗತೇಕರ ಕೂಡ ಒಬ್ಬರು ಎಂದು ಕೊಂಡಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next