Advertisement

Cashless System: ಶೀಘ್ರದಲ್ಲೇ ಕೆಎಸ್‌ಆರ್‌ಟಿಸಿಗೂ ಸ್ಮಾರ್ಟ್‌ ಟಿಕೆಟ್‌ ಯಂತ್ರ

05:19 AM Oct 24, 2024 | Team Udayavani |

ಕುಂದಾಪುರ: ಕೆಎಸ್‌ಆರ್‌ಟಿಸಿಗೂ ಸ್ಮಾರ್ಟ್‌ ಟಿಕೆಟ್‌ ಯಂತ್ರಗಳು ಬಂದಿದ್ದು, ಪ್ರಯಾಣಿಕರು ಯುಪಿಐ ಮೂಲಕ ಕ್ಯೂಟರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿಸಬಹುದು. ಈ ನಗದು ರಹಿತ ವ್ಯವಸ್ಥೆಯು ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

Advertisement

ಈಗಾಗಲೇ ವಾಯವ್ಯ ಸಾರಿಗೆಯವರು ಸ್ಕ್ಯಾನ್‌ ಮಾಡುವ ಯಂತ್ರವನ್ನು ಅಳವಡಿಸಿದ್ದಾರೆ. ಆದರೆ ಕೆಎಸ್‌ಆರ್‌ಟಿಸಿ ಎಟಿಎಂ ಕಾರ್ಡ್‌ ಮೂಲಕವೂ ಹಣ ಪಾವತಿಸಲು ಅವಕಾಶ ನೀಡಿದೆ. ಯಂತ್ರಗಳನ್ನು ನಿರ್ವಾಹಕರಿಗೆ ನೀಡುವ ಕಾರ್ಯ ಆರಂಭವಾಗಿದ್ದು, ಅದರ ನಿರ್ವಹಣೆ ಕರಗತವಾದ ಬಳಿಕ ಡಿಜಿಟಲ್‌ ಪಾವತಿ ಆರಂಭವಾಗಲಿದೆ.

ಆ್ಯಂಡ್ರಾಯ್ಡ ಯಂತ್ರ
ಈಗಿರುವ ಟಿಕೆಟ್‌ ವಿತರಣೆ ಯಂತ್ರಗಳ ಬದಲಿಗೆ ನಿರ್ವಾಹಕರಿಗೆ ಆ್ಯಂಡ್ರಾಯ್ಡ ಆಪರೇಟಿಂಗ್‌ನ ಟಚ್‌ ಸ್ಕ್ರೀನ್‌ ಸೌಲಭ್ಯದ ಸ್ಮಾರ್ಟ್‌ ವಿದ್ಯುನ್ಮಾನ ಟಿಕೆಟ್‌ ಯಂತ್ರ (ಇಟಿಎಂ) ನೀಡಲಾಗುತ್ತಿದೆ. 45 ಡಿಪೋಗಳಿಗೆ ಒದಗಿಸಲಾಗಿದ್ದು, ಅಕ್ಟೋಬರ್‌ ಅಂತ್ಯಕ್ಕೆ ಎಲ್ಲ 83 ಡಿಪೋಗಳಿಗೆ 10,240 ಯಂತ್ರಗಳನ್ನು ನೀಡಲಾಗುವುದು. ಮೊದಲ ಹಂತದಲ್ಲಿ ಈ ವಿದ್ಯುನ್ಮಾನ ಯಂತ್ರಗಳಲ್ಲಿ ನಗದು ರಹಿತ ಟಿಕೆಟ್‌ ವ್ಯವಸ್ಥೆಯ ಸಾಫ್ಟ್‌ವೇರ್‌ ಅಳವಡಿಸಿ, ಅದರ ಕಾರ್ಯ ನಿರ್ವಹಣೆ, ಸಾಧಕ – ಬಾಧಕಗಳನ್ನು ಪರಿಶೀಲಿಸಿ, ಅನಂತರ ಎಲ್ಲ ಬಸ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಯಂತ್ರಗಳ ಬಳಕೆಗೆ ಸಂಬಂಧಿಸಿ ನಿರ್ವಾಹಕರು ಹಾಗೂ ಸಿಬಂದಿಗೆ ತರಬೇತಿ ನೀಡಲಾಗಿದೆ.

ಬಾಡಿಗೆ ಯಂತ್ರಗಳು
ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ಗೆ ಸರಿಹೊಂದುವ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ಖರೀದಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಸಮಗ್ರ ಟಿಕೆಟಿಂಗ್‌ ತಂತ್ರಾಂಶದ ವಿನ್ಯಾಸ, ಅಭಿವೃದ್ಧಿ, ಅನುಷ್ಠಾನ, ವೆಬ್‌ ಹೋಸ್ಟಿಂಗ್‌, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜತೆಗೆ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಯಂತ್ರಗಳ ಪೂರೈಕೆದಾರರನ್ನು ಆಯ್ಕೆ ಮಾಡಲು ದಿಲ್ಲಿ ಮೂಲದ ಮೇ ಎಬಿಕ್ಸ್‌ ಕ್ಯಾಶ್‌ ಸಂಸ್ಥೆ ಟೆಂಡರ್‌ ಪಡೆದುಕೊಂಡಿದೆ.

ಸಂಸ್ಥೆ ಯಂತ್ರಗಳನ್ನು ಪೂರೈಸಿ, ಆರಂಭಿಕ ಹಂತದಲ್ಲಿ 10,245 ಹಾಗೂ ಮುಂದಿನ ದಿನಗಳಲ್ಲಿ ಅವಶ್ಯವಿದ್ದರೆ ಆ ಸಂಖ್ಯೆಗೆ ಅನುಗುಣವಾಗಿ ಟಿಕೆಟ್‌ ಯಂತ್ರಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟ್‌ ಯಂತ್ರ ಬಳಕೆಯನ್ನು ಪ್ರಾಯೋಗಿಕವಾಗಿ 150 ಬಸ್‌ಗಳಲ್ಲಿ ಆರಂಭಿಸಿ, ಅದರ ಪ್ರಗತಿ ಆಧಾರದಲ್ಲಿ ಉಳಿದ ಬಸ್‌ಗಳಲ್ಲೂ ಜಾರಿಗೊಳಿಸಲಾಗುವುದು.

Advertisement

ಅವಸರ ಇಲ್ಲ
ಎಲ್ಲ ಡಿಪೋಗಳಿಗೆ ವಿತರಣೆ ಆದ ಬಳಿಕ ಡಿಜಿಟಲ್‌ ಪಾವತಿ ಆರಂಭಿಸ ಲಾಗುವುದು. ಯಂತ್ರಗಳನ್ನು ತರಿಸಿದ ಬಳಿಕ ಅದರಲ್ಲಿ 52 ಸುಧಾರಣೆಗಳನ್ನು ಮಾಡಲಾಗಿದೆ. ಯುನಿಕೋಡ್‌ ಮೊದಲಾದ ಕನ್ನಡ ಅಕ್ಷರಗಳು ಸಹಿತ ಅನೇಕ ಬದಲಾವಣೆಗಳಾಗಿದ್ದು, ನಿರ್ವಾಹಕರು ಯಂತ್ರದ ನಿರ್ವಹಣೆಯನ್ನು ಸರಿಯಾಗಿ ಕಲಿತ ಬಳಿಕ ಡಿಜಿಟಲ್‌ ಪಾವತಿ ಆರಂಭವಾಗಲಿದೆ ಎಂದು ಕೆಎಸ್‌ಆರ್‌ಟಿಸಿಯ ನಿಗಮ ಕಾರ್ಯದರ್ಶಿ ಡಾ| ಟಿ.ಎಸ್‌. ಲತಾ “ಉದಯವಾಣಿ’ಗೆ ತಿಳಿಸಿದ್ದಾರೆ.

“ಟಿಕೆಟ್‌ ಯಂತ್ರಗಳ ವಿತರಣೆ ಬಳಿಕ ನಿಗಮದ ಹಣಕಾಸು ವಿಭಾಗ ಡಿಜಿಟಲ್‌ ಪಾವತಿ ಕುರಿತು ಕ್ರಮ ಕೈಗೊಳ್ಳಲಿದೆ.”
– ಆ್ಯಂಟನಿ ಜಾರ್ಜ್‌, ಮುಖ್ಯ ಸಂಚಾರ ವ್ಯವಸ್ಥಾಪಕರು, ಕೆಎಸ್ಸಾರ್ಟಿಸಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next