Advertisement

ಗೇರು ಬೀಜ ಅಕ್ರಮ ದಾಸ್ತಾನು, ದಾಖಲೆ ಇಲ್ಲದೆ ಸಾಗಾಟ ಪತ್ತೆ

01:58 AM Apr 23, 2020 | Sriram |

ಕಡಬ: ಗೇರು ಬೀಜ ಅಕ್ರಮ ದಾಸ್ತಾನು ಹಾಗೂ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿರುವ ಕೋವಿಡ್‌ ನಿಗ್ರಹದಳ ಹಾಗೂ ಎಪಿಎಂಸಿ ಅಧಿಕಾರಿಗಳು ಒಟ್ಟು 37,200 ರೂ. ದಂಡ ವಸೂಲಿ ಮಾಡಿರುವ ಘಟನೆ ಬುಧವಾರ ಕಡಬದಲ್ಲಿ ಸಂಭವಿಸಿದೆ.

Advertisement

ಎಪಿಎಂಸಿಯಿಂದ ಪರವಾನಿಗೆ ಪಡೆದುಕೊಂಡ ವ್ಯಾಪಾರಿಗಳಿಗೆ ಲಾಕ್‌ಡೌನ್‌ ಸಂದರ್ಭ ಗೇರು ಬೀಜ ಖರೀದಿಸಲು ನೀಡಿರುವ
ಅನುಮತಿಯನ್ನು ದುರುಪಯೋಗ ಪಡಿಸಿ ಕೆಲವು ವ್ಯಾಪಾರಿಗಳು ಅಡಿಕೆ ಖರೀದಿಸುತ್ತಿರುವುದು ಮಾತ್ರವಲ್ಲದೇ ಖರೀದಿ ಮಾಡಿದ ಗೇರುಬೀಜಕ್ಕೆ ಬಿಲ್‌ ನೀಡದೇ ತೆರಿಗೆ ವಂಚನೆ ಮಾಡುತ್ತಿ ರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಯಿತು.

ಕಡಬ ಕಂದಾಯ ನಿರೀಕ್ಷಕ ಅವಿನ್‌ರಂಗತ್‌ಮಲೆ, ಕೋವಿಡ್‌ ನಿಗ್ರಹ ದಳದ ಅಧಿಕಾರಿ ಮಸ್ತಾನ್‌ ಹಾಗೂ ಸಿಬಂದಿ ಕಡಬ ಭಾಗೀರಥಿ ಟವರ್ ನಲ್ಲಿರುವ ಅಡಿಕೆ ಅಂಗಡಿಯೊಂದರ ಬಳಿ ಗೇರುಬೀಜ ಹೇರಿಕೊಂಡು ನಿಲ್ಲಿಸಲಾಗಿದ್ದ 2 ಲಾರಿಗಳನ್ನು ವಶಪಡಿಸಿ ಕಡಬ ಪೊಲೀಸರ ವಶಕ್ಕೆ ನೀಡಿದರು.

37,200 ರೂ. ದಂಡ
ಬಳಿಕ ಆಗಮಿಸಿದ ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಅವರು ಪಂಜ ರಸ್ತೆಯಲ್ಲಿರುವ ಮಂಗಳೂರು ಟ್ರೇಡರ್ಗೆ ದಾಳಿ ನಡೆಸಿ ಅಕ್ರಮ ದಾಸ್ತಾನು ಇದ್ದ ಸುಮಾರು 25 ಕ್ವಿಂಟಾಲ್‌ ಗೇರು ಬೀಜವನ್ನು ಪತ್ತೆ ಮಾಡಿ 12 ಸಾವಿರ ರೂ. ದಂಡ ವಿಧಿಸಿದರು. ನ್ಯಾಶನಲ್‌ ಸುಪಾರಿ ಅಂಗಡಿಗೆ ದಾಳಿ ನಡೆಸಿ ಅಕ್ರಮ ದಾಸ್ತಾನು ಇದ್ದ ಸುಮಾರು 15 ಕ್ವಿಂಟಾಲ್‌ ಗೇರು ಬೀಜವನ್ನು ಪತ್ತೆ ಮಾಡಿ 7,200 ರೂ. ದಂಡ ವಿಧಿಸಿದರು. ಬಳಿಕ ಪೊಲೀಸರ ವಶದಲ್ಲಿದ್ದ 2 ಲಾರಿಗಳ ಪೈಕಿ 1ರಲ್ಲಿದ್ದಗೇರುಬೀಜಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಆ ವಾಹನವನ್ನು ಬಿಡುಗಡೆಗೊಳಿಸಲಾಯಿತು. ಆದಂ ಕೊçಲ ಅವರ ಮಾಲಕತ್ವದ ಇನ್ನೊಂದು ಲಾರಿಯಲ್ಲಿದ್ದ ಸುಮಾರು 37.5 ಕ್ವಿಂಟ್ವಾಲ್‌ ಗೇರು ಬೀಜವನ್ನು ಯಾವುದೇ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ ಹಿನ್ನೆಲೆ ಯಲ್ಲಿ ಅವರಿಗೆ 18 ಸಾವಿರ ರೂ. ದಂಡ ವಿಧಿಸಲಾಯಿತು.

ಕೇರಳ ರಾಜ್ಯದ ಬಿಲ್‌; ರಾಜ್ಯಕ್ಕೆ ತೆರಿಗೆ ವಂಚನೆ
ಕರ್ನಾಟಕದಲ್ಲಿ ಬೆಳೆದ ಅಡಿಕೆ, ಗೇರು ಬೀಜ ಸೇರಿದಂತೆ ಕೃಷಿಯುತ್ಪನ್ನಗಳಿಗೆ ಕೇರಳ ರಾಜ್ಯದ ಗಡಿ ಭಾಗದಲ್ಲಿನ ವ್ಯಾಪಾರಸ್ಥರು ಕೇರಳದ ಬಿಲ್‌ ಮಾಡಿ ರಾಜ್ಯ ಸರಕಾರಕ್ಕೆ ಹಾಗೂ ಎಪಿಎಂಸಿಗೆ ತೆರಿಗೆ ವಂಚನೆ ಮಾಡುತ್ತಿರುವ ಬೃಹತ್‌ ಜಾಲ ಕಾರ್ಯಾಚರಿಸುತ್ತಿರುವುದು ವರದಿಯಾಗಿದೆ.

Advertisement

ಕೇರಳದಲ್ಲಿ ಎಪಿಎಂಸಿ ಇಲ್ಲ, ಇದನ್ನೇ ಬಂಡವಾಳವಾಗಿಸಿಕೊಳ್ಳುವ ಗಡಿಭಾಗದ ವ್ಯಾಪಾರಿಗಳು ಕೃಷಿ ಉತ್ಪನ್ನಗಳನ್ನು ಖರೀದಿಸಿ ಅದಕ್ಕೆ ಕೇರಳ ರಾಜ್ಯದ ಬಿಲ್‌ ಮಾಡುತ್ತಾರೆ. ಇದರಿಂದ ವ್ಯಾಪಾರಿಗೆ ರಾಜ್ಯದ ಎಪಿಎಂಸಿಗೆ ಪಾವತಿ ಮಾಡುವ ಶೇ. 1.5 ತೆರಿಗೆ ಉಳಿಯುತ್ತದೆ. ಹಾಗೆಯೇ ರಾಜ್ಯಕ್ಕೆ ಸಲ್ಲಬೇಕಾದ ಶೇ. 2.5 ಜಿಎಸ್‌ಟಿ ಕೂಡ ಕೇರಳ ರಾಜ್ಯದ ಪಾಲಾಗುತ್ತದೆ. ಅದರಿಂದಾಗಿ ರಾಜ್ಯಕ್ಕೆ ಸಲ್ಲಬೇಕಾದ ಒಟ್ಟಾರೆ ಶೇ. 4 ತೆರಿಗೆ ವಂಚನೆಯಾಗುತ್ತಿದೆ. ಈ ದಂಧೆ ನಿರಂತರವಾಗಿ ನಡೆಯುತ್ತಿದ್ದರೂ ಅದನ್ನು ಪತ್ತೆ ಹಚ್ಚಿ ತಡೆಯಬೇಕಾದ ಸುಳ್ಯ ಎಪಿಎಂಸಿ ಅಧಿಕಾರಿಗಳಾಗಲಿ, ತೆರಿಗೆ ಇಲಾಖೆಯವರಾಗಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

ಅಡಿಕೆ ಅಕ್ರಮ ಸಾಗಾಟ
ಪುತ್ತೂರು: ಗ್ರಾಮೀಣ ಭಾಗಗಳಿಂದ ಅಡಿಕೆ ಖರೀದಿಸಿ ಪಕ್ಕದ ಕೇರಳ ರಾಜ್ಯ ಹಾಗೂ ತಮಿಳುನಾಡು ರಾಜ್ಯಗಳಿಗೆ ಅಕ್ರಮವಾಗಿ ಸಾಗಿಸುವ ಜಾಲ ಕಾರ್ಯಾಚರಿಸುತ್ತಿದೆ. ಗಡಿ ಪ್ರದೇಶವಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಕಾಡುದಾರಿಯ ಮೂಲಕ ಕೇರಳಕ್ಕೆ ಹಾಗೂ ಕೇರಳದಿಂದ ತಮಿಳುನಾಡಿಗೆ ಈ ಸಾಗಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಕಡಬ, ಕಾಣಿಯೂರು ಹಾಗೂ ಗ್ರಾಮೀಣ ಪ್ರದೇಶದ ಕೆಲವು ಭಾಗಗಳಿಂದ ವಾಹನಗಳಲ್ಲಿ ಸುಳ್ಯ ತಾಲೂಕಿನ ಕೆಲ ಭಾಗಗಳಿಗೆ ಅಡಿಕೆ ಒಯ್ಯಲಾಗುತ್ತದೆ. ಅಲ್ಲಿ ದಾಸ್ತಾನು ಮಾಡಿ ಅನಂತರ ಪಿಕಪ್‌ ವಾಹನಗಳಲ್ಲಿ ಕಾಡುದಾರಿಯ ಮೂಲಕ ಕೇರಳಕ್ಕೆ ತಲುಪಿಸಲಾಗುತ್ತಿದೆ. ಸುಳ್ಯ ಹಾಗೂ ಕೇರಳ ಗಡಿ ಭಾಗದ ಕೆಲವು ಪ್ರದೇಶಗಳಲ್ಲಿ ಅಡಕೆ ದಾಸ್ತಾನು ಮಾಡುವ ಮೂಲಕ ಸುಲಭವಾಗಿ ಕೇರಳ ರಾಜ್ಯಕ್ಕೆ ಅಲ್ಲಿಂದ ಕೇರಳ ಬಿಲ್‌ ಮೂಲಕ ತಮಿಳುನಾಡಿಗೆ ಸಾಗಾಟ ಅಕ್ರಮವಾಗಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next