Advertisement

3 ತಿಂಗಳು ಕಳೆದರೂ ಬಿಡುಗಡೆಯಾಗದ ಅನುದಾನ

10:11 AM Jan 28, 2020 | Sriram |

ಉಡುಪಿ: ಗೇರು ಕೃಷಿ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 200 ಹೆಕ್ಟೇರ್‌ ಸೇರಿದಂತೆ ರಾಜ್ಯದಲ್ಲಿ ಒಟ್ಟು 1,500 ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಕೃಷಿ ಅನುಷ್ಠಾನಗೊಳಿಸಲು ತೋಟಗಾರಿಕೆ ಇಲಾಖೆ ಮಾರ್ಗಸೂಚಿ ಹೊರಡಿಸಿ ಮೂರು ತಿಂಗಳು ಕಳೆದರೂ ಅನುದಾನ ಬಿಡುಗಡೆ ಆಗದೆ ಯೋಜನೆ ಕುಂಟುತ್ತಿದೆ.
ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದ.ಕ., ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ 100 ಹೆಕ್ಟೇರ್‌, ಚಿಕ್ಕಬಳ್ಳಾಪುರ, ಹಾವೇರಿ, ಮಂಡ್ಯ, ಧಾರವಾಡ, ಕೋಲಾರ ಜಿಲ್ಲೆಗಳಲ್ಲಿ ತಲಾ 49 ಹೆಕ್ಟೇರ್‌, ಬೆಂಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತಲಾ 39 ಹೆಕ್ಟೇರ್‌ ಸೇರಿದಂತೆ ಒಟ್ಟು 1,500 ಹಕ್ಟೇರ್‌ ಪ್ರದೇಶದಲ್ಲಿ ಗೇರು ಕೃಷಿ ಅನುಷ್ಠಾನದ ಗುರಿ ನೀಡಿದೆ.

Advertisement

ಯೋಜನೆಯ ಉದ್ದೇಶ
ಗೇರು ಉತ್ಪಾದನೆ ಹೆಚ್ಚಿಸುವ ಮೂಲಕ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಮುಖ್ಯ ಉದ್ದೇಶ. ಆಯಾ ಪ್ರದೇಶ ಮತ್ತು ಹವಾಗುಣಕ್ಕೆ ಹೊಂದುವ ಕಸಿ ಗಿಡ ನಾಟಿ ಮಾಡುವುದು ಹಾಗೂ ಒಣ ಬೇಸಾಯ ಪದ್ಧತಿಯಲ್ಲಿ ಗೇರು ಕೃಷಿ ವಿಸ್ತರಿಸಲು ಪ್ರೋತ್ಸಾಹ ನೀಡುವುದು ಸೇರಿವೆ.

ಶೇ. 50ರಷ್ಟು ಸಹಾಯಧನ
ಕಾರ್ಯಕ್ರಮದಡಿ ಸಾಮಾನ್ಯ ಫ‌ಲಾನುಭವಿಗೆ ಒಂದು ಘಟಕಕ್ಕೆ (1 ಹೆಕ್ಟೇರ್‌) ತಗಲುವ ಒಟ್ಟಾರೆ ವೆಚ್ಚದ ಶೇ. 50ರಷ್ಟು ಅಂದರೆ, ಪ್ರತಿ ಹೆಕ್ಟೇರ್‌ಗೆ ಗರಿಷ್ಠ 22,539 ರೂ. ಸಹಾಯಧನ ನೀಡಲಾಗುತ್ತದೆ. ಪ.ಜಾತಿ, ಪಂಗಡದವರಿಗೆ ಶೇ. 90ರಷ್ಟು ಅಂದರೆ, ಪ್ರತಿ ಹೆಕ್ಟೇರ್‌ಗೆ ಗರಿಷ್ಠ 40,569 ರೂ.ನಷ್ಟು ಸಹಾಯಧನ ನೀಡಲಾಗುತ್ತದೆ. ಸಹಾಯ ಧನವನ್ನು 0.2ರಿಂದ 4 ಹೆಕ್ಟೇರ್‌ ವರೆಗೆ ನೀಡಬಹುದಾಗಿದೆ. ಇದರಲ್ಲಿ 12 ಸಾವಿರ ರೂ. ಮೊತ್ತವನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಎನ್‌ಆರ್‌ಇಜಿ ಅನುದಾನದ ಮೂಲಕ ಭರಿಸಲಾಗುತ್ತದೆ. ರೈತರಿಗೆ ಅಗತ್ಯ ತರಬೇತಿಯನ್ನು ಇಲಾಖೆ ನೀಡಲಿದೆ.

ಹಣ ಬಾರದೆ ಹಿನ್ನಡೆ
ರಾಜ್ಯ ಸರಕಾರ ಗೇರು ಪ್ರದೇಶ ವಿಸ್ತರಣೆಗಾಗಿ 2019ರ ಅ. 30ರಂದು 24 ಜಿಲ್ಲೆಗಳ ತೋಟಗಾರಿಕೆ ಇಲಾಖೆಗಳಿಗೆ ಮಾರ್ಗಸೂಚಿ ರವಾನಿಸಿತ್ತು. ಆದರೆ ಸೂಕ್ತ ಅನುದಾನವಿಲ್ಲದೆ ಯೋಜನೆ ಅನುಷ್ಠಾನವಾಗಿಲ್ಲ. ಮುಂದಿನ ವರ್ಷ ಅನುದಾನ ಕಾದಿರಿಸಿ ಯೋಜನೆ ಕಾರ್ಯರೂಪಕ್ಕೆ ತರುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜಿಲ್ಲೆ ಪ್ರಸ್ತುತ ಗೇರು ಬೆಳೆ (ಹೆ.)
ದಕ್ಷಿಣ ಕನ್ನಡ 26,000
ಉಡುಪಿ 17,000

Advertisement

ಗೇರು ಕೃಷಿ ಪ್ರದೇಶ ವಿಸ್ತರಣೆ ಯೋಜನೆಯಡಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ತಲಾ 100 ಹೆಕ್ಟೇರ್‌ ಗರಿಷ್ಠ ವಿಸ್ತರಣೆಯ ಗುರಿ ನೀಡಲಾಗಿದೆ.

ಜಿಲ್ಲೆಯ ಗೇರು ಪ್ರದೇಶ ವಿಸ್ತರಣೆಗೆ ಸಂಬಂಧಿಸಿದಂತೆ ಕಾರ್ಯ ಯೋಜನೆ ಸಿದ್ಧವಾಗಿದೆ. ಹಣ ಬಿಡುಗಡೆಯಾದ ತತ್‌ಕ್ಷಣ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
 - ಭುವನೇಶ್ವರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ ಉಡುಪಿ

 ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next