Advertisement

ಕ್ಯಾಶ್‌ಬ್ಯಾಕ್‌: ಜಿಎಸ್ಟಿ  ಆಫ‌ರ್‌

11:09 AM Aug 05, 2018 | |

*ಡಿಜಿಟಲ್‌ ಉತ್ತೇಜನಕ್ಕೆ  ಮಹತ್ವದ  ನಿರ್ಧಾರ 
*ಆನ್‌ಲೈನ್‌ ಮೂಲಕ ವಹಿವಾಟು ಮಾಡಿದರೆ ಬಂಪರ್‌ ಕೊಡುಗೆ
*ಭೀಮ್‌, ರುಪೇ ಕಾರ್ಡ್‌ ಮೂಲಕವೇ ಹಣ ಪಾವತಿಗೆ ಪ್ರೋತ್ಸಾಹ
*ಸಣ್ಣ, ಮಧ್ಯಮ ಕೈಗಾರಿಕೆಗಳ ಸಮಸ್ಯೆ ನಿವಾರಣೆಗೆ ಉಪ ಸಮಿತಿ ರಚನೆ 

Advertisement

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆಗೆ ಮುಂದಾಗಿರುವ ಜಿಎಸ್‌ಟಿಮಂಡಳಿ, ಆನ್‌ಲೈನ್‌ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಿದೆ. ಭೀಮ್‌ ಆ್ಯಪ್‌, ರುಪೇ ಕಾರ್ಡ್‌ ಮತ್ತು
ಯುಪಿಐ ಪಾವತಿ ವಿಧಾನದ ಮೂಲಕ ವಹಿವಾಟು ಮಾಡಿದಲ್ಲಿ ಶೇ.20ರಷ್ಟು ಕ್ಯಾಶ್‌ಬ್ಯಾಕ್‌ ನೀಡುವ ಕುರಿತಂತೆ ಶನಿವಾರ ಇಲ್ಲಿನ ವಿಜ್ಞಾನ ಭವನದಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 29ನೇ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಪ್ರಾಯೋಗಿಕವಾಗಿ ಜಾರಿಗೆ ತರಲು ಮುಂದಾಗಿರುವ ಜಿಎಸ್‌ಟಿ ಮಂಡಳಿ, ಯಾವ ರಾಜ್ಯಗಳು ಆಸಕ್ತಿ ವಹಿಸಿ ಮುಂದೆ ಬರುತ್ತವೆಯೋ, ಅವುಗಳಿಗೆ ನೀಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಶ್‌ ಗೋಯಲ್‌ ಹೇಳಿದ್ದಾರೆ.

ಇದರ ಅಡಿಯಲ್ಲಿ ಒಟ್ಟಾರೆ ಜಿಎಸ್‌ಟಿ ಪಾವತಿಯ ಶೇ.20 ರಷ್ಟು ಅಥವಾ ಗರಿಷ್ಠ 100 ರೂ.ಗಳ ವರೆಗೆ ಕ್ಯಾಷ್‌ಬ್ಯಾಕ್‌ ಉತ್ತೇಜನ ಸಿಗಲಿದೆ ಎಂದು ಗೋಯಲ್‌ ತಿಳಿಸಿದ್ದಾರೆ. ಪ್ರಾಯೋಗಿಕವಾಗಿ ಜಾರಿ ಮಾಡಿ, ಲಾಭ ಮತ್ತು ನಷ್ಟದ ಬಗ್ಗೆ
ಪರಾಮರ್ಶಿಸಿ ನಂತರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಭೀಮ್‌, ಯುಪಿಐ ಮತ್ತು ರುಪೇ ಕಾರ್ಡ್‌ ಬಳಸಿಕೊಂಡು ಆನ್‌ಲೈನ್‌ ಪಾವತಿಗೆ ಉತ್ತೇಜನ ನೀಡುವುದು, ಅದರಲ್ಲೂ ಸಣ್ಣಪುಟ್ಟ ನಗರ ಮತ್ತು  ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್‌ ವಹಿವಾಟಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಬಿಹಾರ ಡಿಸಿಎಂ ಸುಶೀಲ್‌ ಮೋದಿ ಹೇಳಿದ್ದಾರೆ.

ಇನ್ಮುಂದೆ ಮೂರೇ ಹಂತ: ಈ ಮಧ್ಯೆ ಕೋಲ್ಕತಾದಲ್ಲಿ ಜಿಎಸ್‌ಟಿ ಕುರಿತಂತೆ ಮಾತನಾಡಿರುವ ಹಣಕಾಸು ಇಲಾಖೆಯ ಪ್ರಧಾನ ಸಲಹೆಗಾರ ಸಂಜೀವ್‌ ಸನ್ಯಾಲ್‌, ಮುಂದಿನ ದಿನಗಳಲ್ಲಿ ಮೂರು ಹಂತದ ಜಿಎಸ್‌ಟಿ ಮಾತ್ರ ಇರಲಿದೆ ಎಂದಿದ್ದಾರೆ. ಅಂದರೆ ಶೇ.5, ಶೇ.15 ಮತ್ತು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈಗಾಗಲೇ ಶೇ.5ರ ಹಂತವಿದ್ದು, ಮುಂದೆ ಶೇ.12 ಮತ್ತು ಶೇ.18 ವಿಲೀನಗೊಳಿಸಿ, ಶೇ.15ರ ಹಂತ ಜಾರಿಗೆ ತರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಹಾಗೆಯೇ ಶೇ.28 ಅನ್ನು ಶೇ.25ಕ್ಕೆ ಇಳಿಕೆ ಮಾಡಲಾಗುತ್ತದೆ ಎಂದಿದ್ದಾರೆ. ಸದ್ಯ ಶೇ.5, ಶೇ.12, ಶೇ.18  ಮತು ಶೇ.28 ರ ನಾಲ್ಕು ಹಂತದ ತೆರಿಗೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next