ಮುಂಬೈ: ಕಪ್ಪುಹಣ ಮಟ್ಟ ಹಾಕುವ ನಿಟ್ಟಿನಲ್ಲಿ ಎನ್‌ಡಿಎ ಸರ್ಕಾರ ನೋಟು ಅಮಾನ್ಯ ನಿರ್ಧಾರ ಕೈಗೊಂಡು (ನ.8) 5 ವರ್ಷಗಳು ಪೂರ್ತಿಗೊಂಡಿವೆ. ಡಿಜಿಟಲ್ ಪಾವತಿ ಪ್ರಮಾಣ, ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಬಳಕೆಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರ ಹೊರತಾಗಿಯೂ ಕೂಡ ನಗದು ಚಲಾವಣೆಯೇ ಅಗ್ರ ಸ್ಥಾನದಲ್ಲಿದೆ. ದೇಶದ ಜಿಡಿಪಿಯ ಶೇ.14.5ರಷ್ಟಾಗಿದ್ದು, 2020-21ನೇ ವಿತ್ತೀಯ ವರ್ಷಕ್ಕೆ ಸಂಬಂಧಿಸಿದ ಮಾಹಿತಿ ಇದಾಗಿದೆ.
2018-19ನೇ ವಿತ್ತೀಯ ವರ್ಷದಲ್ಲಿ ಡಿಜಿಟಲ್ ಪಾವತಿ ಪ್ರಮಾಣ ಕಡಿಮೆ ಇತ್ತು. ಆದರೆ, ಸದ್ಯ ಅದರ ಪ್ರಮಾಣ ಮೂರು ಪಟ್ಟು ಏರಿಕೆಯಾಗಿದೆ ಎಂದು ಆರ್‌ಬಿಐ ದತ್ತಾಂಶಗಳಲ್ಲಿಯೇ ದಾಖಲಾಗಿದೆ. ನೋಟು ಅಮಾನ್ಯ ನಿರ್ಧಾರದಿಂದಾಗಿ ದೇಶದಲ್ಲಿ ನಕಲಿ ನೋಟುಗಳ ಪ್ರಮಾಣ ಇಳಿಕೆಯಾಗಿದೆ.
ಅದಕ್ಕೆ ಪುಷ್ಟೀಕರಣವೂ ಇದೆ. 2018-19ನೇ ಸಾಲಿನಲ್ಲಿ 3,10,000 ದಿಂದ 2019-20ನೇ ಸಾಲಿನಲ್ಲಿ 2,90,000, 2020-21ನೇ ಸಾಲಿನಲ್ಲಿ 2,00,000ಕ್ಕೆ ಇಳಿಕೆಯಾಗಿದೆ. ಈ ಮೂಲಕ ದೇಶದ ಅರ್ಥ ವ್ಯವಸ್ಥೆ ಮತ್ತಷ್ಟು ಸ್ಥಿರೀಕರಣಗೊಳ್ಳುತ್ತಿದೆ ಮತ್ತು ಔಪಚಾರಿಕ ವ್ಯವಸ್ಥೆಯನ್ನು ಹೊಂದುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಎಸ್‌ಬಿಒ ಒಕ್ಕೂಟದ ಮುಖ್ಯ ಅರ್ಥಶಾಸ್ತ್ರಜ್ಞ ಸೌಮ್ಯಾ ಕಾಂತಿ ಘೋಷ್ ಪ್ರಕಾರ ಅನೌಪಚಾರಿಕ ಅರ್ಥ ವ್ಯವ್ಯಸ್ಥೆಯ ಪ್ರಮಾಣ ಒಟ್ಟು ದೇಶೀಯ ಉತ್ಪಾದಕತೆ (ಜಿಡಿಪಿ)ಯ ಶೇ.40ರಿಂದ ಶೇ.20ಕ್ಕೆ ಕಡಿಮೆಯಾಗಿದೆ. ಐರೋಪ್ಯ ಒಕ್ಕೂಟ ಮತ್ತು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳ ಅನೌಪಚಾರಿಕ ಅರ್ಥ ವ್ಯವಸ್ಥೆಯ ಶೇ.34ಕ್ಕೆ ಹೋಲಿಕೆ ಮಾಡಿದರೆ ದೇಶದ ಸಾಧನೆ ಅತ್ಯುತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.