ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಂಚಿಗೆ ಸಿಲುಕಿರುವ ಪಾಕಿಸ್ತಾನ ಇದೀಗ ವಿದೇಶಿ ಸಾಲವನ್ನು ತೀರಿಸಲಾಗದ ಪರಿಣಾಮ ರಾಜಧಾನಿ ಇಸ್ಲಾಮಾಬಾದ್ ನಲ್ಲಿರುವ ಸಾರ್ವಜನಿಕ ಆಸ್ತಿಗಳನ್ನು ಮೂರನೇ ದೇಶಗಳಿಗೆ ಮಾರಾಟ ಮಾಡುತ್ತಿರುವುದಾಗಿ ವರದಿ ತಿಳಿಸಿದೆ.
ಈ ನಿಟ್ಟಿನಲ್ಲಿ ಪಾಕಿಸ್ತಾನ ಯುಎಇ ಮೂಲದ ಕಂಪನಿಗೆ 220 ಮಿಲಿಯನ್ ಡಾಲರ್ ಗೆ ಕರಾಚಿ ಬಂದರಿನಲ್ಲಿರುವ 9 ಹಡಗು ನಿಲ್ದಾಣವನ್ನು ಗುತ್ತಿಗೆಗೆ ನೀಡಿದೆ. 50 ವರ್ಷಗಳ ಕಾಲದ ರಿಯಾಯ್ತಿ ಒಪ್ಪಂದದ ಮೇರೆಗೆ ಹಡಗು ನಿಲ್ದಾಣವನ್ನು ಗುತ್ತಿಗೆಗೆ ನೀಡಲಾಗಿದ್ದು, ಇದನ್ನು ನೂತನವಾಗಿ ರಚಿಸಲಾಗಿದ್ದ ಕರಾಚಿ ಗೇಟ್ ವೇ ಟರ್ಮಿನಲ್ ಲಿಮಿಟೆಡ್ (KGTL) ಬಂದರು ಅಭಿವೃದ್ಧಿ, ಹಡಗು ಸಂಚಾರ, ಸಾಗಣೆಯ ಕಾರ್ಯವನ್ನು ನಿರ್ವಹಿಸಲಿದೆ.
ಆರ್ಥಿಕ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನ ಕಳೆದ ವರ್ಷವೇ ಸಾರ್ವಜನಿಕ ಆಸ್ತಿಗಳನ್ನು ಅಡಮಾನ ಇಡಲು ಆಫರ್ ನೀಡಿತ್ತು. ಆದರೆ ಯಾವ ದೇಶವೂ ಗುತ್ತಿಗೆ ಪಡೆಯಲು ಮುಂದಾಗಿಲ್ಲವಾಗಿತ್ತು. ಇದೀಗ ಸ್ನೇಹಿತ ರಾಷ್ಟ್ರವಾದ ಯುಎಇ ಕರಾಚಿ ಬಂದರನ್ನು ಗುತ್ತಿಗೆಗೆ ಪಡೆಯಲು ಮುಂದಾಗುವ ಮೂಲಕ ವಿದೇಶಿ ಅಗತ್ಯತೆಯನ್ನು ಪೂರೈಸಲು ನೆರವಾದಂತಾಗಿದೆ.
ಅದೇ ರೀತಿ ಇಸ್ಲಾಮಾಬಾದ್ ಇದೀಗ ನ್ಯೂ ಇಸ್ಲಾಮಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುತ್ತಿಗೆಗೆ ನೀಡಲು ನಿರ್ಧರಿಸಿದೆ. ಏತನ್ಮಧ್ಯೆ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ಬಾಕಿ ಹಣವನ್ನು ಪಾವತಿಸದೇ ಇದ್ದ ಪರಿಣಾಮ ಕರಾಚಿ ಮತ್ತು ಲಾಹೋರ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುತ್ತಿಗೆ ನೀಡುವಲ್ಲಿ ಸಂಕಷ್ಟ ಅನುಭವಿಸಿತ್ತು ಎಂದು ವರದಿ ತಿಳಿಸಿದೆ.
ಐಎಂಎಫ್ ನೆರವು:
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ನೆರವಿಗೆ ಧಾವಿಸಿದ್ದು, 3 ಶತಕೋಟಿ ಡಾಲರ್ ನಷ್ಟು ನೆರವಾಗಿ ನೀಡಲು ಮುಂದಾಗಿದೆ. ಇದರಿಂದಾಗಿ ಪಾಕಿಸ್ತಾನದ ಆರ್ಥಿಕ ಸ್ಥಿರೀಕರಣಕ್ಕೆ ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.