ಆಳಂದ: ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬದಲ್ಲಿ ಅಂಚೆ ಜೀವ ವಿಮೆ ಕೈಗೊಂಡು ಸಂಪೂರ್ಣ ವಿಮಾ ಗ್ರಾಮವಾದರೆ ಅಂತಹ ಗ್ರಾಮಕ್ಕೆ ಲಕ್ಷ ರೂಪಾಯಿ ಪುರಸ್ಕಾರ ನೀಡಲಾಗುತ್ತಿದೆ ಎಂದು ಅಂಚೆ ಇಲಾಖೆಯ
ಕಲಬುರಗಿ ವಿಭಾಗೀಯ ಹಿರಿಯ ಅಧೀಕ್ಷಕ ಎಸ್.ಎಸ್. ಪಾಟೀಲ ಹೇಳಿದರು.
ತಾಲೂಕಿನ ಕಣಮಸ್ ಗ್ರಾಮದಲ್ಲಿ ಮಂಗಳವಾರ ಅಂಚೆ ಇಲಾಖೆ ಹಮ್ಮಿಕೊಂಡ ಇಲಾಖೆಯ ಯೋಜನೆಗಳ ಮಾಹಿತಿ
ಕಾರ್ಯಕ್ರಮ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಂತ ವಿಶ್ವಾಸರ್ಹ ಇಲಾಖೆಯ ಅಂಚೆ ಕಚೇರಿಯಲ್ಲಿ ಗ್ರಾಹಕರು ಠೇವಣಿ ಇರಿಸುವುದು, ಉಳಿತಾಯ ಖಾತೆ ತೆರೆಯುವುದು ಮತ್ತು ವಿಮಾ ಪಾಲಿಸಿಗಳಿಂದ ಭವಿಷ್ಯದಲ್ಲಿ ಲಾಭ ಹೊಂದಲು ಸಾಧ್ಯವಿದೆ ಎಂದು ಹೇಳಿದರು.
ಕೇವಲ 50 ರೂಪಾಯಿ ವೆಚ್ಚದಲ್ಲಿ ಉಳಿತಾಯ ಖಾತೆ ತೆರೆದ ಗ್ರಾಹಕರಿಗೆ ಉಚಿತ ಎಟಿಎಂ ಕಾರ್ಡ್, ಸೇವಾ ತೆರಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಮುಂದಿನ ದಿನಗಳಲ್ಲೂ ಅಂಚೆ ಗ್ರಾಮೀಣ ಶಾಖೆಗಳಲ್ಲಿ ಕಂಪ್ಯೂಟರ್ ಅಳವಡಿಸಿ ಆನ್‌ಲೈನ್ ವ್ಯವಸ್ಥೆ ಮೂಲಕ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹಣದ ವ್ಯವಹಾರ ಕೈಗೊಳ್ಳಬಹುದಾಗಿದೆ. ಆಧಾರ ಕಾರ್ಡ್‌ಗಳಲ್ಲಿನ ಲೋಪದೋಷ ಸರಿಪಡಿಸುವಿಕೆಯಂತೆ ಹತ್ತು ಹಲವಾರ ಯೋಜನೆಗಳು ಜಾರಿಗೆ ತರುವ ಯೋಜನೆ ಇದೆ. ಎಸ್.ಬಿ, ಆರ್‌ಡಿ, ಟಿಡಿ, ಎಸ್‌ಎಸ್‌ಎ, ಆರ್‌ಪಿಎಲ್‌ಐ ಯೋಜನೆಗಳ ಲಾಭವನ್ನು ಪಡೆಯಬೇಕು ಎಂದರು.
ಸಹಾಯಕ ಅಧಿಧೀಕ್ಷಕ ಆರ್.ಕೆ. ಉಮರಾಣಿ ಮಾತನಾಡಿ, ಸುಕನ್ಯ ಸಮೃದ್ಧಿ ಅಡಿಯಲ್ಲಿ ತಿಂಗಳಿಗೆ ಸಾವಿರ ಸೇರಿ 14 ವರ್ಷಗಳ ಕಾಲ ತುಂಬಿದರೆ, ಸುಮಾರು 5 ಲಕ್ಷ ರೂಪಾಯಿ ವಿಮಾ ಮೊತ್ತ ದೊರೆಯುತ್ತದೆ. ಇಂಥ ಹಲವಾರ ಸೇವಾ
ತೆರಗಿ ರಹಿತ ಯೋಜನೆಗಳಿವೆ. ಗ್ರಾಮೀಣ ಜನರು ಲಾಭ ಪಡೆಯಬೇಕು ಎಂದರು.
ಅಂಚೆ ಸಹಾಯಕ ಅಧೀಕ್ಷಕ ಸುಶಿಲ ಕುಮಾರ ತಿವಾರಿ ಮಾತನಾಡಿದರು. ಅಂಚೆ ಕ್ಷೇತ್ರಾಧಿಕಾರಿ ವಿಜಯಕುಮಾರ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಪೋಸ್ಟ್ ಮಾಸ್ಟರ್‌ಗಳಾದ ಸಾತಲಿಂಗಪ್ಪ ತೋರಕಡೆ, ಪರಮೇಶ್ವರ ಪಾಟೀಲ, ಶ್ರೀಶೈಲ ಜಳಕೋಟಿ, ಶೇಖರ ವಡಗಾಂವ, ಮಹಾದೇವ ಕೊರಳ್ಳಿ, ಮಲ್ಲೇಶಪ್ಪ ಮಲಶೆಟ್ಟಿ, ಸುಧಾಕರ ಕುಲಕರ್ಣಿ ಮತ್ತು ಗ್ರಾಮದ ಮುಖಂಡರಾದ ಸಿದ್ರಾಮಪ್ಪ ಪಾಟೀಲ, ಶರಣಯ್ಯ ಸ್ವಾಮಿ, ಸೂರ್ಯಕಾಂತ ಕಾಳೆ, ಶಶಿಕಾಂತ ಕಾಳೆ, ದತ್ತಾತ್ರೆಯ ಆಳಂಗೆ, ಷಣ್ಮೂಖ ಮಾಂಜ್ರೆ, ಗ್ರಾಪಂ ಸದಸ್ಯ ಚಂದ್ರಕಲಾ ಮೊದಲಾದವರು ಇದ್ದರು. ಬಾಬುರಾವ್ ಪಾಟೀಲ ಸ್ವಾಗತಿಸಿದರು. ಮಾರುತಿ ಗೊಣೆಪ್ಪನವರ ನಿರೂಪಿಸಿದರು. ಲಕ್ಕನ ಪವಾರ ವಂದಿಸದರು.
ಗ್ರಾಮಸ್ಥರ ಗೊಂದಲ ನಿವಾರಿಸಿದ ಅಧಿಕಾರಿಗಳು
ಆಳಂದ: ಕೇಂದ್ರ ಸರ್ಕಾರವು ಅಂಚೆ ಇಲಾಖೆ ಮೂಲಕ ಜಾರಿಗೆ ತಂದಿರುವ ಜನಸ್ನೇಹಿ ಯೋಜನೆಗಳ ಕುರಿತು
ತಾಲೂಕಿನ ಕಣಮಸ್ ಗ್ರಾಮದಲ್ಲಿ ಅಂಚೆ ವಿಭಾಗೀಯ ಅಧಿಕಾರಿಗಳು ಜಾಗೃತಿ ಮೂಡಿಸಿದರು. ಗ್ರಾಮೀಣ ಅಂಚೆ ಜೀವವಿಮೆ ಮೇಳದ ನಂತರ ಗ್ರಾಮದಲ್ಲಿ ಅಧಿಕಾರಿಗಳು ಯೋಜನೆಗಳ ಸದ್ಬಳಕೆ ಕೈಗೊಳ್ಳುವಂತೆ ಮಾಹಿತಿ ನೀಡಿದರು. ಗ್ರಾಮಸ್ಥರು ಕೇಳಿದ ಪ್ರಶ್ನಿಗಳಿಗೆ ಉತ್ತರಿಸುವ ಮೂಲಕ ಜನರಲ್ಲಿ ಯೋಜನೆಗಳ ಗೊಂದಲ ನಿವಾರಿಸಿದರು.