Advertisement

Parents: ಹೆತ್ತವರಿಗೆ ಕಿರುಕುಳ ಪ್ರಕರಣ ಏರಿಕೆ

04:20 PM Aug 21, 2023 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೆತ್ತವರು ಜತೆಗಿಲ್ಲ ಎಂದು ಬೇಸರ ಪಟ್ಟುಕೊಳ್ಳುವವರ ಮಧ್ಯೆ, ಆಸ್ತಿ, ಮನೆ, ಹಣ ವಿಷಯಕ್ಕೆ ಸಂಬಂಧಿಸಿದಂತೆ ಹೆತ್ತವರಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುವ ಪ್ರಕರಣ ಸಂಖ್ಯೆ ಹೆಚ್ಚಾಗಿದೆ.

Advertisement

ಮದುವೆಯಾದ ನಂತರ ಮಕ್ಕಳು ಹೆತ್ತವರನ್ನು ಮನೆಯಿಂದ ಆಚೆ ಹಾಕುವುದು, ಆಸ್ಪತ್ರೆ ವೆಚ್ಚ ಭರಿಸದೆ ಇರುವುದು ಒಂದೆಡೆಯಾದರೆ, ಇನ್ನೊಂದೆಡೆ ಮನೆಯಲ್ಲಿಯೇ ಇರಿಸಿಕೊಂಡು, ಹಣ-ಆಸ್ತಿಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುವುದು ಅಧಿಕವಾಗಿದ್ದು, ಈ ಕುರಿತಂತೆ ಹಿರಿಯರ ಸಹಾಯವಾಣಿ ಕರೆಗಳು ದಿನದಿಂದ ದಿನಕ್ಕೆ  ಏರಿಕೆಯಾಗುತ್ತಿವೆ.

ಮಧ್ಯಮ ವರ್ಗದ ಸಮುದಾಯದಲ್ಲಿ ಮನೆ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಗಂಡ ಮತ್ತು ಹೆಂಡತಿ ಇಬ್ಬರೂ ಸಂಪಾದಿಸಿದರೆ ಜೀವನ ಎಂಬಂತಾಗಿದೆ. ಕೆಲಸದ ಒತ್ತಡ, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ನಡುವೆ ಹೆತ್ತವರು ಮೂಲೆ ಗುಂಪಾಗುತ್ತಿದ್ದಾರೆ. ತಂದೆ-ತಾಯಿಯೊಂದಿಗೆ ಒಂದು ಕ್ಷಣ ಪ್ರೀತಿಯಿಂದ ಮಾತನಾಡಲು ಸಮಯ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೇ ಅಲ್ಲದೇ, ಆಸ್ತಿ, ಹಣ ಮುಂತಾದ ಸಮಸ್ಯೆಗಳ ಮಧ್ಯೆ ಹಿರಿಯರು ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ.

ಮನೆಯವರಿಂದಲೇ ದೌರ್ಜನ್ಯ: ಹಿರಿಯರ ಸಂರಕ್ಷಣೆ ಹಿನ್ನೆಲೆ ಬೆಂಗಳೂರು ಸಿಟಿ ಪೊಲೀಸ್‌ ಹಾಗೂ ನೈಟಿಂಗೇಲ್ಸ್‌ ಮೆಡಿಕಲ್‌ ಟ್ರಸ್ಟ್‌ ಜಂಟಿಯಾಗಿ ನಡೆಸುತ್ತಿರುವ “ಹಿರಿಯ ಸಹಾಯವಾಣಿ’ಗೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿದಿನ 10- 15 ಕರೆಗಳು ಬರುತ್ತಿವೆ. ಇದರಲ್ಲಿ ಮನೆಯವರಿಂದಲೇ ಆಗಿರುವ ದೌರ್ಜನ್ಯ ಪ್ರಕರಣಗಳೇ ಅಧಿಕ. ಉಳಿದಂತೆ ವಿಶ್ವಾಸರ್ಹರು, ನೆರೆಹೊರೆಯವರು, ಸ್ನೇಹಿತರಿಂದಲೂ ತೊಂದರೆಯಾದ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

ಪ್ರಕರಣ-1- ವೃದ್ಧೆಗೆ ಕಿರುಕುಳ:

Advertisement

72 ವರ್ಷದ ವಯೋವೃದ್ಧೆಯೊಬ್ಬರು ವಾಸಿಸುತ್ತಿರುವ ಮನೆಯೂ ಆಕೆಯ ಹೆಸರಿನಲ್ಲಿ ನೋಂದಣಿಯಾಗಿದ್ದು, ಆ ಆಸ್ತಿಯೂ ಅವಳ ತವರು ಮನೆಯಿಂದ ಉಡುಗೊರೆಯಾಗಿ ಕೊಟ್ಟಿರುವುದಾಗಿದೆ. ಆದರೆ, ಆಕೆಯ ಮಗ ಮತ್ತು ಸೊಸೆ ಮನೆಯನ್ನು ಆವರಿಸಿಕೊಂಡು, ತನ್ನ ತಾಯಿಗೆ ನಿತ್ಯ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಲಾಗುತ್ತಿತ್ತು. ಇದರಿಂದ ಬೇಸತ್ತ ವಯೋವೃದ್ಧೆ, ಹಿರಿಯರ ಸಹಾಯವಾಣಿಗೆ ಕರೆ ಮಾಡಿ, ಮಗ ಮತ್ತು ಸೊಸೆಯನ್ನು ಮನೆಯಿಂದ ಹೊರಗೆ ಕಳುಹಿಸಬೇಕಾಗಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯರ ಸಹಾಯವಾಣಿ ಸಿಬ್ಬಂದಿ ಆಕೆಯ ಮಗ ಮತ್ತು ಸೊಸೆಯನ್ನು ಕರೆಸಿ, ಸಮಾಲೋಚನೆ ನಡೆಸಿದರು. ಆಗ ಮಗ ಮತ್ತು ಸೊಸೆಯು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೋಗಲು ಸಾಧ್ಯವೇ ಇಲ್ಲ ಎಂದಾಗ ನಿಮ್ಮ ತಾಯಿಗೆ ಮಾನಸಿಕ ಅಥವಾ ದೈಹಿಕವಾಗಿ ಯಾವುದೇ ರೀತಿಯ ಹಿಂಸೆಯನ್ನು ನೀಡಬಾರದು. ನಿಮ್ಮ ಪಾಡಿಗೆ ನಿಮ್ಮ ಜೀವನವನ್ನು ಮೊದಲನೇ ಮಹಡಿಯಲ್ಲಿ ಕಳೆಯಲು ತಿಳಿಸಲಾಗಿದ್ದು, ಇದೀಗ ಆ ವಯೋವೃದ್ಧೆ ನೆಮದಿಯಿಂದಿದ್ದಾರೆ.

ಪ್ರಕರಣ-2- ಬೀದಿ ಪಾಲಾದ ತಾಯಿ:

ಹಿರಿಯ ನಾಗರಿಕ ಮಹಿಳೆಯೂ ತಾನೆ ಸಂಪಾಧಿಸಿದ ಆಸ್ತಿಯನ್ನು ತನ್ನ ಗಂಡು ಹಾಗು ಹೆಣ್ಣು ಮಕ್ಕಳಿಗೆ ಸಮನಾಗಿ ಹಂಚಿದ್ದು, ಇದೀಗ ಆಕೆಯನ್ನೇ ಯಾವೊಬ್ಬ ಮಗನು ನೋಡಿಕೊಳ್ಳದೇ ಬೀದಿ ಪಾಲಾಗಿದ್ದಾರೆ. ಆ ವೃದ್ಧೆ ಹಿರಿಯ ಸಹಾಯವಾಣಿಗೆ ಕರೆ ಮಾಡಿ, ತನ್ನ ಮೂರು ಗಂಡು ಮಕ್ಕಳ ವಿರುದ್ಧ ದೂರು ದಾಖಲಿಸಲಾಗಿದೆ. ಸಹಾಯವಾಣಿ ಸಿಬ್ಬಂದಿಯೂ ಆ ಮೂರು ಮಕ್ಕಳಿಗೆ ಸಮಾಲೋಚನೆಗೆ ಹಾಜರಾಗುವಂತೆ ನೋಟಿಸ್‌ ಕಳುಹಿಸಲಾಗಿದೆ.

ಸಮಾಲೋಚನೆಗೆ ಹಾಜರಾದ ಎಲ್ಲಾ ಮಕ್ಕಳಿಗೆ ತಮ್ಮ ತಾಯಿಯನ್ನು ಮನೆಯಲ್ಲಿ ಇಟ್ಟುಕೊಂಡು ನೋಡಿಕೊಳ್ಳುವಂತೆ ಸಲಹೆ ನೀಡಲಾಯಿತು. ಆದರೆ, ಯಾವ ಮಗನೂ ಇದಕ್ಕೆ ಒಪ್ಪಲಿಲ್ಲ. ಆದ್ದರಿಂದ ತಾಯಿಗೆ ಜೀವಿಸಲು ಒಂದು ಮನೆ ಹಾಗೂ ಒಂದು ಮನೆಯ ಬಾಡಿಗೆ ಸಂಪೂರ್ಣ ಹಣ ನೀಡಬೇಕು ಅಥವಾ ಪ್ರತಿ ಮಗನೂ ತಿಂಗಳಿಗೆ ತಲಾ 2,000 ರೂ.ನಂತೆ ಒಟ್ಟು 6 ಸಾವಿರ ರೂ. ಜೀವನಾಂಶವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡುವಂತೆ ತಿಳಿಸಲಾಗಿದೆ. ಆದರೆ, ಇದಕ್ಕೆ ವೃದ್ಧೆ ಜೀವನಾಂಶ ಬದಲಿಗೆ ವಾಸಿಸಲು ಒಂದು ಮನೆ ಹಾಗೂ ಜೀವನ ನಡೆಸಲು ಒಂದು ಮನೆಯ ಬಾಡಿಗೆ ಹಣ ಕೊಡುವುದಾಗಿ ಕೇಳಿರು ವುದು ಪ್ರಕರಣದಲ್ಲಿ ಉಲ್ಲೇಖವಾಗಿದೆ ಎಂದು ಸಹಾಯವಾಣಿ ಸಿಬ್ಬಂದಿಯೊಬ್ಬರು ತಿಳಿಸುತ್ತಾರೆ.

ಯಾವೆಲ್ಲಾ ರೀತಿಯಲ್ಲಿ ಹಿರಿಯರಿಗೆ ತೊಂದರೆ ?:

ಮಾನಸಿಕ ಕಿರುಕುಳ: ಮನೆಯಿಂದ ಹೊರಹಾಕುವ ಬೆದರಿಕೆ, ಅವಮಾನ ಮಾಡುವುದು, ಆಪ್ತರನ್ನು ಭೇಟಿ ಮಾಡುವುದನ್ನು ತಡೆಯುವುದು, ಸ್ವಂತ ನಿರ್ಧಾರಗಳನ್ನು ನಿರಾಕರಿಸುವುದು. ವೈದ್ಯಕೀಯ, ಭಾವನಾತ್ಮಕ ಅವಶ್ಯಕತೆ ಒದಗಿಸದಿರುವುದು.

ಹಣಕಾಸಿನ ದುರುಪಯೋಗ: ಪಿಂಚಣಿ ಅಥವಾ ಹಣವನ್ನು ಬ್ಯಾಂಕ್‌ ಖಾತೆಯಿಂದ ತೆಗೆದುಕೊಳ್ಳುವುದು, ಅನುಮತಿ ಇಲ್ಲದೇ ವಸ್ತುಗಳನ್ನು ಮಾರುವುದು, ಹಣ ಅಥವಾ ಆಸ್ತಿ ಜವಾಬ್ದಾರಿಯ ದುರುಪಯೋಗ, ವಿಲ್‌ ಮಾಡುವಂತೆ ಒತ್ತಡ ಇತ್ಯಾದಿ

ದೈಹಿಕ ಕಿರುಕುಳ: ಕಪಾಳಮೋಕ್ಷ, ತಳ್ಳುವುದು, ಹೊಡೆಯುವುದು ಅಥವಾ ನಿರ್ಬಂಧಿಸುವುದು. ಮಾನಸಿಕ- ದೈಹಿಕ ಸಮಸ್ಯೆಗಳು ಎದುರಾದಲ್ಲಿ ಹಿರಿಯರ ಸಹಾಯವಾಣಿ 1090ಗೆ ಕರೆ ಮಾಡಬಹುದು. ಮಾಹಿತಿಗೆ  ಡಿಡಿಡಿ sಠಿಟಟಛಿlಛಛಿrಚಚಿusಛಿ.ಜಿn ವೆಬ್‌ಸೈಟ್‌ ಸಂಪರ್ಕಿಸಿ.

21 ವರ್ಷಗಳಲ್ಲಿ ಮಕ್ಕಳಿಂದ ವಯೋವೃದ್ಧರಿಗೆ ಕಿರುಕುಳ ನೀಡುವ ಪ್ರಕರಣ ಹೆಚ್ಚಿವೆ. ಮಕ್ಕಳ ವಿರುದ್ಧ ಹೋಗುವುದು ತುಂಬಾ ಕಷ್ಟ ಆದ್ದರಿಂದ ಸಹಾಯವಾಣಿಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಿದೆ. –ಡಾ ರಾಧಾ ಎಸ್‌ ಮೂರ್ತಿ, ನೈಟಿಂಗೈಲ್ಸ್ ವೈದ್ಯಕೀಯ ಟ್ರಸ್ಟ್‌ನ ಟ್ರಸ್ಟಿ

– ಭಾರತಿ ಸಜ್ಜನ್‌

 

Advertisement

Udayavani is now on Telegram. Click here to join our channel and stay updated with the latest news.

Next