ಮಂಗಳೂರು: ನಗರದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನಡೆಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಮಂಗಳೂರು ಪಾಲಿಕೆಯ ಮುಂಭಾಗ ಕಾಂಗ್ರೆಸ್ ನಡೆಸುತ್ತಿರುದ್ದ ಪ್ರತಿಭಟನೆ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ರಾಜ್ಯಪಾಲರ ವಿರುದ್ಧ ಪ್ರಚೋದನಕಾರಿ ಹಾಗೂ ದಂಗೆ ಎಬ್ಬಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದು ಇದರ ಈ ಹೇಳಿಕೆ ವಿರುದ್ಧ ಅಖಿಲೇಶ್ ಎಂಬುವವರು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಅದರಂತೆ ಬರ್ಕೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಕಾಂಗ್ರೆಸ್ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಮಾತನಾಡಿದ್ದ ಐವನ್ ಡಿಸೋಜ ಅವರು ಒಂದು ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳದಿದ್ದರೆ ಬಾಂಗ್ಲಾದೇಶ ಪ್ರಧಾನಮಂತ್ರಿಗಳಿಗೆ ಬಂದ ಪರಿಸ್ಥಿತಿ ರಾಜ್ಯಪಾಲರ ಕಚೇರಿಗೂ ಬರಲಿದೆ, ನಮ್ಮ ಮುಂದಿನ ಹೋರಾಟ ಚಲೋ ಗವರ್ನರ್ ಆಫೀಸ್ ಎಂದು ಹೇಳಿಕೆ ನೀಡಿದ್ದರು, ಅಲ್ಲದೆ ಇತ್ತ ಐವನ್ ಡಿಸೋಜ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರೋರ್ವರು ಬಸ್ಸಿಗೆ ಕಲ್ಲೆಸೆದ ಘಟನೆಯೂ ನಡೆದು ಹಿಂಸಾರೂಪಕ್ಕೆ ತೆರಳಿತ್ತು ಎನ್ನಲಾಗಿದೆ.
ಈ ಎಲ್ಲ ವಿಚಾರ ಮುಂದಿಟ್ಟು ಅಖಿಲೇಶ್ ಅವರು ಬರ್ಕೆ ಪೊಲೀಸ್ ಠಾಣೆಯಲ್ಲಿ ಐವನ್ ಡಿಸೋಜ ಅವರ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ: Governor Post: ರಾಜ್ಯಪಾಲರು ಕರಡು ಸಮಿತಿಯ ಕುರುಡು ಕೂಸೇ? ಅಧಿಕಾರದ ವ್ಯಾಪ್ತಿ ಎಷ್ಟು?