ತುಮಕೂರು : ಜಿಲ್ಲೆಯಲ್ಲಿಯೂ ಮೇ 3ರ ವರೆಗೆ ಲಾಕ್ ಡೌನ್ ಮುಂದುವರೆಯಲಿದ್ದು ಸಾರ್ವಜನಿಕರು ಈ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಲಾಕ್‌ಡೌನ್ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವುದು. ಮಿತಿ ಮೀರಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲು ನಿರ್ದೇಶಿಸಲಾಗಿದೆ. ಸಾರ್ವಜನಿಕರು ಲಾಕ್‌ಡೌನ್ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದು, ಇದಕ್ಕಾಗಿ ಎಲ್ಲಾ ತಾಲೂಕುಗಳಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನೊಳಗೊಂಡ 5-6 ತಂಡಗಳ ಮೊಬೈಲ್ ಸ್ಕ್ವಾಡ್‌ಗಳನ್ನು ರಚನೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೋಮವಾರ ಕಳುಹಿಸಿದ್ದ ಮಾದರಿಗಳಲ್ಲಿ 326 ಮಾದರಿಗಳು ನೆಗೆಟಿವ್ ಬಂದಿವೆ. ಪ್ರಧಾನ ಮಂತ್ರಿಗಳು ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಿದ್ದು, ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು. ಕೋವಿಡ್-19 ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರಧಾನ ಮಂತ್ರಿಗಳು ಮೇ 3ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿರುವುದಾಗಿ ಘೋಷಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿಯೂ ಸಹ ಲಾಕ್ ಡೌನ್ ಪ್ರಕ್ರಿಯೆ ಮುಂದುವರಿಯುತ್ತದೆ. ಶಿರಾ ತಾಲೂಕಿನಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ಕೋವಿಡ್-19 ಪ್ರಕರಣ ಕಂಡು ಬಂದಿರುವ ಪ್ರದೇಶಗಳಲ್ಲಿರುವ ಜನರಿಗೆ ಜ್ವರ, ಕೆಮ್ಮು, ನೆಗಡಿ, ಶೀತ ಲಕ್ಷಣಗಳಿರುವ ರೋಗಿಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ ಎಂದರು.
ಅದರಂತೆ ಜಿಲ್ಲೆಯ ಎಲ್ಲಾ ತಾಲೂಕಿ ನಲ್ಲಿಯೂ ಕಟ್ಟುನಿಟ್ಟಾಗಿ ಲಾಕ್‌ಡೌನ್ ಅನ್ನು ಪಾಲಿಸಬೇಕು, ಗ್ರಾಮೀಣ ಮಟ್ಟದಲ್ಲಿ ವಿಲೇಜ್ ಟಾಸ್ಕ್ ಪೋರ್ಸ್ ಇನ್ನಷ್ಟು ಕಾರ್ಯ ಪ್ರವೃತ್ತರಾಗಬೇಕು. ಹೊರ ರಾಜ್ಯ ಅಥವಾ ಹಾಟ್ ಸ್ಪಾಟ್ ಜಿಲ್ಲೆ, ತಾಲೂಕುಗಳ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಇದ್ದರೂ ಲಾಕ್ ಡೌನ್ ಉಲ್ಲಂಘಿಸಿ ಸಣ್ಣ ಪುಟ್ಟ ರಸ್ತೆಗಳ ಮುಖಾಂತರ ಜನರು ತಮ್ಮ ಗ್ರಾಮಗಳಿಗೆ ಬರುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದು ನುಡಿದರು.
ಪ್ರತಿ ಗ್ರಾಮಗಳಲ್ಲಿ ಹೊರ ರಾಜ್ಯಗಳಿಂದ ಹಾಟ್‌ಸ್ಪಾಟ್ ಜಿಲ್ಲೆಗಳಿಂದ ಬರುವ ವ್ಯಕ್ತಿಗಳ ಮೇಲೆ ನಿಗಾವಹಿಸಿ ಅಂತಹವರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಬೇಕು ಎಂದು ಗ್ರಾಮ ಟಾಸ್ಕ್ಪೋರ್ಸ್‌ಗೆ ಸೂಚಿಸಲಾಗಿದೆ. ಅಂತಹವರನ್ನು ಹೋಂ ಕ್ವಾರೆಂಟೈನ್ ನಲ್ಲಿರಿಸಿ, ಅವರ ಮೆಡಿಕಲ್ ಸ್ಕ್ಯಾನಿಂಗ್ ಮಾಡಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದರು.