Advertisement

ಪತ್ತೆಯಾಗದ ವೃದ್ಧ ದಂಪತಿ ಕೊಲೆ ಪ್ರಕರಣ; ಪೊಲೀಸ್ ವೈಫಲ್ಯಕ್ಕೆ ಪ್ರತಿಭಟನೆ

10:26 PM Sep 21, 2022 | Vishnudas Patil |

ಸಾಗರ: ತಾಲೂಕಿನ ಬ್ಯಾಕೋಡಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಡೆದ ಸುಂದರ್ ಶೇಟ್ ಮತ್ತು ಸುಲೋಚನಾ ಎಂಬ ವೃದ್ಧ ದಂಪತಿಗಳ ಕೊಲೆಗಾರರನ್ನು ಪತ್ತೆ ಮಾಡದ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ಬುಧವಾರ ಬ್ಯಾಕೋಡು ಪೊಲೀಸ್ ಠಾಣೆ ಎದುರು ಸುಂದರ್ ಶೇಟ್ ಅಭಿಮಾನಿ ಬಳಗ ಮತ್ತು ವಿವಿಧ ಜನಪರ ಸಂಘಟನೆಗಳ ಆಶ್ರಯದಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೆಕೈ, ಬ್ಯಾಕೋಡು ಗ್ರಾಮದಲ್ಲಿ ವೃದ್ಧ ದಂಪತಿಗಳ ಕೊಲೆ ನಡೆದು ಎರಡು ವರ್ಷ ಕಳೆದಿದೆ. ಈತನಕ ಕೊಲೆಗಾರರು ಪತ್ತೆಯಾಗದೆ ಇರುವುದರಿಂದ ಹಿನ್ನೀರಿನ ಭಾಗದ ಜನರು ತೀವ್ರ ಆತಂಕದಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಪೊಲೀಸರು ಸಮರ್ಥರಾಗಿದ್ದರೂ ಈತನಕ ಕೊಲೆ ಪ್ರಕರಣ ಬೇಧಿಸದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿರುವುದರಿಂದ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸುವುದು ಸೂಕ್ತ. ಈ ಬಗ್ಗೆ ಗೃಹ ಸಚಿವರಿಗೆ ಸಹ ಮನವಿ ಮಾಡಲಾಗುತ್ತದೆ. ಕೊಲೆಗಾರರು ಎಷ್ಟೇ ಚಾಲಾಕಿಗಳಾಗಿದ್ದರೂ ಅವರನ್ನು ಪತ್ತೆ ಹಚ್ಚುವ ಆಧುನಿಕ ತಂತ್ರಜ್ಞಾನ ಪೊಲೀಸ್ ಇಲಾಖೆಯಲ್ಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕೊಲೆಪಾತಕರನ್ನು ಬಂಧಿಸಿ ಹಿನ್ನೀರು ಭಾಗಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಜನಪರ ಹೋರಾಟ ವೇದಿಕೆ ಅಧ್ಯಕ್ಷ ಹಾಗೂ ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು ಮಾತನಾಡಿ, ವೃದ್ಧ ದಂಪತಿಗಳ ಕೊಲೆ ನಡೆದು ಎರಡು ವರ್ಷವಾಯಿತು. ಹಿಂದೆ ಕುಮಾರಸ್ವಾಮಿ ಎಂಬುವವರನ್ನು ತನಿಖಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಅವರು ಪ್ರಕರಣವನ್ನು ಬೇಧಿಸದೆ ಇದ್ದುದರಿಂದ ಹೊಸ ತನಿಖಾಧಿಕಾರಿಯನ್ನು ನೇಮಕ ಮಾಡಲಿ. ಒಂದೊಮ್ಮೆ ಪೊಲೀಸರಿಂದ ಪ್ರಕರಣ ಬೇಧಿಸಲು ಸಾಧ್ಯವಾಗದೆ ಹೋದಲ್ಲಿ ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರ ಪ್ರಕರಣವನ್ನು ಹಸ್ತಾಂತರಿಸಬೇಕು. ಕೊಲೆಗಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಕಾನೂನಾತ್ಮಕ ಶಿಕ್ಷೆ ಕೊಡಿಸುವ ಮೂಲಕ ದಂಪತಿಗಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಾಗರಾಜ್ ಬೊಬ್ಬಿಗೆ, ಶ್ರೀದೇವಿ ರಾಮಚಂದ್ರ, ಪದ್ಮರಾಜ್, ದೇವರಾಜ್, ಸುಧೀಂದ್ರ ಹೊಸಕೊಪ್ಪ, ಹರೀಶ್ ಗಂಟೆ, ಗಣಪತಿ ಹಿನ್ಸೋಡಿ, ಶ್ರೀನಿವಾಸ್ ಗದ್ದೆಮನೆ, ವಾಸಂತಿ ಜೈನ್, ಶ್ರೀಧರ್ ಚುಟ್ಟಿಕೆರೆ, ಮಂಜಯ್ಯ ಜೈನ್, ಸವಿತಾ ದೇವರಾಜ್, ಲಿಲ್ಲಿ ಮನೋಹರ್, ಜಾಕಿ ಗಣೇಶ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next