Advertisement
ಸರ್ಜನ್ ಹೇಳಿಕೆಜಿಲ್ಲಾ ಶಸ್ತ್ರಚಿಕಿತ್ಸಕರು ಪ್ರಕಟನೆ ನೀಡಿದ್ದು, ಕೋವಿಡ್ ಆಸ್ಪತ್ರೆ ಯಲ್ಲಿ ಮೃತಪಟ್ಟ ಬಳಿಕ ಮೃತದೇಹವನ್ನು ಕವರ್‌ನಲ್ಲಿ ಇರಿಸಿ 9 ದೇಹಗಳನ್ನು ಕಾಪಿಡಬಲ್ಲ ಜಿಲ್ಲಾಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸಲಾಗಿತ್ತು. ಮೃತದೇಹಕ್ಕೆ ಕಟ್ಟಿದ ಟ್ಯಾಗ್ ಕವರ್‌ನ ಒಳಗೆ ಇದ್ದುದರಿಂದ ಕರ್ತವ್ಯದಲ್ಲಿದ್ದ ಡಿ ಗ್ರೂಪ್ ನೌಕರನಿಂದ ಪ್ರಮಾದವಾಗಿದೆ. ತನಿಖೆ ನಡೆಸಿ ಸೂಕ್ತ ಕ್ರಮ ಜರಗಿಸಲಾಗುವುದು. ವೈದ್ಯರು, ಸಿಬಂದಿ ಕೊರೊನಾ ಸಂದರ್ಭ ಒತ್ತಡದಿಂದ ಕೆಲಸ ಮಾಡುತ್ತಿದ್ದು ಸಿಬಂದಿ ಕೊರತೆ ನಡುವೆಯೂ ರಜೆ ಇಲ್ಲದೆ 24 ತಾಸು ದುಡಿಯುತ್ತಿದ್ದಾರೆ. ಸಾರ್ವಜನಿಕ ದೂರುಗಳಿಂದ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಖನ್ನತೆ ಎದುರಿಸುವಂತಾಗಿದೆ. ರಾಜೀನಾಮೆ ಸಲ್ಲಿಸಿ ತೆರಳಲು ಅನೇಕರು ಸಿದ್ಧರಾಗಿದ್ದಾರೆ. ಆದ್ದರಿಂದ ವೈದ್ಯಕೀಯ ಸಿಬಂದಿಯ ಮನೋಸ್ಥೈರ್ಯ ಕುಂದಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದಿದ್ದಾರೆ.
ರೋಗಿ ದಾಖಲಾದ ಉಡುಪಿಯ ಡಾ| ಟಿ.ಎಂ.ಎ. ಪೈ ಆಸ್ಪತ್ರೆ ವತಿಯಿಂದ ಹೇಳಿಕೆ ನೀಡಲಾಗಿದ್ದು, ರೋಗಿ ಜು. 30ರಂದು ದಾಖಲಾಗಿದ್ದು ಕೋವಿಡ್-19 ಸೋಂಕಿತರಾ ಗಿದ್ದರು. ಬರುವಾಗ ನ್ಯುಮೋನಿಯಾ, ತೀವ್ರವಾದ ಹೈಪೊಕ್ಸಿಯಾ (ರಕ್ತದಲ್ಲಿ ಆಮ್ಲಜನಕ ಕೊರತೆ) ಇತ್ತು. ಸೂಕ್ತ ಚಿಕಿತ್ಸೆ ಪ್ರಾರಂಭಿಸಲಾಗಿತ್ತು. ಅವರು ಕಬ್ಬಿಣದ ಕೆಲಸ ಮಾಡುವವರಾಗಿದ್ದುದರಿಂದ ಶ್ವಾಸಕೋಶ ಮತ್ತು ತೀವ್ರವಾದ ಉಸಿರಾಟದ ತೊಂದರೆ ದಿನ ಕಳೆದಂತೆ ಹೆಚ್ಚಾಯಿತು. ಚಿಕಿತ್ಸೆ ನೀಡಿದ ವೈದ್ಯರ ತಂಡವು ರೋಗಿಯ ಪುತ್ರ ಮತ್ತು ಸೋದರಳಿಯನೊಂದಿಗೆ ಹಲವು ಬಾರಿ ರೋಗಿಯ ಸ್ಥಿತಿ ಬಗ್ಗೆ ಮಾತಾಡಿದ್ದಾರೆ. ರೋಗಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ದಾಖಲಾಗಿದ್ದರಿಂದ ಯಾವುದೇ ರೀತಿಯಲ್ಲಿ ಹಣ ಪಾವತಿಸುವಂತೆ ಸಂಬಂಧಿಕರಲ್ಲಿ ಹೇಳಿಲ್ಲ. ಆ. 23ರ ಮುಂಜಾವ 4.43ಕ್ಕೆ ಸಾವು ಸಂಭವಿಸಿದ್ದು ಸಂಬಂಧಿಕರಿಗೆ ಹಸ್ತಾಂತರಿಸಲು 5-6 ಗಂಟೆಗಳು ಬೇಕಾದ್ದರಿಂದ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಹಸ್ತಾಂತರಿಸಲಾಗಿದೆ. ಸರಿಯಾದ ಕಾರಣ ತಿಳಿಯದೆ, ರೋಗಿಯ ಕುಟುಂಬ ಸದಸ್ಯರು, ಪುತ್ರ ಚಿಕಿತ್ಸೆ ನೀಡಿದ್ದ ವೈದ್ಯರು ಮತ್ತು ಆಸ್ಪತ್ರೆಯ ವಿರುದ್ಧ ತಪ್ಪಾದ ಮತ್ತು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಆ. 5ರಿಂದ ಈ ವರೆಗೆ ಈ ಆಸ್ಪತ್ರೆಯಲ್ಲಿ ಬೇರೆ ಯಾವುದೇ ಮರಣ ಸಂಭವಿಸಿಲ್ಲದ ಕಾರಣ ನಮ್ಮ ಆಸ್ಪತ್ರೆಯಿಂದ ಬೇರೆ ಮೃತದೇಹವನ್ನು ಕಳುಹಿಸುವ ಸಾಧ್ಯತೆಯೇ ಇಲ್ಲ. ನಾವು ಕೋವಿಡ್-19ಕ್ಕೆ ಮೀಸಲಾದ ಆಸ್ಪತ್ರೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬರಿಗೆ ಅಪಾಯವಿದ್ದರೂ ಕೆಲಸ ಮಾಡುತ್ತಿದ್ದೇವೆ ಎಂದು ವೈದ್ಯಕೀಯ ಅಧೀಕ್ಷಕರು ಹೇಳಿಕೆ ನೀಡಿದ್ದಾರೆ. ದೃಢೀಕರಣದೊಂದಿಗೆ ಶವ ಹಸ್ತಾಂತರ
ಶವ ಅದಲು ಬದಲು ಘಟನೆಗೆ ಗೃಹಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ ದರ್ಜೆ ಸಿಬಂದಿ ಹಾಗೂ ಆ್ಯಂಬುಲೆನ್ಸ್ ಸಿಬಂದಿ ಮಾಡಿದ ತಪ್ಪಿನಿಂದಾಗಿ ಇಡೀ ಜಿಲ್ಲೆ ತಲೆತಗ್ಗಿಸುವಂತಾಗಿದೆ. ಇನ್ನು ಮಂದೆ ಬೆಳಗ್ಗೆ 9ರಿಂದ ಸಂಜೆ 6 ಗಂಟೆಯ ಒಳಗೆ ಮಾತ್ರ ಶವ ಹಸ್ತಾಂತರ ಪ್ರಕ್ರಿಯೆಯನ್ನು ಮನೆಯವರ ಸಮ್ಮುಖದಲ್ಲಿ ಮಾಡಲಾಗುವುದು. ಮನೆಯವರ ದೃಢೀಕರಣದ ಜತೆಗೆ ಆಯಾ ತಾಲೂಕಿನ ಆರೋಗ್ಯ ಅಧಿಕಾರಿಯ ಸಮ್ಮುಖದಲ್ಲಿಯೇ ಶವ ಪಡೆದುಕೊಳ್ಳಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.