ಬೆಂಗಳೂರು: ಡಿ-ನೋಟಿಫಿಕೇಷನ್ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಖಾಸಗಿ ದೂರು ರದ್ದುಗೊಳಿಸಬೇಕು ಹಾಗೂ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ನಗರದ ದೇವರಬೀಸನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ವಶಪಡಿಸಿಕೊಂಡಿದ್ದ ಜಮೀನನ್ನು ಬಿಎಸ್‌ವೈ ಉಪಮುಖ್ಯಮಂತ್ರಿ ಆಗಿದ್ದಾಗ ಅಕ್ರಮ ಡಿ-ನೋಟಿಫಿಕೇಷನ್ ಮಾಡಿದ್ದಾರೆ ಎಂದು ವಾಸುದೇವ ರೆಡ್ಡಿ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯು ತ್ತಿದೆ. ಇದನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿದೆ.
ನಗರದ ವೈಟ್ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯ ಜಾಗವನ್ನು ‘ಐಟಿ ಕಾರಿಡಾರ್’ ಎಂದು ರಾಜ್ಯ ಸರ್ಕಾರ 2000-2001ರಲ್ಲಿ ಘೋಷಿಸಿತ್ತು. ಅದರಂತೆ ಮಾರತಹಳ್ಳಿ, ಬೆಳ್ಳಂದೂರು, ಸರ್ಜಾ ಪುರ, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ 434 ಎಕರೆ ಪ್ರದೇಶವನ್ನು ಸ್ವಾಧೀನಕ್ಕೆ ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು.
ಆದರೆ, ಬಿ.ಎಸ್.ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಕೆಐಎಡಿಬಿ ವಶಪಡಿಸಿಕೊಂಡಿದ್ದ ದೇವರಬೀಸನಹಳ್ಳಿಯ ಸರ್ವೇ ನಂ ಸರ್ವೇ ನಂ 49ರ 4.30 ಎಕರೆ, ಬೆಳ್ಳಂದೂರು ಗ್ರಾಮದ ಸರ್ವೇ ನಂ 46/1ರ 1.17 ಎಕರೆ, ಸರ್ವೇ ನಂ 18ರ 1.10 ಎಕರೆ, ಸರ್ವೇ ನಂ 10ರ 33 ಗುಂಟೆ ಜಾಗವನ್ನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಿ ವಾಸುದೇವ ರೆಡ್ಡಿ ಎಂಬುವರು 2013ರ ಜುಲೈ 10ರಂದು ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.
ದೂರು ಕುರಿತು ತನಿಖೆ ನಡೆಸುವಂತೆ ಲೋಕಾ ಯುಕ್ತ ವಿಶೇಷ ನ್ಯಾಯಾಲಯವು 2015ರ ಫೆ.18ರಂದು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಅದರಂತೆ ಪೊಲೀಸರು 2015ರ ಫೆ.21ರಂದು ಎಫ್ಐಆರ್ ದಾಖಲಿಸಿ, ಯಡಿಯೂರಪ್ಪ ಅವರನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಯಡಿಯೂರಪ್ಪ ಅವರು, ತಮ್ಮ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ದೂರು ದಾಖಲಿಸಿದ್ದು, ಅದನ್ನು ವಿಶೇಷ ನ್ಯಾಯಾಯಲವು ವಿಚಾರಣೆಗೆ ಅಂಗೀಕರಿಸಿರುವುದು ಕಾನೂನು ಬಾಹಿರ ಕ್ರಮ. ಸುಪ್ರೀಂ ಕೋರ್ಟ್ ಆದೇಶ ಮೀರಿ ದೂರುದಾರ ನೇರವಾಗಿ ವಿಶೇಷ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ. ಇದು ಕಾನೂನು ಬಾಹಿರ. ಹಾಗಾಗಿ ಪ್ರಕರಣ ರದ್ದುಪಡಿಸುವಂತೆ ಕೋರಿದ್ದಾರೆ.