Advertisement

ನಿವೃತ್ತ IAS ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದು

12:46 AM Sep 14, 2023 | Team Udayavani |

ಬೆಂಗಳೂರು: “ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ’ಯ ಅನುದಾನ ದುರ್ಬಳಕೆ ಆರೋಪದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿಗಳಾದ ಅಮಿತಾ ಪ್ರಸಾದ್‌, ಎನ್‌.ವಿ. ರಮಣರೆಡ್ಡಿ ಹಾಗೂ ಟಿ.ಎಂ. ವಿಜಯ್‌ ಭಾಸ್ಕರ್‌ ಅವರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

Advertisement

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಮೂವರು ನಿವೃತ್ತ ಐಎಎಸ್‌ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣ ರದ್ದುಪಡಿಸಿ ಆದೇಶಿಸಿದೆ. ಅರ್ಜಿದಾರರ ಪರ ವಕೀಲ ಪಿ. ಪ್ರಸನ್ನ ಕುಮಾರ ವಾದ ಮಂಡಿಸಿದ್ದರು.

ಅರ್ಜಿದಾರರಾದ ಅಮಿತಾ ಪ್ರಸಾದ್‌, ರಮಣರೆಡ್ಡಿ, ವಿಜಯ್‌ ಭಾಸ್ಕರ್‌ ಅವರ ವಿರುದ್ಧ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ನ್ಯಾಯಾಲಯದಲ್ಲಿ (ಭ್ರಷ್ಟಾಚಾರ ತಡೆ ಕಾಯ್ದೆ ವಿಶೇಷ ನ್ಯಾಯಾಲಯ) ನಡೆಯುತ್ತಿರುವ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆ ರದ್ದುಗೊಳಿಸಲಾಗಿದೆ. ಆದರೆ, ಈ ಆದೇಶವು ಅರ್ಜಿದಾರರನ್ನು ಹೊರತುಪಡಿಸಿ ಪ್ರಕರಣದ ಇತರ ಆರೋಪಿಗಳ ವಿಚಾರಣೆಗೆ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಮೂವರು ಅಧಿಕಾರಿಗಳ ವಿರುದ್ಧ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಪೂರ್ವಾನುಮತಿ ಪಡೆದುಕೊಂಡಿಲ್ಲ. ಯೋಜನೆಯ ಅನುಷ್ಠಾನಕ್ಕೆ 2010ರ ಅ. 1ರಂದು ಕೇಂದ್ರ ಸರಕಾರದ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಸಚಿವಾಲಯ, ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ನಡುವೆ ತ್ರಿಪಕ್ಷೀಯ ಒಪ್ಪಂದ ಆಗಿತ್ತು. ಆದರೆ, ಮೂವರು ಅರ್ಜಿದಾರರ ಪೈಕಿ ಯಾರೊಬ್ಬರೂ ಆ ತ್ರಿಪಕ್ಷೀಯ ಒಪ್ಪಂದದ ಪಾಲುದಾರರು ಅಲ್ಲ. ಅಮಿತಾ ಪ್ರಸಾದ್‌ 2011ರ ಮೇ 16ರಿಂದ 2012ರ ಜೂನ್‌ 8ರವರೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ರಮಣರೆಡ್ಡಿ 2012ರ ಸೆ.22ರಿಂದ 2013ರ ಮೇ 31 ಹಾಗೂ ವಿಜಯ್‌ ಭಾಸ್ಕರ್‌ ಅವರು 2013ರ ಮೇ 31ರಿಂದ 2015ರ ಎಪ್ರಿಲ್‌ 24ರ ವರೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದರು ಎಂದರು ಆದೇಶದಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next