Advertisement

Puneeth Kerehalli: ಹಿಂದೂ ಕಾರ್ಯಕರ್ತ ಪುನೀತ್‌ ವಿರುದ್ಧ ಆತ್ಮಹತ್ಯೆ ಯತ್ನ ಕೇಸು

11:58 AM Oct 09, 2023 | Team Udayavani |

ಬೆಂಗಳೂರು: ತಮ್ಮ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸ್ಪಷ್ಟೀಕರಣ ನೀಡವಂತೆ ಕಳೆದ 8 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.

Advertisement

ಅ.3ರಂದು ಉಪ್ಪಾರಪೇಟೆ ಠಾಣೆ ಪೊಲೀಸರು ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಪುನೀತ್‌ ಕೆರೆಹಳ್ಳಿ ಅವರನ್ನು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಉಪವಾಸ ಅಂತ್ಯಗೊಳಿಸಿ ಆಹಾರ-ನೀರು ಸೇವಿಸುವಂತೆ ವೈದ್ಯರು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆಹಾರ-ನೀರು ಸೇವಿಸದಿದ್ದಲ್ಲಿ ಜೀವಕ್ಕೆ ಅಪಾಯವಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.

ಆದರೂ ಪುನೀತ್‌ ಕೆರೆಹಳ್ಳಿ, ಸರ್ಕಾರ ತಮ್ಮ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳ ಸಂಬಂಧ ಸ್ಪಷ್ಟೀಕರಣ ನೀಡುವವರೆಗೂ ನಾನು ಆಹಾರ-ನೀರು ಸೇವಿಸುವುದಿಲ್ಲ. ನಾನು ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯುವುದಿಲ್ಲ. ನನ್ನ ಪ್ರಾಣ ಹೋದರೂ ಪರವಾಗಿಲ್ಲ. ನಾನು ಹೀಗೆಯೇ ಇರುತ್ತೇನೆ ಎಂದು ಪುನೀತ್‌ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ನೀಡಿದ ವರದಿ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು, ಪುನೀತ್‌ ಕೆರೆಹಳ್ಳಿ ವಿರುದ್ಧ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಕೊಲೆ, ಬೆದರಿಕೆ, ಸುಲಿಗೆ ಸೇರಿ 10 ಪ್ರಕರಣಗಳ ಆರೋಪಿಯಾಗಿರುವ ಪುನೀತ್‌ ಕೆರೆಹಳ್ಳಿ ವಿರುದ್ಧ ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆ ಜಾರಿಗೊಳಿಸಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಹೊರಗಡೆ ಬಂದ ಪುನೀತ್‌ ಕೆರೆಹಳ್ಳಿ ಸರ್ಕಾರ ತನ್ನ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next