ಬೆಂಗಳೂರು, ಜ. 8: ಭಾರತೀಯ ಜಲ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಬಂಧಿತರಾಗಿದ್ದ 15 ಮಂದಿ ಇರಾನಿ ಪ್ರಜೆಗಳ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಅಬೂಬಕರ್ ಅನ್ಸಾರಿ ಮಿಯಾ, ಮೂಸಾ ದೆಹದಾನಿ ಸಹಿತ 15 ಮಂದಿ ಇರಾನಿ ಪ್ರಜೆಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಸೂರರ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡಿ ಬಂಧಿತರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.
ಭಾರತದ ಜಲ ಗಡಿ ಪ್ರದೇಶದೊಳಗೆ ಪ್ರವೇಶಿಸಿ ಲಕ್ಷದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಇರಾನ್‌ನ 15 ಮೀನುಗಾರರನ್ನು 2019ರ ಅ. 21ರಂದು ವಶಕ್ಕೆ ಪಡೆಯಲಾಗಿತ್ತು. ಕೋಸ್ಟ್‌ಗಾರ್ಡ್ ಡೆಪ್ಯೂಟಿ ಕಮಾಂಡೆಂಟ್ ಹಾಗೂ ಬೋರ್ಡಿಂಗ್ ಅಧಿಕಾರಿ ಕುಲದೀಪ್ ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಕರಾವಳಿ ಕಾವಲು ಪಡೆ ಪೊಲೀಸರು ಅಬೂಬಕ್ಕರ್ ಅನ್ಸಾರಿ ಮೀಯಾ, ಮೂಸಾ ದೆಹದಾನಿ, ಅಜಂ ಅನ್ಸಾರಿ, ಶಿದ್ ಬಾಚೂ, ಅಬ್ದುಲ್ ಮಜೀದ್, ಮಜೀದ್ ರೆಹಮಾನ್ ದಾವೂದ್, ಮಹಮ್ಮದ್ ಇಸಾಕ್, ಕರೀಂ ಬಕ್ಸ್ ದೂರ್ಜಾದೆ, ಮಹಮ್ಮದ್ ಬಲೂಚ್, ಬಮನ್, ಅಬ್ದುಲ್ ಗನಿ ಬಾರ್ಪೂ, ನಸೀರ್ ಭದ್ರುಚ್, ಅನ್ವರ್ ಬಲೂಚ್ ನಭೀ ಬಕ್ಷ ಮತ್ತು ಯೂಸುಫ್ ಜಹಾನಿ ಎಂಬ ಮೀನುಗಾರರನ್ನು ಬಂಧಿಸಲಾಗಿತ್ತು. ಇವರ ವಿರುದ್ಧ ಮಂಗಳೂರಿನ 3ನೇ ಜೆಎಂಎಫ್ಸಿ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಕೊರೊನಾ ಹಿನ್ನೆಲೆಯಲ್ಲಿ ಎಲ್ಲರನ್ನೂ ಬೆಂಗಳೂರು ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾರಣಾಂತರಗಳಿಂದ ಮತ್ತು ಪ್ರಕೃತಿ ವಿಕೋಪದಿಂದ ಮೀನುಗಾರರು ಭಾರತದ ಜಲ ಗಡಿಯೊಳಗೆ ಪ್ರವೇಶಿಸಿದ್ದಾರೆ. ಇದು ಉದ್ದೇಶಪೂರ್ವಕ ಅಥವಾ ದುರುದ್ದೇಶದಿಂದ ಕೂಡಿದ ನಡವಳಿಕೆ ಅಲ್ಲ. ಹಾಗಾಗಿ, ಮೀನುಗಾರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸರಿಯಲ್ಲ. ಅನೇಕ ಬಾರಿ ಭಾರತದ ಮೀನುಗಾರರು ಬೇರೆ ದೇಶದ ಜಲ ಗಡಿ ಪ್ರವೇಶ ಮಾಡಿದ್ದ ಉದಾಹರಣೆಗಳಿವೆ. ಇಂತಹ ಸಂದರ್ಭದಲ್ಲಿ ಆ ದೇಶಗಳು ಕ್ರಿಮಿನಲ್ ಪ್ರಕರಣಗಳು ದಾಖಲಿಸಿದ ನಿದರ್ಶನಗಳು ವಿರಳ. ಆದ್ದರಿಂದ ಇರಾನಿ ದೇಶದ ಮೀನುಗಾರರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಮನವಿ ಮಾಡಿದರು. ಅರ್ಜಿದಾರರ ಪರ ಕೇತನ್ ಬಂಗೇರ ಮತ್ತು ಅಭಿಷೇಕ್ ಮಾರ್ಲ ವಾದ ಮಂಡಿಸಿದ್ದರು.