ಬೆಂಗಳೂರು: ಪತ್ನಿಯ ಮೇಲೆ ಪರ ಪುರುಷರ ಕಣ್ಣು ಬೀಳದಂತೆ ಪತಿ ಸದಾ ಎಚ್ಚರಿಕೆ ವಹಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಪತಿ ಮಹಾಶಯ ತನ್ನ ಸ್ನೇಹಿತರ ಜತೆಗೆ ಹಾಸಿಗೆ ಹಂಚಿಕೊಳ್ಳುವಂತೆ ಬೆದರಿಸಿ, ಆ ಖಾಸಗಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಟೆಕಿ ಪತ್ನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆಂಬ ಆರೋಪ ಕೇಳಿ ಬಂದಿದೆ.
ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಥಣಿಸಂದ್ರದ ನಿವಾಸಿ 34 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ ಜಾನ್ ಪಾಲ್ (36) ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಮನೆಗೆ ಹೋಗುವ ಕಾರ್ಯಕ್ರಮ ಇದೆ : ಸಿಎಂ ಬೊಮ್ಮಾಯಿ
ಏನಿದು ಪ್ರಕರಣ?: ದೂರುದಾರ ಮಹಿಳೆಯು 2011ರಲ್ಲಿ ಜಾನ್‌ಪಾಲ್‌ನನ್ನು ವಿವಾಹವಾಗಿದ್ದಳು. ದಂಪತಿಗೆ ಒಬ್ಬ ಮಗನಿದ್ದಾನೆ. ಮದುವೆಯಾದಾಗಿನಿಂದ ಜಾನ್ ಮದ್ಯ ಸೇವಿಸಿ ಹಲ್ಲೆ ನಡೆಸುತ್ತಿದ್ದ. 2015ರಲ್ಲಿ ತನ್ನ ಸ್ನೇಹಿತರೊಂದಿಗೆ ಮಲಗುವಂತೆ ಒತ್ತಾಯಿಸಿದ್ದು, ನಾನು ಒಪ್ಪದಿದ್ದಾಗ ಹಲ್ಲೆ ನಡೆಸಿದ್ದ. ಪತಿಯ ಹಿಂಸೆ ತಾಳಲಾರದೇ ಪತಿಯ ಇಬ್ಬರು ಸ್ನೇಹಿತರ ಜತೆಗೆ ಹಲವಾರು ಬಾರಿ ದೈಹಿಕ ಸಂಪರ್ಕ ಹೊಂದಿದ್ದೇನೆ. ಪತಿಯ ಸ್ನೇಹಿತರ ಜೊತೆಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಹಾಗೂ ಫೋಟೋವನ್ನು ಪತಿ ಜಾನ್‌ಪಾಲ್ ತನಗೆ ಗೊತ್ತಾಗದಂತೆ ಆತನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ. ಇತ್ತೀಚೆಗೆ ನನಗೆ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವುದು ಇಷ್ಟವಾಗದೆ ಇದರಿಂದ ದೂರ ಉಳಿದಿದ್ದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖೀಸಿದ್ದಾಳೆ.
ವಿಚ್ಛೇದನ ಕೇಳಿದ್ದಕ್ಕೆ ಬ್ಲ್ಯಾಕ್‌ಮೇಲ್: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸಹೋದರಿ 2019ರಿಂದ ನಮ್ಮೊಂದಿಗೆ ವಾಸಿಸುತ್ತಿದ್ದಳು. ಇಷ್ಟಕ್ಕೆ ಸುಮ್ಮನಾಗದ ಪತಿ ನಿನ್ನ ತಂಗಿಯನ್ನು ನನ್ನ ಜೊತೆ ಮಲಗಲು ಹೇಳು ಎಂದು ಒತ್ತಾಯಿಸುತ್ತಿದ್ದ. ಇದರಿಂದ ಮನನೊಂದು ಪತಿಯಿಂದ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದೆ. ವಿಚ್ಛೇದನ ಕೇಳಿದಾಗಲೆಲ್ಲಾ ಖಾಸಗಿ ವಿಡಿಯೋ ತೋರಿಸಿ ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ. ಡಿ.4ರಂದು ಮತ್ತೆ ವಿಚ್ಛೇದನ ಕೇಳಿದಾಗ 2 ಖಾಸಗಿ ಫೋಟೋ ಗಳನ್ನು ನನ್ನ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ.
ಇವುಗಳನ್ನು ನಿನ್ನ ಸ್ನೇಹಿತರಿಗೆ, ನಿನ್ನ ತಂದೆ ತಾಯಿಗೆ ಕಳುಹಿಸಿ, ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಪತಿ ಮದ್ಯಪಾನದ ಜತೆಗೆ ಗಾಂಜಾ ಸೇವನೆ ಮಾಡುತ್ತಿದ್ದು, ಮನೆಯಲ್ಲಿ 2 ಪಾಟ್‌ಗಳಲ್ಲಿ ಗಾಂಜಾ ಸಸ್ಯ ಬೆಳೆಸಿದ್ದಾನೆಂದು ಪತ್ನಿ ದೂರಿನಲ್ಲಿ ಉಲ್ಲೇಖೀಸಿದ್ದಾಳೆ.