ಹೊಸದಿಲ್ಲಿ: ಅಥ್ಲೆಟಿಕ್ಸ್ ತರಬೇತುದಾರನ ದೂರಿನ ನಂತರ ಹರಿಯಾಣದ ಕ್ರೀಡಾ ಸಚಿವ, ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಸಂದೀಪ್ ಸಿಂಗ್ ಅವರು ತನ್ನ ಮನೆಗೆ ಆಹ್ವಾನಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ತನ್ನ ದೂರಿನಲ್ಲಿ ಕೋಚ್ ಆರೋಪಿಸಿದ್ದಾರೆ.
ವಿರೋಧ ಪಕ್ಷವಾದ ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್‌ಎಲ್‌ಡಿ) ಕಚೇರಿಯಲ್ಲಿ ದೂರುದಾರ ಮಹಿಳೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದರು. ಮನೋಹರ್ ಲಾಲ್ ಖಟ್ಟರ್ ಸರ್ಕಾರವು ಸಂದೀಪ್ ಸಿಂಗ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದ್ದರು.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಕೂಡ ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದರು.
ಇದನ್ನೂ ಓದಿ:ಏರ್ ಫೈರ್ ಮಾಡಲು ಹೋಗಿ ಎದುರಿದ್ದ ಯುವಕನಿಗೆ ಗುಂಡೇಟು; ಫೈರ್ ಮಾಡಿದಾತ ಹೃದಯಾಘಾತದಿಂದ ಮೃತ್ಯು!
ಸಂದೀಪ್ ಸಿಂಗ್ ಅವರು ಮೊದಲು ನನ್ನನ್ನು ಜಿಮ್ ನಲ್ಲಿ ನೋಡಿದ್ದು, ಬಳಿಕ ಇನ್ಸ್ಟಾಗ್ರಾಂನಲ್ಲಿ ಸಂಪರ್ಕಿಸಿದ್ದರು. ನಂತರ ಭೇಟಿಯಾಗಲು ಒತ್ತಾಯಿಸುತ್ತಿದ್ದರು. ಒಮ್ಮೆ ಇನ್ಸ್ಟಾದಲ್ಲಿ ಮೆಸೇಜ್ ಮಾಡಿ, ನನ್ನ ನ್ಯಾಶನಲ್ ಗೇಮ್ಸ್ ಗಳ ಪ್ರಮಾಣಪತ್ರ ಬಾಕಿ ಇದೆ, ಇದೇ ವೇಳೆ ಭೇಟಿಯಾಗವ ಎಂದಿದ್ದರು ಎಂದು ಮಹಿಳಾ ಕೋಚ್ ದೂರಿನಲ್ಲಿ ಹೇಳಿದ್ದಾರೆ.
ಕೊನೆಗೆ ತನ್ನ ಬಳಿಯಿದ್ದ ಇತರ ಕೆಲವು ದಾಖಲೆಗಳೊಂದಿಗೆ ಆತನ ನಿವಾಸ-ಕ್ಯಾಂಪ್ ಕಚೇರಿಯಲ್ಲಿ ಭೇಟಿಯಾಗಲು ಒಪ್ಪಿಕೊಂಡೆ. ತಾನು ಅಲ್ಲಿಗೆ ಹೋದಾಗ ಸಚಿವರು ಲೈಂಗಿಕ ದುರ್ವರ್ತನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.