ಹೊಸದಿಲ್ಲಿ: 2020 ಮತ್ತು 2021 ರ ನಡುವೆ ತನ್ನ ಸ್ನೇಹಿತನ ಮಗಳ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಕ್ಕಾಗಿ ಪೋಕ್ಸೊ ಕಾಯ್ದೆಯಡಿ ದೆಹಲಿ ಸರಕಾರಿ ಅಧಿಕಾರಿಯ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ದೆಹಲಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಹುದ್ದೆ ನಿರ್ವಹಿಸುತ್ತಿದ್ದ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆತನ ಪತ್ನಿಯ ಮೇಲೂ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿದೆ.
2020 ರಲ್ಲಿ, ಈಗ 12 ನೇ ತರಗತಿಯಲ್ಲಿರುವ ವಿದ್ಯಾರ್ಥಿನಿಯ ತಂದೆ ಅಪಘಾತದಲ್ಲಿ ನಿಧನ ಹೊಂದಿದ್ದು, ಕುಟುಂಬವು ಸಾಂತ್ವನವನ್ನು ಹುಡುಕುತ್ತಿದ್ದಾಗ ಅತ್ಯಾಚಾರ ಎಸಗಲಾಗಿದೆ. ಬಾಂಧವ್ಯವನ್ನು ಬೆಳೆಸಿಕೊಂಡು ಸಹಾಯದ ನೆಪದಲ್ಲಿ ಬಾಲಕಿಯನ್ನು ಉಪ ನಿರ್ದೇಶಕ ತನ್ನ ಮನೆಗೆ ಕರೆತಂದಿದ್ದಾನೆ.
ಎಫ್‌ಐಆರ್‌ನ ಪ್ರಕಾರ, ಉಪನಿರ್ದೇಶಕ 2020 ರಿಂದ 2021 ರವರೆಗೆ 15 ವರ್ಷದ ಬಾಲಕಿಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ಬಾಲಕಿ ಗರ್ಭಿಣಿ ಎಂದು ಉಪ ನಿರ್ದೇಶಕನ ಹೆಂಡತಿಗೆ ತಿಳಿದಾಗ ಆಕೆ ಅಪರಾಧವನ್ನು ವರದಿ ಮಾಡುವ ಬದಲು, ವಿಷಯವನ್ನು ಮುಚ್ಚಿಡಲು ಗರ್ಭಪಾತಕ್ಕೆ ಔಷಧಿಗಳನ್ನು ನೀಡಿದ್ದಾಳೆ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.